

ಖಾಂಡ್ವಾ (ಮಧ್ಯಪ್ರದೇಶ): ಕರೊನಾ ವೈರಸ್‌ನಿಂದಾಗಿ ಎಷ್ಟೊಂದು ಮದುವೆಗಳು ನಿಂತುಹೋಗಿವೆ. ಮದುವೆ ಸಂದರ್ಭದಲ್ಲಿ ಹೋದವರಿಗೆ ಈ ವೈರಸ್ ಒಕ್ಕರಿಸಿರುವ ಉದಾಹರಣೆಗಳೂ ಸಾಕಷ್ಟಿವೆ. ಮದುವೆಯಾದ ಕ್ಷಣದಲ್ಲಿಯೇ ವಧು-ವರರು ಕ್ವಾರಂಟೈನ್ ಆಗಿರುವ ಸುದ್ದಿಗಳೂ ಅಲ್ಲಲ್ಲಿ ಬಂದಿವೆ.
ಆದರೆ ಇವೆಲ್ಲವುಗಳಿಗಿಂತ ಇದೊಂದು ಭಿನ್ನ ಹಾಗೂ ವಿಚಿತ್ರ ಪ್ರಕರಣ.
ಇದು ನಡೆದಿರುವುದು ಮಧ್ಯಪ್ರದೇಶದ ಖಾಂಡ್ವಾದಲ್ಲಿ. 22 ವರ್ಷದ ಯುವತಿಯೊಬ್ಬಳು ಯುವಕನನ್ನು ಪ್ರೀತಿಸುತ್ತಿದ್ದಳು. ಅದೂ ತನ್ನದೇ ಗ್ರಾಮದ ತನ್ನದೇ ಜಾತಿಯ ಯುವಕನನ್ನೇ. ಆದರೆ ಈ ಮದುವೆ ಆಕೆಯ ಪಾಲಕರಿಗೆ ಇಷ್ಟವಿರಲಿಲ್ಲ. ಆದರೆ ಅದ್ಹೇಗೋ ಮಾಡಿ ಅಂತೂ ಇಂತೂ ಯುವತಿ ಮನೆಯವರನ್ನು ಒಪ್ಪಿಸಿದ್ದರು.
ಸರಿ. ಕರೊನಾ ವೈರಸ್‌ನ ಈ ದಿನಗಳಲ್ಲಿ ಅದ್ಧೂರಿ ಮದುವೆ ಬೇಡ ಎಂದು ಎರಡೂ ಕುಟುಂಬದವರು ನಿರ್ಧರಿಸಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗುವ ಯೋಜನೆ ರೂಪಿಸಿದರು. ಅದರಂತೆ ಎರಡೂ ಕಡೆಯವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋದರು. ಅಲ್ಲಿ ಎಲ್ಲಾ ಪ್ರಕ್ರಿಯೆಗಳು ನಡೆದ ನಂತರ ಇನ್ನೇನು ವಧು ಮತ್ತು ವರರು ಸಹಿ ಹಾಕಿದ್ದರೆ ಅಲ್ಲಿಗೆ ಮದುವೆ ಮುಕ್ತಾಯವಾಗುತ್ತಿತ್ತು.
ಆದರೆ ಇನ್ನೇನು ಸಹಿ ಹಾಕಬೇಕು ಎನ್ನುವಷ್ಟರಲ್ಲಿ ಯುವತಿಯ ಪಾಲಕರು ತಮ್ಮ ಮಗಳಿಗೆ ಕೋವಿಡ್ ಇದೆ ಎಂದು ಜೋರಾಗಿ ಕಿರುಚಿಕೊಂಡರು. ಯುವತಿ ಅಚ್ಚರಿಯಿಂದ ಅಪ್ಪನ ಮುಖ ನೋಡಿ, ಇಲ್ಲ ಇಲ್ಲ ನನಗೆ ಕರೊನಾ ವೈರಸ್ ಇಲ್ಲ ಎಂದು ಹೇಳಿದಳು.
ಆದರೆ ಅಪ್ಪನ ಮಾತನ್ನು ಕೇಳಿ ಅಲ್ಲಿದ್ದ ಟೈಪಿಸ್ಟ್ ಸೇರಿದಂತೆ ಎಲ್ಲರೂ ಹೌಹಾರಿ ಹೋದರು. ಅಲ್ಲಿದ್ದ ಸಿಬ್ಬಂದಿ ಮದುವೆಯನ್ನು ಧೃಢಿಕರಿಸಲು ನಿರಾಕರಿಸಿದರು. ಅಷ್ಟೇ ಅಲ್ಲದೇ, ವಕೀಲರು ಕೂಡ ಯಾವುದೇ ಧೃಡೀಕರಣ ಮಾಡಲಿಲ್ಲ. ನೋಂದಣಿ ಪ್ರಕ್ರಿಯೆ ನಡೆಸುವ ಮೊದಲು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಯುವತಿಗೆ ಅವರು ಸೂಚಿಸಿದರು.
ಇದನ್ನೂ ಓದಿ: ಕರಾವಳಿಯಲ್ಲಿ 369 ಪಾಸಿಟಿವ್
ಕರೊನಾ ಇದ್ದ ಮೇಲೆ ಹುಡುಗನ ಕಡೆಯವರು ಸುಮ್ಮನಿರುತ್ತಾರೆಯೇ? ಅವರೂ ವರನನ್ನು ಕರೆದುಕೊಂಡು ಹೋಗಿದ್ದಾರೆ. ಮಾತ್ರವಲ್ಲದೇ ಕ್ವಾರಂಟೈನ್ ಆಗಿದ್ದಾರೆ.
ಆ ಗ್ರಾಮದಲ್ಲಿ ಅದುವರೆಗೂ ಯಾವುದೇ ಕೋವಿಡ್ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಆದರೂ ಇದೀಗ ಕ್ವಾರಂಟೈನ್, ಕೋವಿಡ್ ಪರೀಕ್ಷೆ ಎಲ್ಲವೂ ಅನಿವಾರ್ಯವಾಗಿದೆ!
ಅಷ್ಟಕ್ಕೂ ಹುಡುಗಿಯ ಅಪ್ಪ ಹೀಗೆಕೆ ಮಾಡಿದರು ಎಂದರೆ ಅವರಿಗೆ ಈ ಮದುವೆ ಇಷ್ಟವಿರಲಿಲ್ಲ. ಮಗಳಿಗೆ ಎಷ್ಟೇ ಹೇಳಿದರೂ ಆಕೆ ಹಠ ಹಿಡಿದುಕೂತಿದ್ದ ಕಾರಣ, ಹೀಗೊಂದು ಪ್ಲ್ಯಾನ್ ಮಾಡಿ ಮದುವೆ ನಿಲ್ಲಿಸಿದ್ದಾರೆ ಎಂಬ ಗುಮಾನಿ ಶುರುವಾಗಿದೆ.
ಅಂತೂ ಅಪ್ಪನ ಇಚ್ಛೆಯಂತೆ ಸದ್ಯ ಮದುವೆ ನಿಂತಿದೆ. ಇವೆಲ್ಲಾ ಡ್ರಾಮಾ ನೋಡಿ ವರನ ಕಡೆಯವರು ಮುಂದೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದುನೋಡಬೇಕಿದೆ.