25 ಕಾರ್ಯಕರ್ತರ ಜತೆ ಅಮಿತ್ ಷಾ ಮಾತುಕತೆ

amit
Published on

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧತೆಯ ಮುಂದುವರಿದ ಭಾಗವಾಗಿ ಮೇ 3ರಂದು ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯ ಸರ್ಕಾರ ಹಾಗೂ ಪಕ್ಷದ ಸಂಘಟನೆ ಕುರಿತಂತೆ ಆಯ್ದ 25 ಕಾರ್ಯಕರ್ತರು ಮತ್ತು ಮುಖಂಡರ ಅಭಿಪ್ರಾಯದ ದನಿಗೆ ಕಿವಿಯಾಗಲಿದ್ದಾರೆ. ವಿಧಾನಸಭಾ ಚುನಾವಣೆಗೆ ವರ್ಷ ಇರುವುದರಿಂದ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದು ಷಾ ಯೋಜನೆ. ಅಧಿಕೃತ ಕಾರ್ಯಕ್ರಮಗಳ ಹೆಸರಲ್ಲಿ ರಾಜ್ಯ ಭೇಟಿ ನಿಗದಿಯಾಗಿದ್ದರೂ ಪಕ್ಷದ ಚಟುವಟಿಕೆಗಳಿಗೆ ಒತ್ತು ನೀಡುತ್ತಿದ್ದಾರೆ. ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಷಾ ಉದ್ದೇಶವಾಗಿದೆ. ಆದ್ದರಿಂದಲೇ ಸಂಘಟನೆ ಕುರಿತಂತೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಮಾಹಿತಿ ಗೌಪ್ಯ: ಅಮಿತ್ ಷಾ ಯಾರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿಯನ್ನು ಬಿಜೆಪಿ ರಾಜ್ಯ ಘಟಕಕ್ಕೂ ನೀಡಿಲ್ಲ. ನೇರವಾಗಿ ಅವರ ಕಚೇರಿಯಿಂದಲೇ ಕೆಲವರಿಗೆ ಮಾಹಿತಿ ನೀಡಲಾಗಿದೆ. ಅದರಲ್ಲಿ ಹಿರಿಯ, ಕಿರಿಯ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರಿದ್ದಾರೆ. ರಾಜ್ಯದ ಎಲ್ಲ ಭಾಗಗಳಿಂದಲೂ ಆಯ್ಕೆ ಮಾಡಲಾಗಿದೆ.

ಷಾ ಮೇ 2 ರಂದು ರಾತ್ರಿಯೇ ಬೆಂಗಳೂರಿಗೆ ಬರಲಿದ್ದಾರೆ. ಅಂದು ರಾತ್ರಿ ಪಕ್ಷದ ಮುಖಂಡರನ್ನು ಭೇಟಿ ಮಾಡುವರೇ ಅಥವಾ ಇಲ್ಲವೇ ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ ಅವರು ಬಿಜೆಪಿ ಕಚೇರಿಯಲ್ಲಿಯೇ 25 ಜನರ ಜತೆ ವೈಯಕ್ತಿಕ ಚರ್ಚೆಯ ನಂತರವಷ್ಟೇ ಪಕ್ಷದ ಹಿರಿಯ ಮುಖಂಡರ ಜತೆ ಮಾತುಕತೆ ಮಾಡಿ ಸಂಘಟನೆಗೆ ಸಂಬಂಧಿಸಿದಂತೆ ಒಂದಷ್ಟು ಮಾರ್ಗದರ್ಶನ ಮಾಡುವ ಸಾಧ್ಯತೆಗಳಿವೆ. ಚುನಾವಣೆ ಮುಗಿಯುವ ತನಕ ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಆಗಾಗ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಚರ್ಚೆ ಸಾಧ್ಯತೆ

* ಚುನಾವಣೆ ಗೆಲ್ಲುವುದಕ್ಕಾಗಿ ಏನೇನು ಬದಲಾವಣೆ ಅಗತ್ಯವಿದೆ

*ಯಾವ ಯಾವ ಕಾರ್ಯತಂತ್ರಗಳನ್ನು ಅನುಸರಿಸಬೇಕು

*ಪಕ್ಷದ ಪರಿಸ್ಥಿತಿ ಎಲ್ಲೆಲ್ಲಿ ಹೇಗಿದೆ?

*ಯಾವ ಯಾವ ಜಾತಿಗೆ ಮನ್ನಣೆ ನೀಡಬೇಕು?

