

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75ನೇ ವರ್ಷದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ದಿ. ಅನಂತಕುಮಾರ್ ಆರಂಭಿಸಿದ್ದ ಅದಮ್ಯ ಚೇತನ ಸಾಮಾಜಿಕ ಸೇವಾ ಸಂಸ್ಥೆ ಸೇರಿ 10 ಸಂಘ ಸಂಸ್ಥೆಗಳಿಗೆ ಅಮೃತಮಹೋತ್ಸವ ರಾಜ್ಯ ಪ್ರಶಸ್ತಿಯನ್ನೂ ಘೋಷಿಸಲಾಗಿದ್ದು, ನ.1ರ ಸಂಜೆ 6ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ.
ಗದಗದ ವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ, ದಾವಣಗೆರೆಯ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ, ಕಲಬುರಗಿಯ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಮಂಗಳೂರಿನ ರಾಮಕೃಷ್ಣಾಶ್ರಮ, ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ್ ಯೂತ್ ಫೌಂಡೇಷನ್, ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ, ಹಾವೇರಿಯ ಉತ್ಸವ ರಾಕ್ ಗಾರ್ಡನ್, ಬೆಂಗಳೂರಿನ ಸ್ಟೆಪ್ ಒನ್ ಹಾಗೂ ಬನಶಂಕರಿ ಮಹಿಳಾ ಸಮಾಜ ಈ ಪ್ರಶಸ್ತಿಗೆ ಆಯ್ಕೆಯಾದ ಇತರ ಸಂಸ್ಥೆಗಳು.
ಭಾರತ ಸ್ವಾತಂತ್ರ್ಯದ ನಂತರ ಅದನ್ನು ಸಾರ್ಥಕ ರೀತಿಯಲ್ಲಿ ಸಮಾಜಕ್ಕೆ ದಕ್ಕುವಂತೆ ಹಾಗೂ ಇತರರಿಗೆ ಪ್ರೇರಣಾದಾಯಕವಾಗಿ ಕೆಲಸ ಮಾಡುತ್ತಿರುವ ಸಂ ಸಂಸ್ಥೆಗಳನ್ನು ಗುರುತಿಸಿ, ಇನ್ನಷ್ಟು ಸಂಸ್ಥೆಗಳು ತಮ್ಮನ್ನ ಸಮಾಜಸೇವೆಗೆ ಸಮರ್ಪಣೆ ಮಾಡಿಕೊಳ್ಳಲಿ ಎಂಬ ಆಶಯದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸತಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದು, ಈ ವಿಶೇಷ ಪ್ರಶಸ್ತಿ ಪ್ರಸಕ್ತ ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸೇವಾ ಸಿಂಧು ಮೂಲಕ ಅರ್ಜಿ: ಕನ್ನಡ ಮತ್ತು ಸಂಸತಿ ಇಲಾಖೆ ಮಾರ್ಗಸೂಚಿ ಜತೆಗೆ ಈ ಬಾರಿ ಪದ್ಮ ಪ್ರಶಸ್ತಿ ಮಾದರಿಯಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕವೂ 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಾರ್ವಜನಿಕರಿಂದ ಶಿಾರಸಿಗೆ ಅವಕಾಶ ನೀಡಲಾಗಿತ್ತು. ಸೇವಾ ಸಿಂಧು ಹಾಗೂ ಭೌತಿಕ ಅರ್ಜಿಗಳೆರಡೂ ಸೇರಿ 6 ಸಾವಿರಕ್ಕೂ ಹೆಚ್ಚು ಅರ್ಜಿಗಳಲ್ಲಿ 66 ಹೆಸರನ್ನು ಸಮಿತಿ ಆಯ್ಕೆ ಮಾಡಿದೆ.
ಈ ಕುರಿತು ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯಿಸಿ, ಸೇವಾ ಸಿಂಧು ಮೂಲಕ ಸಾರ್ವಜನಿಕರು ಮಾಡಿದ ಶಿಫಾರಸುಗಳನ್ನು ಪರಿಶೀಲಿಸಿ ಹಾಗೂ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದ ಅನೇಕ ಮಹನೀಯರನ್ನು ಹೆಕ್ಕಿ ತೆಗೆದು ಅವರ ಹೆಸರುಗಳನ್ನು ಕೂಡ ಪ್ರಶಸ್ತಿ ಸಲಹಾ ಸಮಿತಿ ಮತ್ತು ಮುಖ್ಯಮಂತ್ರಿಗಳ ಅಧ್ಯತೆಯಲ್ಲಿ ರಚಿತವಾಗಿರುವ ಪ್ರಶಸ್ತಿ ಆಯ್ಕೆ ಸಮಿತಿಗಳ ಮುಂದೆ ಇಡಲಾಯಿತು. ಅವುಗಳ ಸಮಗ್ರ ಪರಿಶೀಲನೆ ನಂತರ ಆಯ್ಕೆ ಸಮಿತಿಯು ಹೆಸರುಗಳನ್ನು ಅಂತಿಮಗೊಳಿಸಿದೆ ಎಂದರು.
ಅಂತ್ಯಕ್ರಿಯೆ ನಂತರ ಪ್ರಕಟ: ಕನ್ನಡದ ಮೇರು ನಟ ಪುನಿತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದ ಪ್ರಶಸ್ತಿ ನಿರೂಷಣೆಯಲ್ಲಿ ವಿಳಂಬವಾಯಿತು. ಅವರ ಅಂತ್ಯಕ್ರಿಯೆ ಪ್ರಕ್ರಿಯೆಗಳು ಮುಗಿದ ನಂತರ ಈ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಹಲವರ ಅಪಸ್ವರ: ರಾಜ್ಯೋತ್ಸವ ಪ್ರಶಸ್ತಿಗೆ, ಕ್ರೀಡಾ ಕ್ಷೇತ್ರ ಹಾಗೂ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ವಿಶಿಷ್ಠ ಸಾಧಕರನ್ನು ಹೊರತುಪಡಿಸಿ 60 ವರ್ಷ ಆಗಿರಬೇಕು. ಆದರೆ ಈ ವರ್ಷ ಅನೇಕರಿಗೆ 60 ವರ್ಷವಾಗಿಲ್ಲ ಎಂಬ ಚರ್ಚೆ ಜಾಲತಾಣದಲ್ಲಿ ನಡೆಯಿತು. ಪ್ರಕಾಶ್ ಬೆಳವಾಡಿ ಈ ವರ್ಷ ಮಾರ್ಚ್ನಲ್ಲಿ, ರಾಜಲಕ್ಷಿ$್ಮ ಮೇನಲ್ಲಿ 60 ವರ್ಷ ಪೂರ್ಣಗೊಳಿಸಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಇನ್ನು ನೃತ್ಯ ಸೇರಿ ಹಲವು ಪ್ರಕಾರಗಳಿಗೆ ಪ್ರಶಸ್ತಿ ಲಭಿಸಿಲ್ಲ ಎಂಬ ಅಪಸ್ವರ ಕೇಳಿಬಂದಿದೆ. ಜತೆಗೆ ಸ್ವಾತಂತ್ರ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆಯಾದರೂ ಸ್ವಾತಂತ್ರ ಹೋರಾಟಗಾರರನ್ನು ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಯಾವುದೋ ಊರು ಎಲ್ಲಿಗೋ ಪ್ರಶಸ್ತಿ
ಎಲ್ಲ ಜಿಲ್ಲೆಗೆ ಕನಿಷ್ಠ ಒಂದು ಪ್ರಶಸ್ತಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇದಕ್ಕೆ ಬೆಂಗಳೂರು ಹೊರತಾಗಿ ಪರಿಗಣಿಸಲಾಗುತ್ತದೆ. ಅದರಂತೆ ಬೆಂಗಳೂರಿಗೆ 10 ಪ್ರಶಸ್ತಿ ಘೋಷಿಸಲಾಗಿದೆ. ಆದರೆ, ಅಸಲಿಗೆ ಬೇರೆ ಜಿಲ್ಲೆಗಳ ಕೋಟಾದಲ್ಲೂ ಬೆಂಗಳೂರು ವಾಸಿಗಳೇ ಇದ್ದಾರೆ. ಉದಾಹರಣೆಗೆ ಪ್ರಕಾಶ್ ಬೆಳವಾಡಿ ಅವರನ್ನು ಚಿಕ್ಕಮಗಳೂರು, ಕ್ಯಾಪ್ಟನ್ ರಾಜಾರಾವ್ ಬಳ್ಳಾರಿ, ಪ್ರೊ. ಪಿ.ವಿ. ಕೃಷ್ಣಭಟ್ ಶಿವಮೊಗ್ಗ, ಮಂಜುನಾಥ ಅಜ್ಜಂಪುರ ಅವರನ್ನು ಚಿಕ್ಕಮಗಳೂರು ಜಿಲ್ಲೆ ಎಂದು ಆಯ್ಕೆ ಮಾಡಲಾಗಿದೆ. ಇವರೂ ಸೇರಿ ಇನ್ನೂ ಅನೇಕರು ದಶಕಗಳಿಂದಲೂ ಬೆಂಗಳೂರಿನಲ್ಲೇ ನೆಲೆಸಿದ್ದರೂ ಅವರ ಹುಟ್ಟಿದ ಮೂಲ ಜಿಲ್ಲೆಗಳಿಂದ ಆಯ್ಕೆ ಮಾಡಲಾಗಿದೆ.