

ಬೆಂಗಳೂರು: ರಾಜ್ಯ ಬಿಜೆಪಿಯ ಕೆಲವು ನಾಯಕರ ‘ಹೊಂದಾಣಿಕೆ ರಾಜಕಾರಣ’ದ ನಂಟನ್ನು ದೂರ ಮಾಡಲು ಪಕ್ಷದ ವರಿಷ್ಠರು ಹಠ ತೊಟ್ಟಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಈ ಬಗ್ಗೆ ಸೂಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು, ಬೆಳಗಾವಿ ಸೇರಿ ರಾಜ್ಯದ ಕೆಲವು ಕಡೆ ಚುನಾವಣಾ ಹೊಂದಾಣಿಕೆ ರಾಜಕಾರಣ ದೆಹಲಿ ನಾಯಕರ ಅರಿವಿಗೂ ಬಂದಿದ್ದು, ಪಕ್ಷ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಚುನಾವಣೆಗೆ ಮುಂಚೆಯೇ ಸೋಲೊಪ್ಪುವ 8-10 ಉದಾಹರಣೆ ಕೂಡ ವರಿಷ್ಠರ ಗಮನದಲ್ಲಿದೆ. ಪಕ್ಷದ ವೇದಿಕೆಯಲ್ಲೂ ಗಂಭೀರ ಚರ್ಚೆಯಾಗಿದೆ. ಅಮಿತ್ ಷಾ ರಾಜ್ಯ ಪ್ರವಾಸದ ವೇಳೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಹೊಂದಾಣಿಕೆ ರಾಜಕಾರಣದ ಬಗ್ಗೆಯೂ ಎಚ್ಚರಿಸಿದ್ದಾರೆ ಎನ್ನಲಾಗಿದೆ.
ತಾವು ಗೆಲ್ಲಬೇಕು, ತಮ್ಮ ಕ್ಷೇತ್ರದಲ್ಲಿ ಎದುರಾಳಿ ಬೆಳೆಯಬಾರೆಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರ ಜತೆ ಕೆಲವು ಹಿರಿಯ ಶಾಸಕರು ಹೊಂದಾಣಿಕೆ ಮಾಡಿಕೊಂಡು ಬಂದಿದ್ದಾರೆ ಎಂಬ ಗುರುತರ ಆರೋಪವೊಂದು ಬಿಜೆಪಿ ವರಿಷ್ಠರ ಗಮನ ಸೆಳೆದಿತ್ತು. ಈ ವಾದದ ಆಧಾರದಲ್ಲೇ ಹಿರಿಯ ಶಾಸಕರು ಪಕ್ಷದ ಹಿಡಿತ ಇರುವ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರ ನೋಡಿಕೊಳ್ಳುವಂತೆ ಒಂದು ಖಚಿತ ಸಂದೇಶ ಕೆಲವು ಶಾಸಕರಿಗೆ ಬಂದಿತ್ತು. ಈ ಸೂಚನೆ ಬಗ್ಗೆ ಅಸಮಾಧಾನದ ಹೊಗೆ ಎದ್ದಿತ್ತು. ಇದೀಗ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಹೊತ್ತಿನಲ್ಲಿ ಪುನಃ ಹೊಂದಾಣಿಕೆ ರಾಜಕಾರಣ ಕೆಲಸ ಮಾಡಬಹುದು ಎಂಬ ಅಂದಾಜಿನಲ್ಲೇ ಅಮಿತ್ ಷಾ ಆದಿಯಾಗಿ ದೆಹಲಿ ನಾಯಕರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಈ ಬಾರಿ ಯಾವುದೇ ಕಾರಣಕ್ಕೂ ಅತಂತ್ರವಾಗದೇ ಸಂಪೂರ್ಣ ಬಹುಮತ ಪಡೆಯುವತ್ತ ಪ್ರಯತ್ನ ಇರಬೇಕೆಂಬ ಸಿದ್ಧತೆ ನಡೆದಿರುವಾಗ ಹೊಂದಾಣಿಕೆ ಮಾಡಿಕೊಳ್ಳದೇ ಚುನಾವಣೆ ಎದುರಿಸಿದರೆ ಪಕ್ಷದ ಸ್ಥಾನವೂ ಹೆಚ್ಚಳವಾಗುತ್ತದೆ ಎಂಬ ಲೆಕ್ಕಾಚಾರವಿದೆ. ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಇದೇ ದಾಟಿಯಲ್ಲಿ ಮಾತನಾಡಿದ್ದು, ಹೊಂದಾಣಿಕೆ ರಾಜಕಾರಣವನ್ನು ಪಕ್ಷ ಸಹಿಸಲ್ಲ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ರಾಜಿ ಇಲ್ಲ, ಬೆಳಗಾವಿಯಲ್ಲಿ 18ಕ್ಕೆ 18 ಸ್ಥಾನ ಗೆಲ್ಲುವ ಗುರಿ ನಮ್ಮದು ಎಂದಿದ್ದಾರೆ. ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಬೇಡ. ಗೆಲ್ಲುವ ಸಾಮರ್ಥ್ಯ ಇದ್ದವರಿಗೆ ಮಾತ್ರ ಅವಕಾಶ ಕೊಡಬೇಕು, ಇದೇ ನಿಮ್ಮ ನಿರ್ಣಯವಾಗಿರಲಿ ಎಂದು ಅಮಿತ್ ಷಾ ರಾಜ್ಯ ನಾಯಕರಿಗೆ ತಿಳಿಹೇಳಿದ್ದಾರೆ.
