

ಕರೊನಾ ಬಗ್ಗೆ ಭೀತಿ ಬೇಡ, ಜಾಗೃತಿ ಇರಲಿ ಎಂದು ಸರ್ಕಾರ ಮೇಲಿಂದ ಮೇಲೆ ಜಾಹೀರಾತು ಮೂಲಕ ಆಜ್ಞೆ ಮಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟಪ್ಪಣೆ ಹೊರಡಿಸಿದೆ. ಇಡೀ ರಾಷ್ಟ್ರವನ್ನೇ ಲಾಕ್ಡೌನ್ ಮಾಡಲಾಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಈಗ ಸಿನಿಮಾ ಕ್ಷೇತ್ರದ ಘಟಾನುಟಿಗಳು ಮೊದಲ ಬಾರಿ ಒಟ್ಟಾಗಿದ್ದಾರೆ. ಅದೂ ಕಿರುಚಿತ್ರದ ಮೂಲಕ ಎಂಬುದು ವಿಶೇಷ!
ಹೌದು, ಬಾಲಿವುಡ್ನಿಂದ ಹಿಡಿದು ದಕ್ಷಿಣ ಭಾರತೀಯ ಸಿನಿಮಾರಂಗದ ಸ್ಟಾರ್ ಕಲಾವಿದರು "ಫ್ಯಾಮಿಲಿ' ಹೆಸರಿನ ಕಿರುಚಿತ್ರಕ್ಕೆ ಬಣ್ಣಹಚ್ಚಿದ್ದಾರೆ. ಈ ಕಿರುಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಸೂಪರ್ಸ್ಟಾರ್ ರಜನಿಕಾಂತ್, ಪ್ರಿಯಾಂಕಾ ಚೋಪ್ರಾ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ. ಈ ಕಿರುಚಿತ್ರ ಮನೆಯಲ್ಲಿಯೇ ಇರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಿ ಎಂಬಂಥ ಸಂದೇಶಾತ್ಮಕ ಅಂಶಗಳನ್ನು ಹೇಳಲಾಗಿದೆ. ಈ ಕಿರುಚಿತ್ರ ಸೋನಿ ಪಿಕ್ಚರ್ಸ್ನಲ್ಲಿ ಸೋಮವಾರ (ಇಂದು) ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಕಿರುಚಿತ್ರದ ಅವಧಿ ಎಷ್ಟು, ಎಷ್ಟು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ? ಈ ಎಲ್ಲ ಕುತೂಹಲಗಳಿಗೂ ಇಂದು ರಾತ್ರಿ 9ಕ್ಕೆ ಉತ್ತರ ಸಿಗಲಿದೆ.
ಅಂದಹಾಗೆ, ಪ್ರಸೂನ್ ಪಾಂಡೆ ಈ "ಫ್ಯಾಮಿಲಿ' ಕಿರುಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಪ್ರಸೂನ್ ಅವರದ್ದು ಚಿರಪರಿಚಿತ ಹೆಸರು. ವಿಶ್ವದ 100 ಅತ್ಯುತ್ತಮ ಜಾಹೀರಾತು ನಿರ್ದೇಶಕರ ಪಟ್ಟಿಯಲ್ಲಿ ಪ್ರಸೂನ್ 24ನೇ ಸ್ಥಾನದಲ್ಲಿದ್ದಾರೆ. ಸರಣಿ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. ಈಗ ಕರೊನಾ ಜಾಗೃತಿ ಕುರಿತ ಕಿರುಚಿತ್ರ ಸಿದ್ಧಪಡಿಸಿದ್ದಾರೆ. (ಏಜೆನ್ಸೀಸ್)