ಪಾತಕಿ ಮಗನಿಗೆ ಆರ್​ಜೆಡಿ ಟಿಕೆಟ್​ ನೀಡಿದೆ, ಅಂತಹ ಅಭ್ಯರ್ಥಿ ನಿಮ್ಮನ್ನು ಸುರಕ್ಷಿತವಾಗಿಡುತ್ತಾನೆಯೇ.? Amit Shah

Amit Shah
Published on

Patna: ಪಾತಕಿ ಮೊಹಮ್ಮದ್ ಶಹಾಬುದ್ದೀನ್ ಪುತ್ರ ಒಸಾಮಾ ಶಹಾಬ್​​ಗೆ ಟಿಕೆಟ್ ನೀಡಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ,( Amit Shah) ಶುಕ್ರವಾರ(ಅ 17) ವಿಪಕ್ಷ ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ರೀತಿಯ ಅಪರಾಧದ ಕುಟುಂಬದ ಹಿನ್ನಲೆ ಇರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಹಾರದ ಜನರು ಹೇಗೆ ಸುರಕ್ಷಿತರಿರಲಿದ್ದಾರೆ ಎಂದು ಪ್ರಶ್ನಿಸಿದರು.

ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಷಾ, ಎರಡು ದಶಕದಲ್ಲಿಯೇ ಅತಿ ದೊಡ್ಡ ಬಹುಮತದೊಂದಿಗೆ ಎನ್‌ಡಿಎ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಸಿವಾನ್ ಜಿಲ್ಲೆಯ ರಘುನಾಥಪುರ ವಿಧಾನಸಭಾ ಕ್ಷೇತ್ರದಿಂದ ಆರ್‌ಜೆಡಿ, ಶಹಾಬ್​ರನ್ನು ಕಣಕ್ಕಿಳಿಸಿದೆ. ಕಳೆದ 20 ವರ್ಷಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರವನ್ನು ಜಂಗಲ್​​ರಾಜ್​​ನಿಂದ ಮುಕ್ತಗೊಳಿಸಿದ್ದಾರೆ. ಈ ವರ್ಷ ಬಿಹಾರದ ಜನರು ನಾಲ್ಕು ದೀಪಾವಳಿಗಳನ್ನು ಆಚರಿಸುತ್ತಿದ್ದಾರೆ. ಒಂದು ದೀಪಾವಳಿಯ ದಿನದಂದು, ಎರಡು ಎನ್‌ಡಿಎ ಸರ್ಕಾರ ಜೀವಿಕಾ ದೀದೀಸ್ ಖಾತೆಗಳಿಗೆ 10,000 ರೂಪಾಯಿ ವರ್ಗಾಯಿಸಿದ ದಿನ, ಮೂರು ಜಿಎಸ್‌ಟಿ ಕಡಿತಗೊಳಿಸಿದ ದಿನ, ಮತ್ತು ನಾಲ್ಕು ಚುನಾವಣಾ ಫಲಿತಾಂಶ ಹೊರ ಬೀಳುವ ನವೆಂಬರ್ 14 ಎಂದು ಹೇಳಿದರು.

ಎನ್‌ಡಿಎ ಸರ್ಕಾರದಿಂದ ವಲಸೆ ತಡೆ..

ಬಿಹಾರದಲ್ಲಿ ಸಾಕಷ್ಟು ಮೂಲಸೌಕರ್ಯ ಕೆಲಸಗಳು ನಡೆದಿವೆ, ಬಿಹಾರದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಪ್ರಯಾಣಿಸಲು ಐದು ಗಂಟೆ ಸಹ ಬೇಕಾಗಿಲ್ಲ. ಈ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ಒಟ್ಟಾಗಿ ಮಾಡಿದ್ದಾರೆ. ನಮ್ಮ ಸರ್ಕಾರ ಇಲ್ಲಿಗೆ ಬರುವ ಮೊದಲು ವಲಸೆ, ಸುಲಿಗೆ, ಕೊಲೆ ಮತ್ತು ಅಪಹರಣಗಳು ಸಾಮಾನ್ಯವಾಗಿದ್ದವು ಎಂದು ಹೇಳಿದರು.

ನಾವು ಬಹಳಷ್ಟು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿದ್ದೇವೆ ಮತ್ತು ರಸ್ತೆಗಳನ್ನು ನವೀಕರಿಸಿದ್ದೇವೆ, ಕೇಂದ್ರದಲ್ಲಿ ಯುಪಿಎ ಆಳ್ವಿಕೆಯಲ್ಲಿ ಭಯೋತ್ಪಾದಕರು ರಕ್ತದೊಂದಿಗೆ ಹೋಳಿ ಆಡುತ್ತಿದ್ದರು, ಆದರೆ, ಮೋದಿ ಸರ್ಕಾರ ಪಾಕಿಸ್ತಾನದೊಳಗಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿತು ಎಂದರು.

ನಿತೀಶ್​ ಕುಮಾರ್​ರನ್ನು ಭೇಟಿ ಮಾಡಿದ ಅಮಿತ್​ ಷಾ...

ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದು ಎಲ್ಲರ ಹುಬ್ಬೇರಿಸಿದೆ, ಬಿಹಾರ ಚುನಾವಣೆ ಕುರಿತಂತೆ ಎನ್‌ಡಿಎ ಮಿತ್ರಪಕ್ಷಗಳ ನಡುವೆ ಅಸಮಧಾನ ಏರ್ಪಟ್ಟಿದೆ ಎಂಬ ಗುಸು ಗುಸು ಮಾತುಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ.

ನಿನ್ನೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಗೃಹ ಸಚಿವ ಅಮಿತ್​ ಷಾ, ನಿತೀಶ್​ ಕುಮಾರ್ ಅವರೇ ನಮ್ಮ ಮೈತ್ರಿಕೂಟದ ನೇತೃತ್ವವಹಿಸಲಿದ್ದು, ಅವರ ಮುಂದಾಳತ್ವದಲ್ಲಿಯೇ ಚುನಾವಣೆ ಎದುರಿಸಲಿದ್ದೇವೆ. ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ ಎಂದಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net