ಬೆಳಗಾವಿ: ಕೇಂದ್ರದಲ್ಲಿ ಕೃಷಿ ಬಜೆಟ್ ಗಾತ್ರ 2014ಕ್ಕೂ ಮುನ್ನ 39 ಸಾವಿರ ಕೋಟಿ ರೂ. ಇತ್ತು. ಬಿಜೆಪಿ ಅದನ್ನು 1.35 ಲಕ್ಷ ಕೋಟಿಗೆ ರೂ.ಗೆ ಹೆಚ್ಚಿಸಿದೆ. ಈ ಹಿಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಪರಿಚಯಿಸಿದ್ದರು. ಅದಕ್ಕೆ ಪಶುಸಂಗೋಪನೆ, ಮೀನುಗಾರಿಕೆ ಕ್ಷೇತ್ರಗಳನ್ನು ಜೋಡಿಸಿದ ಶ್ರೇಯ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜಕುಮಾರ್ ಚಹರ್ ಹೇಳಿದರು.
ನಗರದ ಮಯೂರ್ ಪ್ರೆಸಿಡೆನ್ಸಿ ಕ್ಲಬ್ನಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ರಾಷ್ಟ್ರೀಯ ರೈತ ಮೋರ್ಚಾ ಕಾರ್ಯಕಾರಿಣಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಯವ ಕೃಷಿ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಿ ಆರೋಗ್ಯಕರ ಸಮಾಜ ನಿರ್ವಿುಸುವ ಉದ್ದೇಶವನ್ನು ಈ ಬಾರಿ ರಾಷ್ಟ್ರೀಯ ಕಾರ್ಯಕಾರಿಣಿ ಹೊಂದಿದೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ನಾನು 2008ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರತ್ಯೇಕವಾಗಿ ಕೃಷಿ ಬಜೆಟ್ ಮಡಿಸಿದ್ದೆ. ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ಪಾಲು ಸೇರಿಸಿ, ರೈತರಿಗೆ ವಾರ್ಷಿಕ 10 ಸಾವಿರ ರೂ. ಸಹಾಯಧನ ಸಿಗುವಂತೆ ಮಾಡಿದ್ದೇನೆ. ಸರ್ಕಾರಿ ಕಾರ್ಯಕ್ರಮದಲ್ಲಿ ರೈತಗೀತೆ ಕಡ್ಡಾಯಗೊಳಿಸಿದ ಕೀರ್ತಿಯೂ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಇದರಿಂದ ರೈತರ ಆತ್ಮಾಭಿಮಾನ ಹೆಚ್ಚುವಂತಾಗಿದೆ. ದೇಶಾದ್ಯಂತ ರೈತರಿಗೆ ಪೂರಕವಾದ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ ಎಂದರು. ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ಕೊಂಕಣ, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲ ನಿರ್ಣಯಗಳನ್ನು ಕೈಗೊಂಡು ಅನುಷ್ಠಾನಕ್ಕಾಗಿ ಕೇಂದ್ರಕ್ಕೆ ಮನವಿ ನೀಡಲಾಗುವುದು ಎಂದರು. ಇದಕ್ಕೂ ಮುನ್ನ ನಗರದ ಕೋಟೆಕೆರೆಯಿಂದ ಮಯೂರ್ ಪ್ರೆಸಿಡೆನ್ಸಿ ಕ್ಲಬ್ವರೆಗೆ ಶೋಭಾಯಾತ್ರೆ ಜರುಗಿತು.