*ಯಾವ ವಿಷಯಗಳನ್ನಿಟ್ಟು ಚುನಾವಣೆ ಎದುರಿಸಬೇಕು?

*ಪ್ರತಿಪಕ್ಷಗಳ ದೌರ್ಬಲ್ಯಗಳೇನು, ಅವುಗಳನ್ನು ಜನರ ಮುಂದೆ ಹೇಗೆ ಬಿಂಬಿಸಬೇಕು?

*ಒಂದು ವರ್ಷದಲ್ಲಿ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗಬೇಕು?

ಷಾ ಕಾರ್ಯಕ್ರಮ

*ಮೇ 2ರ ರಾತ್ರಿ ಬೆಂಗಳೂರಿಗೆ ಆಗಮನ

*3ರ ಬೆಳಗ್ಗೆ ಬಸವೇಶ್ವರ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ

* ನೃಪತುಂಗ ವಿಶ್ವವಿದ್ಯಾಲಯದ ಕ್ಯಾಂಪಸ್​ಗೆ ಶಿಲಾನ್ಯಾಸ

* ಯಲಹಂಕದಲ್ಲಿ ಕೇಂದ್ರ ಗೃಹ ಸಚಿವಾಲಯದ ಕಾರ್ಯಕ್ರಮ

* ಮಧ್ಯಾಹ್ನ ಬಿಜೆಪಿ ಕಚೇರಿಗೆ ಭೇಟಿ

* ಸಂಜೆ ಖೇಲೋ ಇಂಡಿಯಾ ಸಮಾರೋಪ

ಮೇ 2 ಸೋಮವಾರ

*ರಾತ್ರಿ 11.30ಕ್ಕೆ ಬೆಂಗಳೂರಿಗೆ ಆಗಮನ

*ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ವಾಸ್ತವ್ಯ

*ಮೇ 3, ಬೆಳಗ್ಗೆ 9.55ಕ್ಕೆ ಬಸವೇಶ್ವರ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ

* 10.30ಕ್ಕೆ ನೃಪತುಂಗ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗಿ

* ಮಧ್ಯಾಹ್ನ 12ಕ್ಕೆ ಸಾತನೂರಿನಲ್ಲಿ ನ್ಯಾಟ್​ಗ್ರಿಡ್ ಕಾರ್ಯಕ್ರಮದಲ್ಲಿ ಭಾಗಿ

* 1.35ಕ್ಕೆ ಮುಖ್ಯಮಂತ್ರಿ ನಿವಾಸದಲ್ಲಿ ಭೋಜನ

* ಮಧ್ಯಾಹ್ನ 2.30 ರಿಂದ ಸಂಜೆ 5 ತನಕ ಬಿಜೆಪಿ ಕಚೇರಿಯಲ್ಲಿ ವಿವಿಧ ಸಭೆ

* ಸಂಜೆ 5.30 ರಿಂದ 7 ತನಕ ಖೇಲೋ ಇಂಡಿಯಾ ಸಮಾರೋಪ

* ರಾತ್ರಿ 7.35ಕ್ಕೆ ಎಚ್​ಎಎಲ್ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ

ಮಂಡ್ಯ ಕಾರ್ಯಕ್ರಮ ಈಗ ಇಲ್ಲ: ಅಮಿತ್ ಷಾ ಮಂಡ್ಯದಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಲವು ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಪಕ್ಷಕ್ಕೆ ಸೇರುವವರು ಯಾರು ಎಂಬುದು ಅಂತಿಮವಾಗದ ಕಾರಣ ಈ ಭೇಟಿಯ ವೇಳೆ ಮಂಡ್ಯದಲ್ಲಿ ಕಾರ್ಯಕ್ರಮ ಇಲ್ಲ.

ಸಿಎಂ ಮನೆಯಲ್ಲಿ ಔತಣ: ಅಮಿತ್ ಷಾ ಮೇ 3ರ ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಮನೆಯಲ್ಲಿ ಭೋಜನ ಸವಿಯಲಿದ್ದಾರೆ. ಈ ಬೆಳವಣಿಗೆ ಬಿಜೆಪಿ ವಲಯದಲ್ಲಿ ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಷಾ ದೆಹಲಿಗೆ ವಾಪಸಾದ ನಂತರವಷ್ಟೇ ಎಲ್ಲ ಚರ್ಚೆಗೆ ಉತ್ತರ ಸಿಗಲಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net