ಡಿಕೆಶಿ ಮುಸ್ಲಿಮರಿಗೆ ಎಲ್ಲಿಂದ ಮೀಸಲಾತಿ ಕೊಡ್ತಾರೆ? ಕಾಂಗ್ರೆಸ್ ವಿರುದ್ಧ ಅಮಿತ್ ಷಾ ವಾಗ್ದಾಳಿ

Amith Shah
Published on

ರಾಣೆಬೆನ್ನೂರು: ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ತಾವು ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮೀಸಲಾತಿ ವಾಪಸ್ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ಎಲ್ಲಿಂದ ತಂದು ಕೊಡುತ್ತೀರಿ. ಯಾರಿಗೆ ಕಡಿಮೆ ಮಾಡಿ ಮುಸ್ಲಿಮರಿಗೆ ಹೆಚ್ಚಿಸುತ್ತೀರಿ. ಲಿಂಗಾಯತರಿಗೆ ಕಡಿಮೆ ಮಾಡುತ್ತೀರಿಯೆ? ಅಥವಾ ಎಸ್ಸಿ, ಎಸ್​ಟಿಯವರಿಗೆ ಕಡಿಮೆ ಮಾಡುತ್ತೀರಾ? ಎಂದು ಕೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಪರವಾಗಿ ಭರ್ಜರಿ ರೋಡ್ ನಡೆಸಿದ ಅವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮೀಸಲಾತಿ ಎಲ್ಲಿಂದು ತಂದು ಕೊಡುತ್ತಾರೆ?

ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಶೇ. 4ರಷ್ಟು ಮೀಸಲಾತಿ ನೀಡಿತ್ತು. ನಮ್ಮ ಬೊಮ್ಮಾಯಿ ಸರ್ಕಾರ ಬಂದ ಮೇಲೆ ಅದನ್ನು ತೆಗೆದು ಹಾಕಿದೆ. ಅವರ ಬದಲು ಎಸ್ಸಿ, ಎಸ್​ಟಿ ಹಾಗೂ ಲಿಂಗಾಯತರಿಗೆ ಮೀಸಲಾತಿ ನೀಡಿದೆ. ಆದರೆ, ನಾವು ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿಯನ್ನು ಮತ್ತೆ ಕೊಡುತ್ತೇವೆ ಎಂದು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ. ಮೀಸಲಾತಿ ಎಲ್ಲಿಂದ ತಂದು ಕೊಡುತ್ತಾರೆ. ನಾವು ನೀಡಿರುವ ಎಸ್ಸಿ, ಎಸ್ಟಿಯವರಿಂದ ಅಥವಾ ಲಿಂಗಾಯತರಿಂದ ಕಿತ್ತು ಕೊಡುತ್ತಾರೆಯೇ ಎಂದು ಕುಟುಕಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ

ಒಂದು ವೇಳೆ ಮುಸ್ಲಿಮರಿಗೆ ಮೀಸಲಾತಿ ನೀಡಬೇಕಾದರೆ ಎಸ್ಸಿ, ಎಸ್​ಟಿ ಅಥವಾ ಲಿಂಗಾಯತರ ಮೀಸಲಾತಿ ಕಡಿಮೆ ಮಾಡಬೇಕಾಗುತ್ತದೆ. ಯಾರಿಗೆ ಮೀಸಲಾತಿ ಕಡಿಮೆ ಮಾಡುತ್ತೀರಿ ಎಂದು ಪ್ರಶ್ನಿಸಿದ ಅವರು, ಮತದಾರರು ಯಾರೂ ಚಿಂತಿಸಬೇಡಿ. ಅವರ ಸರ್ಕಾರ ಅಧಿಕಾರಕ್ಕೆ ಬರಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net