ಈಗಾಗಲೆ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಷ್ಟ್ರ ರಾಜಕಾರಣಕ್ಕೂ ಹೋಗುವುದಿಲ್ಲ. ನಾವು ಯಾವುದೇ ಕಾಂಪ್ರಮೈಸ್ ಮಾಡುವುದಿಲ್ಲ. ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕುತ್ತೇವೆ. | ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ ಹೊಂದಾಣಿಕೆ ರಾಜಕಾರಣವನ್ನು ಬಿಜೆಪಿ ಸಹಿಸುವುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ರಾಜ್ಯದಲ್ಲಿ 150ಕ್ಕೂ ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿ ಇದೆ. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಹುಬ್ಬಳ್ಳಿ: ಬೆಳಗಾವಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯ ನಾಯಕರಿಗೆ ವಿಶೇಷ ಸೂಚನೆಯನ್ನೇನೂ ಕೊಟ್ಟಿಲ್ಲ. ಆದರೆ, ರಾಜ್ಯ ಮಟ್ಟದಲ್ಲಿ ಚುನಾವಣಾ ತಯಾರಿ ಮಾಡಿಕೊಳ್ಳಲು ತಿಳಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿ.ಎಲ್. ಸಂತೋಷ್ ಪಕ್ಷದ ಸಂಘಟನಾತ್ಮಕ ವಿಷಯವಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಬಾಗಲಕೋಟೆ, ವಿಜಯಪುರಕ್ಕೆ ಭೇಟಿ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ವಿಚಾರವಿದ್ದರೂ ಅಂತಿಮವಾಗಿ ಪಕ್ಷದ ಹಿರಿಯರು ಹೇಳುವುದನ್ನು ನಾವು ಕೇಳುತ್ತೇವೆ. ಅದೇ ಆಗಿರುವುದು. ಬೆಳಗಾವಿಯಲ್ಲಿ ಭಿನ್ನಮತ ಇಲ್ಲ ಎಂದರು. ಚುನಾವಣೆ ಅಭ್ಯರ್ಥಿಗಳ ಪಟ್ಟಿ ವಿಷಯಕ್ಕೆ ಸಂಬಂಧಿಸಿ ಸಮೀಕ್ಷಾ ಕಾರ್ಯಗಳು ನಡೆಯುತ್ತಿವೆ. ಆದರೆ ಯಾವುದೂ ಅಧಿಕೃತವಾಗಿ ಆಗಿಲ್ಲ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಒಂದು ದಿನದ ಭೇಟಿ ಸಂಚಲನ ಉಂಟು ಮಾಡಿದ್ದು, ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿದೆ. