

ನವದೆಹಲಿ: ‘ನನಗೆ ಈಗ 140 ವರ್ಷ’ ಎಂದು ಅಫ್ಘಾನಿಸ್ತಾನದ ವ್ಯಕ್ತಿಯೊಬ್ಬ ಹೇಳಿಕೊಂಡಿದ್ದರಿಂದ ಈತನ ವಿರುದ್ಧ ತಾಲಿಬಾನ್ ತನಿಖೆಗೆ ಮುಂದಾಗಿದೆ.
ಅಖೆಲ್ ನಜಿರ್ ಎಂಬ ಹೆಸರಿನ ಈತ ತಾನು 1880ನೇ ಇಸವಿಯಲ್ಲಿ ಹುಟ್ಟಿದ್ದಾಗಿ ಹೇಳಿದ್ದಾನೆ. ಇದು ನಿಜವಾಗಿದ್ದರೆ ಈತ ಈ ಭೂಮಿ ಮೇಲಿನ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಳ್ಳುತ್ತಾನೆ. ಅದಾಗ್ಯೂ ವಯಸ್ಸಿನ ಕುರಿತು ಈತನ ಬಳಿ ಯಾವುದೇ ದಾಖಲೆ ಇಲ್ಲ. ಸದ್ಯ ಈತ ದೇಶದ ಪೂರ್ವ ಭಾಗದ ಖೋಸ್ಟ್ ಪ್ರಾಂತ್ಯದಲ್ಲಿ ನೆಲೆಸಿದ್ದಾನೆ.
ಮೂರನೇ ಆಂಗ್ಲೋ-ಅಫ್ಘನ್ ಯುದ್ಧ ನಡೆದ 1919ರ ಸಂದರ್ಭ ತನಗೆ 30 ವರ್ಷವಾಗಿತ್ತು ಎಂದಿರುವ ಈತ, ಬ್ರಿಟಿಷರ ವಿರುದ್ಧ ಚಳವಳಿ ಆರಂಭಿಸಿದ್ದ ಅಫ್ಘನ್ ನಾಯಕ ರಾಜಾ ಅಮಾನುಲ್ಲಾ ಖಾನ್ ಜತೆ ಯುದ್ಧ ಮುಗಿದ ಸಂಭ್ರಮಾಚರಣೆಯಲ್ಲೂ ಭಾಗಿ ಆಗಿದ್ದೆ ಎಂದೂ ಹೇಳಿಕೊಂಡಿದ್ದಾನೆ. ನಜಿರ್ ಹೇಳಿಕೆ ಸಂಬಂಧ ವಿಶೇಷ ತಂಡ ಪರಿಶೀಲಿಸಲಿದೆ ಎಂದು ತಾಲಿಬಾನ್ ತಿಳಿಸಿದೆ.