

ಉಸಿರಾಟದ ಸಮಸ್ಯೆಯಿಂದ ಶನಿವಾರವಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಬಿಗ್ಬಿ ಅಮಿತಾಬ್ ಬಚ್ಚನ್ಗೆ ಕರೊನಾ ಇರುವುದು ದೃಢಪಟ್ಟಿತ್ತು. ಬಳಿಕ ಅಭಿಷೇಕ್ ಬಚ್ಚನ್ ಅವರ ವರದಿಯೂ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅಮಿತಾಬ್ ಅವರ ನಿವಾಸವನ್ನು ಸೀಲ್ ಡೌನ್ ಮಾಡಿ, ಆ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಮುಂಬೈ ಮಹಾನಗರ ಪಾಲಿಕೆ ಬ್ಯಾನರ್ ಅಳವಡಿಸಿದೆ.
ಈಗಾಗಲೇ ಪಾಲಿಕೆ ಅಧಿಕಾರಿಗಳು ಮತ್ತು ಆರೋಗ್ಯಕರ್ತರು ಆಗಮಿಸಿ ಮನೆಯ ಸುತ್ತ ಸೋಂಕು ನಿವಾರಕವನ್ನು ಸಿಂಪಡಣೆ ಮಾಡಿ, ಸುತ್ತಲಿನ ಪ್ರದೇಶವನ್ನು ಸೀಲ್ ಮಾಡಿದ್ದಾರೆ.ಅಚ್ಚರಿ ವಿಚಾರ ಏನೆಂದರೆ, ಬಿಗ್ಬಿ ಪತ್ನಿ ಜಯಾ ಬಚ್ಚನ್ ಹಾಗೂ ಅಭಿಷೇಕ್ ಪತ್ನಿ ಐಶ್ವರ್ಯ ರೈ ಬಚ್ಚನ್, ಪುತ್ರಿ ಆರಾಧ್ಯಾ ಅವರನ್ನು ಪರೀಕ್ಷಿಸಿದಾಗ ಅವರಿಗೆ ಸೋಂಕು ತಗುಲದೇ ಇರುವುದು ಖಚಿತಪಟ್ಟಿದೆ ಎಂದು ನಾನಾವತಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮನೆಯಲ್ಲಿ ಇರುವಾಗಲೇ ಅಮಿತಾಭ್ ಬಚ್ಚನ್ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಲಕ್ಷಣ ಸೌಮ್ಯವಾಗಿದ್ದರಿಂದ ಅವರು ತಮ್ಮ ಮನೆಯಲ್ಲೇ ಸ್ವಪ್ರೇರಣೆಯ ಕ್ವಾರಂಟೈನ್ಗೆ ಒಳಗಾಗಿದ್ದರು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾದರು ಎನ್ನಲಾಗಿದೆ. (ಏಜೆನ್ಸೀಸ್)