ಶಿವಾಜಿಗೆ ಅಮಿತ್ ತ್ರಿವೇದಿ ಸಂಗೀತ: ರಿಷಬ್ ಚಿತ್ರಕ್ಕೆ ‘ದೇವ್-ಡಿ’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ

ಅಮಿತ್​ ತ್ರಿವೇದಿ
ಅಮಿತ್​ ತ್ರಿವೇದಿ
Published on

ಪ್ರಮುಖ ಮುಖ್ಯಾಂಶಗಳು

  • ಪ್ರೀತಂ ಜಾಗಕ್ಕೆ ಬಂದ ಅಮಿತ್ ತ್ರಿವೇದಿ
  • ಐತಿಹಾಸಿಕ ಚಿತ್ರದ ಎರಡು ಭಾಗಗಳಿಗೆ ಸಂಗೀತ ಸಂಯೋಜನೆ
  • ರಾಷ್ಟ್ರಪ್ರಶಸ್ತಿ ಸಾಹಿತಿ ಪ್ರಸೂನ್ ಜೋಶಿ ಚಿತ್ರಕ್ಕೆ ಸಾಹಿತ್ಯ ರಚನೆ
‘ಕಾಂತಾರ’ ನಟ ರಿಷಬ್ ಶೆಟ್ಟಿ, ನಿರ್ದೇಶಕ ಸಂದೀಪ್ ಸಿಂಗ್ ಕಾಂಬಿನೇಷನ್‌ನಲ್ಲಿ ಕಳೆದ ವರ್ಷ ‘ಛತ್ರಪತಿ ಶಿವಾಜಿ ಮಹಾರಾಜ್: ದ ಪ್ರೈಡ್ ಆಫ್​ ಭಾರತ್’ ಸಿನಿಮಾ ಅನೌನ್ಸ್ ಆಗಿತ್ತು. ಬಳಿಕ ಈ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ‘ಕಾಂತಾರ ಅಧ್ಯಾಯ 1’ರ ಬಳಿಕ ರಿಷಬ್ ಶೆಟ್ಟಿ ಈ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತು. ಸದ್ಯ ಅವರು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿರುವ ತೆಲುಗಿನ ‘ಜೈ ಹನುಮಾನ್’ನಲ್ಲಿ ಬಿಜಿಯಾಗಿದ್ದಾರೆ. ಅದರ ನಡುವೆಯೇ ‘ಛತ್ರಪತಿ ಶಿವಾಜಿ ಮಹಾರಾಜ್’ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಮೊದಲು ಈ ಐತಿಹಾಸಿಕ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ ಸಂಗೀತ ಸಂಯೋಜಿಸಲಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಸದ್ಯ ಅವರು ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳುವುದಾಗಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರೀತಂ ಜಾಗಕ್ಕೆ ಅಮಿತ್ ತ್ರಿವೇದಿ ಆಗಮನವಾಗಿದೆ. ಹಿಂದಿಯ ‘ದೇವ್-ಡಿ’, ‘ಉಡಾನ್’, ‘ಲುಟೇರಾ’, ‘ಹೋಮ್ ಬೌಂಡ್’ ಸೇರಿ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ಅಮಿತ್ ತ್ರಿವೇದಿ ಇದೀಗ ‘ಛತ್ರಪತಿ ಶಿವಾಜಿ ಮಹಾರಾಜ್...’ ಮೂಲಕ ಮೊದಲ ಬಾರಿಗೆ ಐತಿಹಾಸಿಕ ಚಿತ್ರವೊಂದಕ್ಕೆ ಸಂಗೀತ ನೀಡುತ್ತಿದ್ದಾರೆ. ಎರಡು ಭಾಗಗಳಲ್ಲಿ ಬರಲಿರುವ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸಾಹಿತಿ ಪ್ರಸೂನ್ ಜೋಶಿ ಸಾಹಿತ್ಯ ರಚಿಸಲಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜತೆ ಅರ್ಜುನ್ ರಾಮ್‌ಪಾಲ್, ವಿವೇಕ್ ಓಬೆರಾಯ್ ತಾರಾಗಣದಲ್ಲಿದ್ದಾರೆ. 2027ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net