

ನವದೆಹಲಿ: ಕರೊನಾವೈರಸ್ ಸೋಂಕಿನಿಂದಾಗಿ ಸದ್ಯ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಇದೀಗ ಟೈಂಪಾಸ್‌ಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಬಿಜಿ ಅಗಿದ್ದಾರೆ.
ತಮ್ಮ ದೈನಂದಿನ ಆರೋಗ್ಯದ ಬಗ್ಗೆ ದಿನವೂ ಅವರು ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡುವ ಜತೆಗೆ ಅಭಿಮಾನಿಗಳ ಭಯವನ್ನು ದೂರ ಮಾಡುತ್ತಿದ್ದಾರೆ.
ಇದೀಗ ಅಮಿತಾಭ್ ಬಚ್ಚನ್ ಅವರು ತಮ್ಮ ತಂದೆ ಮತ್ತು ಪ್ರಸಿದ್ಧ ಕವಿ ಡಾ. ಹರಿವಂಶ್ ರೈ ಬಚ್ಚನ್ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ನಿನ್ನೆ ರಾತ್ರಿ (ಜುಲೈ 26) ಅವರು ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಾ ಟ್ವಿಟರ್‌ನಲ್ಲಿ ಅವರ ಕವಿತೆಯ ಸಾಲುಗಳನ್ನು ಹಂಚಿಕೊಂಡಿದ್ದಾರೆ.
ಬಾಪೂಜಿಯ ಕವಿತೆಯ ಕೆಲವು ಸಾಲುಗಳು ನನ್ನನ್ನು ಕಾಡುತ್ತಿವೆ. ಆಸ್ಪತ್ರೆಯ ಒಂಟಿತನದಲ್ಲಿ ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮತ್ತು ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಈ ಮೂಲಕ ನನ್ನ ಒಂಟಿತನವನ್ನು ದೂರಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಬಿಗ್ ಬಿ ಬರೆದಿದ್ದಾರೆ. ಜತೆಗೆ ತಂದೆಯವರು ಬರೆದಿರುವ ಕವಿತೆಯ ಸಾಲುಗಳನ್ನು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾವುಕರಾದರು.
ನಾಲ್ಕು ನಿಮಿಷಗಳ ಈ ವಿಡಿಯೋದಲ್ಲಿ ಹರಿವಂಶ್ ಅವರ ಕವಿತೆಯನ್ನು ಹೇಳಿರುವ ಅಮಿತಾಭ್‌ಬಚ್ಚನ್ ಅವರ ಈ ಟ್ವೀಟ್‌ಗೆ ಸಾಕಷ್ಟು ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸಿದ್ದು, ಇದನ್ನು ಶೇರ್ ಮಾಡಿಕೊಂಡಿದ್ದಾರೆ.