

ಬೆಂಗಳೂರು: ಕರೊನಾ ಕಾರಣ ದೇಶ ವಿದೇಶದಲ್ಲಿ ಕೋಟ್ಯಂತರ ಜನರು ಕರೊನಾದಿಂದಾಗಿ ಕೆಲಸ ಕಳೆದುಕೊಂಡು ಮನೆ ಸೇರುತ್ತಿರುವ ಸಂದರ್ಭದಲ್ಲೇ ಕೆಲವು ಕ್ಷೇತ್ರಗಳಲ್ಲಿ ಹೊಸ ಕೆಲಸಗಾರರಿಗೆ ಬೇಡಿಕೆಯುಂಟಾಗಿದೆ. ಅಗತ್ಯ ಸೇವೆಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನೇಮಕಾತಿ ಆರಂಭವಾಗಿದೆ.
ಶಾಲಾ-ಕಾಲೇಜುಗಳು ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ಶಿಕ್ಷಣ ನೀಡಲು ಆರಂಭಿಸಿರುವುದರಿಂದಾಗಿ ಎಜುಟೆಕ್ನಲ್ಲಿ ಸಿಬ್ಬಂದಿಗೆ ಬೇಡಿಕೆಯಿದೆ. 80 ದಿನಗಳ ಕಾಲ ಬಾಗಿಲು ಮುಚ್ಚಿದ್ದ ಇ-ಕಾಮರ್ಸ್ಗಳು ಇದೀಗ ಅಗತ್ಯ ವಸ್ತುಗಳೊಂದಿಗೆ ಎಲ್ಲ ರೀತಿಯ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಪುನರಾರಂಭಿಸಿವೆ. ಈ ಕ್ಷೇತ್ರದಲ್ಲಿದ್ದ ಅನೇಕರು ತಮ್ಮೂರಿಗೆ ಹೋಗಿರುವುದರಿಂದ ಕೆಲಸ ಖಾಲಿ ಉಳಿದುಕೊಂಡಿವೆ. ಉಳಿದಂತೆ ಡಾಟಾ ಪ್ರೊಸೆಸಿಂಗ್, ಪೂರೈಕೆ ಸರಪಳಿ ನಿರ್ವಹಣೆ, ಬ್ಯಾಂಕಿಂಗ್, ಎಫ್ಎಂಸಿಜಿ, ಆರೋಗ್ಯ ಸೇವೆ, ಜೀವ ವಿಮೆ, ತಂತ್ರಜ್ಞಾನ ತಜ್ಞರು, ಫಿನ್ಟೆಕ್ ಮತ್ತು ಫಾರ್ವ ಕ್ಷೇತ್ರಗಳಲ್ಲಿ ಸಿಬ್ಬಂದಿಗೆ ಬೇಡಿಕೆ ಉಂಟಾಗಿದೆ.
ಲಾಕ್ಡೌನ್ ಸಮಯದಲ್ಲಿ ಭಾರತದ 12 ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ದೇಶದ ಆರ್ಥಿಕತೆಯನ್ನು ಮೇಲ್ವಿಚಾರಣಾ ಕೇಂದ್ರ (ಸಿಎಂಐಇ) ತಿಳಿಸಿದೆ. ಕೆಲಸ ಕಳೆದುಕೊಳ್ಳುತ್ತಿರುವವರ ಜತೆಯಲ್ಲೇ ಇದೀಗ ಪದವಿ ಪಡೆದು ಬಂದಿರುವ ವಿದ್ಯಾರ್ಥಿಗಳ ನೇಮಕಾತಿಯೂ ಒಂದು ಸಮಸ್ಯೆಯಾಗಿತ್ತು. ಲಾಕ್ಡೌನ್ಗೂ ಮೊದಲಿಗೆ ಹೋಲಿಸಿದರೆ ಲಾಕ್ಡೌನ್ ಸಮಯದಲ್ಲಿ ದೇಶದ ನೇಮಕಾತಿ ಪ್ರಮಾಣ ಶೇ. 80 ಕುಸಿತ ಕಂಡಿತ್ತು ಎನ್ನಲಾಗಿದೆ. ಆದರೆ, ನೇಮಕಾತಿ ಪ್ರಮಾಣ ಇದೀಗ ಶೇ. 50ಕ್ಕೆ ಚೇತರಿಕೆ ಕಂಡಿದೆ. ಕರೊನಾ ಬಿಕ್ಕಟ್ಟು ಹೆಚ್ಚಳವಾಗುತ್ತಿರುವ ಕಾರಣ ಬಹುತೇಕ ರಾಜ್ಯಗಳಲ್ಲಿ ವೈದ್ಯರು, ನರ್ಸ್ಗಳು, ಪ್ಯಾರಾ ಮೆಡಿಕ್ಸ್ ಸೇರಿದಂತೆ ಅನೇಕ ಕೆಲಸಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ (ಎಫ್ಎಂಸಿಜಿ) ಉತ್ಪಾದಕರು, ಮಾರಾಟಗಾರರು ಮತ್ತು ಲಾಜಿಸ್ಟಿಕ್ಸ್ ವೃತ್ತಿಪರರಿಗೆ ಬೇಡಿಕೆಯಿದೆ. ಇ-ಕಾಮರ್ಸ್ ಸಂಸ್ಥೆಗಳು ಡೆಲಿವರಿ ಮಾಡುವುದಕ್ಕೆ ಜನರಿಲ್ಲವೆಂದು ಕೊರಗುತ್ತಿವೆ. ಅನೇಕ ಸ್ಥಳಗಳಲ್ಲಿ ಮನೆಕೆಲಸಗಾರರು ಬೇಕೆನ್ನುವ ಕೋರಿಕೆಯಿದೆ. ಸೈಬರ್ ಸೆಕ್ಯುರಿಟಿ ಸಿಬ್ಬಂದಿಗಳ ನೇಮಕಾತಿ ನಡೆಸಲಾಗುತ್ತಿದೆ. ಎಲ್ಲ ಕ್ಷೇತ್ರದಲ್ಲು ದೈಹಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿರುವುದರಿಂದಾಗಿ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಫಿನ್ಟೆಕ್ ಮತ್ತು ಡಿಜಿಟಲ್ ಪಾತ್ರ ಮುಖ್ಯವಾಗಿದ್ದು ಉತ್ತಮ ಕೋಡಿಂಗ್ ಜ್ಞಾನ ಹೊಂದಿರುವವರಿಗೆ ಅವಕಾಶಗಳು ಒದಗಿ ಬರುತ್ತಿವೆ.