

Amit Shah: ಬಿಹಾರದಾದ್ಯಂತ ಅಕ್ರಮವಾಗಿ ನೆಲೆಸಿರುವಂತಹ ನುಸುಳುಕೋರರನ್ನು ಓಡಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರ(ಸೆ 27) ತಿಳಿಸಿದ್ದಾರೆ.
ಬಿಹಾರದ ಅರಾರಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಷಾ, ಆರ್‌ಜೆಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, ಈ ಚುನಾವಣೆಯಲ್ಲಿ ಲಾಲು ಯಾದವ್, ತಮ್ಮ ಪುತ್ರ ತೇಜಸ್ವಿ ಯಾದವ್ರನ್ನು ಮುಖ್ಯಮಂತ್ರಿಯನ್ನಾಗಿಸುವುದೇ ಏಕೈಕ ಗುರಿಯಾಗಿದೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರಿಗೆ ಈ ಚುನಾವಣೆಯ ಗೆಲುವಿನ ಮೂಲಕ ಬಿಹಾರದಾದ್ಯಂತ ಅಕ್ರಮವಾಗಿ ನೆಲೆಸಿರುವ ನುಸುಳುಕೋರರನ್ನು ಓಡಿಸುವುದು ಪ್ರಮುಖ ಗುರಿಯಾದರೆ, ರಾಹುಲ್ ಮತ್ತು ಲಾಲುಗೆ ತಮ್ಮ ಪಕ್ಷ ಚುನಾವಣೆವನ್ನು ಗೆಲ್ಲಿಸುವುದೇ ಏಕೈಕ ಉದ್ದೇಶ. ಈ ಹಿಂದೆ ಸಾಮೂಹಿಕ ಭ್ರಷ್ಟಾಚಾರ ಎಸಗಿರುವ ಕಾಂಗ್ರೆಸ್ ಮತ್ತು ಆರ್‌ಜೆಡಿ ಮತ್ತೇ ಈಗ ಗೆಲುವಿನ ಕನಸು ಕಾಣುತ್ತಿದೆ ಎಂದರು. ಲಾಲು ಮತ್ತು ಕಂಪನಿ ಬಿಹಾರವನ್ನು ಸಾಕಷ್ಟು ಲೂಟಿ ಮಾಡಿದ್ದು, ಆಗಿನ ಸರ್ಕಾರ ಹಗರಣಗಳು ಮತ್ತು ವಂಚನೆಗಳ ಮೂಲಕವೇ ಅವಧಿ ಪೂರೈಸಿದೆ. ಇದಕ್ಕೆ ತದ್ವಿರುದ್ಧವಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ದಿಯ ಮೂಲಕ ಜನಮನ್ನಣೆ ಗಳಿಸಿದ್ದು, ಕಳೆದ 11 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಒಂದೇ ಒಂದು ಭ್ರಷ್ಟಾಚಾರದ ಆರೋಪವನ್ನು ಹೊರಿಸಲು ಸಾಧ್ಯವಾಗಿಲ್ಲ ಎಂದರು.
ಇದನ್ನೂ ಓದಿ:ಮೆಳಗೋಡಿನಲ್ಲಿ ಎನ್ಎಸ್ಎಸ್ ಶಿಬಿರ
ಇತ್ತೀಚಿನ ಮತದಾರರ ಅಧಿಕಾರ ಯಾತ್ರೆಯ ಕುರಿತು ಕಾಂಗ್ರೆಸ್ ಸಂಸದ ಮತ್ತು ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಮತ್ತು ಆರ್‌ಜೆಡಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅಮಿತ್ ಷಾ, ಲಾಲು ಮತ್ತು ಅವರ ಕಂಪನಿಯು ಒಳನುಸುಳುಕೋರರಿಗೆ ಮತದಾನದ ಹಕ್ಕುಗಳನ್ನು ನೀಡಲು ಬಯಸುತ್ತಿದೆ, ಅದಕ್ಕಾಗಿಯೇ ಈ ಯಾತ್ರೆ ಎಂದರು. ಲಾಲು ಮತ್ತು ಅವರ ಸಹಚರ ರಾಹುಲ್ ಬಾಬಾ ನುಸುಳುಕೋರರಿಗೆ ಮತದಾನದ ಹಕ್ಕು ನೀಡಬೇಕು ಎಂದು ಬಯಸುತ್ತಾರೆ, ನಾವು ನುಸುಳುಕೋರರಿಗೆ ಮತದಾನದ ಹಕ್ಕನ್ನು ನೀಡಬೇಕೇ? ಬಿಹಾರ ರಾಜ್ಯದ ಯಾರಿಗಾದರೂ ಮತದಾನದ ಹಕ್ಕು ಮೊಟಕುಗೊಳಿಸಲಾಗಿದೆಯೇ? ಎಂದು ಪ್ರಶ್ನಸಿದ ಗೃಹ ಸಚಿವರು, ಭಾರತದ ಪ್ರಜೆಗಳ ಮತಗಳನ್ನು ಅಳಿಸುವುದಿಲ್ಲ ಎಂದು ಭರವಸೆ ನೀಡಿದರು.
ಬಿಹಾರಕ್ಕೆ ನಿಮ್ಮ ಕೊಡುಗೆ ಏನು..?
ಸೋನಿಯಾ ಜಿ ಅವರ ಮಗ ಮತ್ತು ಲಾಲು ಜಿ ಅವರ ಮಗ ಬಿಹಾರಕ್ಕೆ ಏನು ಮಾಡಿದ್ದಾರೆ ಮತ್ತು ಮೋದಿ ಸರ್ಕಾರ ಏನು ಮಾಡಿದೆ ಎಂಬುದರ ಪಟ್ಟಿ ನನ್ನಲ್ಲಿದೆ. ಮನಮೋಹನ್ ಸಿಂಗ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬಿಹಾರಕ್ಕೆ 10 ವರ್ಷಗಳಲ್ಲಿ ಕೇವಲ 2 ಲಕ್ಷ 80 ಸಾವಿರ ಕೋಟಿ ರೂ.ಗಳನ್ನು ಮಾತ್ರ ನೀಡಿತ್ತು, ಕಳೆದ ಹನ್ನೊಂದು ವರ್ಷಗಳಲ್ಲಿ ಮೋದಿ ಸರ್ಕಾರ 16 ಲಕ್ಷ ಕೋಟಿ ರೂ.ಗಳನ್ನು ನೀಡಿದೆ ಎಂದರು.(ಏಜೆನ್ಸೀಸ್)