

ನವದೆಹಲಿ: ಆಸ್ಸಾಂನ ನಿಷೇಧಿತ ದಂಗೆಕೋರರ(ಉಗ್ರರು) ಗುಂಪಾಗಿದ್ದ ನಿಷೇಧಿತ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ನ ಎಲ್ಲ ಬಣಗಳೊಂದಿಗೆ ಕೇಂದ್ರ ಸರ್ಕಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಒಪ್ಪಂದಕ್ಕೆ ಸಹಿ ಮಾಡಿದ್ದು, ಇದರ ಅನ್ವಯ ಎನ್ಡಿಎಫ್ಬಿ ಸಂಘಟನೆಯ 1550 ಕಾರ್ಯಕರ್ತರು 130 ಶಸ್ತ್ರಗಳೊಂದಿಗೆ ಜನವರಿ 30ರಂದು ಶರಣಾಗಲಿದ್ದಾರೆ. ಅವರಿಗೆ ಸರ್ಕಾರ ರಾಜಕೀಯ ಆರ್ಥಿಕ ಸವಲತ್ತುಗಳನ್ನು ಒದಗಿಸಲಿದೆ.
ಈಶಾನ್ಯ ಭಾಗದಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುವ ಸಲುವಾಗಿ ಕೇಂದ್ರಸರ್ಕಾರ, ರಾಜ್ಯಸರ್ಕಾರದೊಂದಿಗೆ ಸೇರಿ ಈ ಬೋಡೊ ಒಪ್ಪಂದಕ್ಕೆ ಸಹಿ ಹಾಕಿದೆ.
ಬೋಡೋಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನಡೆಸುತ್ತಿದ್ದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ನಿಷೇಧಿತ ಸಂಘಟನೆಯ ಆಲ್ ಬೋಡೊ ಸ್ಟುಡೆಂಟ್ ಯೂನಿಯನ್ (ಎಬಿಎಸ್ಯು)ಕೂಡ ಈ ಒಪ್ಪಂದಕ್ಕೆ ಸಹಿದಾರನಾಗಿದೆ.
ಕೇಂದ್ರ ಗೃಹಸಚಿವ ಅಮಿತ್ ಷಾ ಮತ್ತು ಆಸ್ಸಾಂ ಮುಖ್ಯಮಂತ್ರಿ ಸರ್ಬಾನಂದಾ ಸೊನೊವಾಲ್ ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ನಿಷೇಧಿತ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಸಂಘಟನೆಯ ಎಲ್ಲ ಬಣಗಳ ಪ್ರತಿನಿಧಿಗಳೂ ಇದ್ದರು.
ಇಂದು ಕೇಂದ್ರ ಸರ್ಕಾರ, ಆಸ್ಸಾಂ ಸರ್ಕಾರ ಮತ್ತು ಬೋಡೊ ಪ್ರತಿನಿಧಿಗಳು ಒಂದು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಅಗ್ರಿಮೆಂಟ್ನಿಂದ ಆಸ್ಸಾಂ ರಾಜ್ಯ ಮತ್ತು ಬೋಡೊ ಜನಾಂಗದವರ ಬದುಕು ಹಸನಾಗಲಿದೆ. ಬೋಡೊ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಾವು ಕ್ರಮ ಕೈಗೊಳ್ಳುವ ಜತೆ, ಜನಾಂಗದವರಿಗೆ ಆರ್ಥಿಕ ಮತ್ತು ರಾಜಕೀಯ ಸವಲತ್ತುಗಳನ್ನು ನೀಡುತ್ತೇವೆ ಎಂದು ಅಮಿತ್ ಷಾ ಹೇಳಿದ್ದಾರೆ. ಅಲ್ಲದೆ, ನಾವು ನೀಡಿದ ಎಲ್ಲ ಭರವಸೆಗಳನ್ನು ಕೊಟ್ಟ ಸಮಯದ ಮಿತಿಯೊಳಗೆ ಈಡೇರಿಸುತ್ತೇವೆ ಎಂದು ತಿಳಿಸಿದ್ದಾರೆ.
ಬೋಡೋಲ್ಯಾಂಡ್ ಪ್ರತ್ಯೇಕ ರಾಜ್ಯವಾಗಬೇಕು ಅಥವಾ ಕೇಂದ್ರಾಡಳಿತ ಪ್ರದೇಶವಾಗಬೇಕು ಎಂಬುದು ಈ ಸಂಘಟನೆಯ ಬೇಡಿಕೆ. ಇದಕ್ಕಾಗಿ ಹಿಂಸಾತ್ಮಕ ಮಾರ್ಗವನ್ನು ಹಿಡಿದು ಚಳವಳಿಯಲ್ಲಿ ತೊಡಗಿಕೊಂಡಿರುವ ಎನ್ಡಿಎಫ್ಬಿ ಸಂಘಟನೆ ಉಗ್ರ ಗುಂಪು ಎಂದೆನಿಸಿಕೊಂಡಿದೆ. ಇವರ ಹೋರಾಟದಿಂದಾಗಿ ಅದೆಷ್ಟೋ ಜನರ ಪ್ರಾಣ ಹೋಗಿದೆ. ಸಾರ್ವಜನಿಕ, ಖಾಸಗಿ ಆಸ್ತಿಪಾಸ್ತಿಗಳು ನಾಶವಾಗಿದೆ. ಈಶಾನ್ಯ ಭಾಗದಲ್ಲಿ ಶಾಂತಿ ಕದಡಿದೆ.
ಕಳೆದ 27 ವರ್ಷಗಳಲ್ಲಿ ಇದು ಮೂರನೇ ಬೋಡೊ ಒಪ್ಪಂದ. ಮೊದಲ ಬಾರಿಗೆ 1993ರಲ್ಲಿ ಆಲ್ ಬೋಡೊ ಸ್ಟುಡೆಂಟ್ ಯೂನಿಯನ್ ಜತೆ ಒಪ್ಪಂದವಾಗಿತ್ತು. ಅದರ ಅನ್ವಯ ಸೀಮಿತ ರಾಜಕೀಯ ಅಧಿಕಾರ ಹೊಂದಿರುವ ಬೋಡೋಲ್ಯಾಂಡ್ ಸ್ವಾಯತ್ತ ಮಂಡಳಿ ರಚನೆಯಾಗಿತ್ತು.
ಹಾಗೇ ಎರಡನೇ ಬೋಡೊ ಒಪ್ಪಂದಕ್ಕೆ ಸಹಿ ಬಿದ್ದಿದ್ದು 2003ರಲ್ಲಿ. ಅದು ಬೋಡೊ ಲಿಬರೇಶನ್ ಟೈಗರ್ಸ್ ಎಂಬ ಉಗ್ರ ಸಂಘಟನೆಯೊಂದಿಗೆ ಆಗಿತ್ತು. ಇದಾದ ಬಳಿಕ ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿ ರಚನೆ ಮಾಡಲಾಗಿತ್ತು. (ಏಜೆನ್ಸೀಸ್)