ಲಾಕ್​ಡೌನ್​ ನಡುವೆಯೂ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, 10 ಗ್ರಾಂಗೆ 45,600 ರೂ.

gold
Published on

ನವದೆಹಲಿ: ದೇಶಾದ್ಯಂತ ಕೋವಿಡ್​ 19 ಲಾಕ್​ಡೌನ್​ ಜಾರಿಯಲ್ಲಿದೆ. ಖರೀದಿಗೆ ಬೇಡಿಕೆಯೇ ಇಲ್ಲದಿದ್ದರೂ ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಸದ್ಯ 10 ಗ್ರಾಂ ಬಂಗಾರದ ದರ 45,600 ರೂ. ತಲುಪಿದೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಭೌತಿಕವಾಗಿ ಚಿನ್ನದ ಖರೀದಿಗೆ ಅವಕಾಶ ಇಲ್ಲದಾಗಿದೆ. ಆದರೆ, ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆಯಾಗಿರುವುದರಿಂದ, ಭಾರತದಲ್ಲಿ ಕೂಡ ಹಳದಿ ಲೋಹದ ಬೆಲೆ ಹೆಚ್ಚಳವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಚಿನ್ನದ ಬೆಲೆ ಶೇ.12.5 ಆಮದು ಸುಂಕ ಮತ್ತು ಶೇ.3 ಜಿಎಸ್​ಟಿಯನ್ನು ಒಳಗೊಂಡಿದೆ.

ಕಳೆದ ವಾರ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಹಿವಾಟುದಾರರು ಬೆಲೆ ಹೆಚ್ಚಳದ ಲಾಭ ಪಡೆಯಲು ಮುಂದಾಗಿ, ಚಿನ್ನವನ್ನು ಮಾರಾಟ ಮಾಡಿದ್ದರು. ಇದರಿಂದಾಗಿ ಚಿನ್ನದ ಬೆಲೆ ಕುಸಿದಿತ್ತು.

ಅಮೆರಿಕದಲ್ಲಿ ಲಾಕ್​ಡೌನ್​ನಿಂದಾಗಿ ನಿರುದ್ಯೋಗಿಗಳಲ್ಲಿ ಹೆಚ್ಚಳವಾಗಿ ಅವರೆಲ್ಲರೂ ಪರಿಹಾರಧನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಇಡಲಾರಂಭಿಸಿದ್ದರು. ಈ ಕಾರಣಕ್ಕಾಗಿ ಅಮೆರಿಕದ ಫೆಡರಲ್​ ರಿಸರ್ವ್​ ಗುರುವಾರ 2.3 ಸಹಸ್ರ ಕೋಟಿ ಡಾಲರ್​ ಉತ್ತೇಜಕಗಳನ್ನು ಪ್ರಕಟಿಸಿತ್ತು. ಇದು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net