

ಬೆಂಗಳೂರು: ಮೂರು ದಿನಗಳಿಂದ ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಗೃಹಸಚಿವ ಅಮಿತ್ ಷಾ ಇಂದು ದೆಹಲಿಗೆ ಮರಳುವ ಮುನ್ನ ಕೊನೆಯ ಕ್ಷಣದಲ್ಲಿ ಸಭೆಯೊಂದನ್ನು ನಡೆಸಿ ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಬಿ.ಎಲ್. ಸಂತೋಷ್ ಹಾಗೂ ಇತರ ಇಬ್ಬರು ಒಳಗೊಂಡಂತೆ ಈ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಹಲವಾರು ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಅಮಿತ್ ಷಾ ಹೀಗೆ ಅನಿರೀಕ್ಷಿತ ಎಂಬಂತೆ ನಡೆಸಿರುವುದು ಅಚ್ಚರಿ ಮೂಡಿಸಿರುವುದಷ್ಟೇ ಅಲ್ಲದೆ, ಪಕ್ಷದಲ್ಲಿ ಒಂದು ಸಣ್ಣ ಸಂಚಲನವನ್ನೂ ಮೂಡಿಸಿದೆ ಎನ್ನಲಾಗಿದೆ. ಸಚಿವ ಸೋಮಣ್ಣ ಅವರ ಮನೆಗೆ ಭೇಟಿ ನೀಡಿದ್ದ ವೇಳೆ ಈ ಸಭೆಯನ್ನು ಪ್ರತ್ಯೇಕವಾಗಿ ನಡೆಸಲಾಗಿದೆ.
ಅಮಿತ್ ಷಾ ಅವರು ಬಿ.ಎಲ್.ಸಂತೋಷ್, ರಾಜೇಶ್ ಕುಂತೂರು ಹಾಗೂ ಅರುಣ್ ಸಿಂಗ್ ಅವರನ್ನು ಒಳಗೊಂಡಂತೆ ಸುಮಾರು ಅರ್ಧ ಗಂಟೆ ಕಾಲ ಈ ಸಭೆಯನ್ನು ನಡೆಸಿದ್ದರು. ಪಕ್ಷದ ಸಂಘಟನಾತ್ಮಕ ತಂತ್ರಗಾರಿಕೆ ಬಗ್ಗೆ ಈ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ ಮತ್ತು ಬಿಜೆಪಿ ನಾಯಕರಿಗೆ ಕೊಟ್ಟಿರುವ ಟಾಸ್ಕ್ ಮೇಲೆ ನಿಗಾವಹಿಸುವ ಬಗ್ಗೆಯೂ ಸೂಚನೆ ನೀಡಲಾಗಿದೆ ಎನ್ನಲಾಗಿದೆ.