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಬಹಳ ಗಟ್ಟಿ ಹಾಗೂ ಪ್ರಬಲವಾಗಿದೆ. ಅದಕ್ಕೆ ಇನ್ನಷ್ಟು ಶಕ್ತಿ, ಹುರುಪು, ಹುಮ್ಮಸ್ಸನ್ನು ಅಮಿತ್ ಷಾ ತುಂಬಿದ್ದಾರೆ. ಸಾರ್ವಜನಿಕರ ಭಾವನೆಗಳು ಎಲ್ಲ ಸಭೆಗಳಲ್ಲೂ ವ್ಯಕ್ತವಾಗಿವೆ ಎಂದರು. ಕಾಂಗ್ರೆಸ್ನವರು ತಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂದು ಪೋಸು ಕೊಡುತ್ತಿದ್ದಾರೆ. ಯಾರು ಏನೇ ಹೇಳಲಿ, ಸತ್ಯ ಬೇರೆಯೇ ಇದೆ. ನಮ್ಮ ನಾಯಕರು ಬಂದ ಸಂದರ್ಭದಲ್ಲಿ ಅದು ಅಭಿವ್ಯಕ್ತವಾಗುತ್ತಿದೆ. ಜನ ದೊಡ್ಡ ಸಂಖ್ಯೆಯಲ್ಲಿ ಬರುವುದಷ್ಟೇ ಅಲ್ಲ, ಹುರುಪು, ಸ್ಪೂರ್ತಿ ವ್ಯಕ್ತವಾಗುತ್ತಿರುವುದರಿಂದ ನಮ್ಮ ಗೆಲವು ಖಂಡಿತ ಎಂದರು.
ದೊಡ್ಡದು ಮಾಡಬೇಡಿ: ಮಂಡ್ಯ ಉಸ್ತುವಾರಿ ಸಚಿವರ ಬದಲಾವಣೆ ಆಗಿರುವುದಕ್ಕೆ ‘ಗೋ ಬ್ಯಾಕ್ ಅಶೋಕ್’ ಪ್ರತಿಭಟನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಯಾರೋ ನಾಲ್ವರು ಪ್ರತಿಭಟನೆ ಮಾಡುತ್ತಾರೆ. ಇದನ್ನು ಮಾಧ್ಯಮಗಳು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.
ಮೈಸೂರು: ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ, ಎಲ್ಲ ವರ್ಗದ ಜನರಿಗೂ ಈ ಬಾರಿ ನ್ಯಾಯ ಕಲ್ಪಿಸಿ ಜನಪರ ಬಜೆಟ್ ಮಂಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಿಬಿಸಿ ಬಿತ್ತರಿಸಿರುವ ಸಾಕ್ಷ್ಯಚಿತ್ರ ದೇಶದ ಚಾರಿತ್ರ್ಯ ಹರಣ ಮಾಡಿದೆ. ತಿರುಚಿ ಮಾಡಿರುವ ಈ ಸಾಕ್ಷ್ಯ ಚಿತ್ರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ಮಾಡಬೇಕಿತ್ತು. ಆದರೆ, ಅವರಿಗೆ ಆ ಪ್ರವೃತ್ತಿಯೇ ಇಲ್ಲ. ನಾನೇನು ಮಾಡಲಿ ಎಂದರು. ಕಾಗಿನೆಲೆ ಮಠದ ಶ್ರೀಗಳು ನಮ್ಮ ಗುರುಗಳು. ನಾನು ಅವರ ಮೈಕ್ ಅನ್ನು ಕಿತ್ತುಕೊಳ್ಳಲಿಲ್ಲ. ಕೆಲ ವಿಚಾರಕ್ಕೆ ಸ್ಪಷ್ಟನೆ ನೀಡಿರುವಷ್ಟೇ. ನಂತರ ನಾನು ಮಾತನಾಡಿದೆ, ಅವರೂ ಮಾತನಾಡಿದರು. ಅಲ್ಲಿ ಎಂಎಲ್ಸಿ ವಿಶ್ವನಾಥ್ ಇರಲಿಲ್ಲ, ಹೀಗಾಗಿ ಅವರಿಗೆ ಗೊತ್ತಿಲ್ಲ ಎಂದು ಹೇಳಿದರು.