

ಜೈಪುರ: ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಕಳೆದ ಕೆಲವು ದಿನಗಳಿಂದ ಸ್ಥಿರವಾಗಿಲ್ಲ. ಸದ್ಯ ತಾವು ಸೇಫ್ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣ ಹೇಳುತ್ತಿದ್ದರೂ ಕೂಡ, ಸಚಿನ್ ಪೈಲಟ್ ಮತ್ತು ಅವರ ಬಣ ಒಪ್ಪುತ್ತಿಲ್ಲ. ವಿಶ್ವಾಸ ಮತ ಯಾಚನೆ ಮಾಡಿ, ಬಹುಮತ ಸಾಬೀತು ಪಡಿಸಿ ಎಂದು ಹೇಳಿದೆ.
ಈ ಮಧ್ಯೆ ಬಿಜೆಪಿ ಕೂಡ ಸಚಿನ್ ಪೈಲಟ್ ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳಿದ್ದಾರೆ. ಆದರೆ ರಾಜಸ್ಥಾನ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೂ, ನಮಗೂ ಸಂಬಂಧವಿಲ್ಲ. ಶಾಸಕರು, ಸಚಿನ್ ಪೈಲಟ್ ರೆಬಲ್ ಆಗಿದ್ದರ ಹಿಂದೆ ನಮ್ಮದೇನೂ ಪಾತ್ರವಿಲ್ಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ನಾಳೆ (ಜು.15ರಂದು) ಜೈಪುರಲ್ಲಿ ಬಿಜೆಪಿ ನಾಯಕರು ಸಭೆ ನಡೆಸಲಿದ್ದು, ರಾಜ್ಯದ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಶ್ಮೀರದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು ಸಚಿನ್ ಪೈಲಟ್-ಸಾರಾ ಮದುವೆ; ಅನೇಕರಿಗೆ ಗೊತ್ತಿಲ್ಲದ ಸಂಗತಿ ಇದು..
ಮುಖ್ಯವಾಗಿ ಈ ಸಭೆಯಲ್ಲಿ ರಾಜಸ್ಥಾನ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕಿ ವಸುಂಧರಾ ರಾಜೆ ಪಾಲ್ಗೊಳ್ಳಲಿದ್ದಾರೆ. ಧೋಲ್ಪುರದಿಂದ ನಾಳೆ ಅವರು ಜೈಪುರಕ್ಕೆ ಆಗಮಿಸಿದ ಬಳಿಕ ಸಭೆ ಪ್ರಾರಂಭವಾಗಲಿದೆ ಎನ್ನಲಾಗಿದೆ. ವಸುಂಧರಾ ರಾಜೆ ನೇತೃತ್ವದಲ್ಲಿ ಸಭೆ ನಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಜಸ್ಥಾನದ ಪ್ರಮುಖ ಬಿಜೆಪಿ ಲೀಡರ್ ಆಗಿರುವ ವಸುಂಧರಾ ರಾಜೆ ಕಳೆದ ಮೂರು ದಿನಗಳಿಂದಲೂ ಜೈಪುರದಲ್ಲಿ ಇಲ್ಲ. ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೋಸ್ಕರ ನಾಳೆ ಇಲ್ಲಿಗೆ ಬರುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್)