ಅಮೆರಿಕದ ಚಿಪ್ ಪ್ರಹಾರ, ಚೀನಾ ತತ್ತರ: ಡ್ರ್ಯಾಗನ್ ಆಕ್ಷೇಪ

Chip
Published on
ಅಮೆರಿಕವು ಚೀನಾದ ವಿರುದ್ಧ ವಿಶೇಷ ಅಸ್ತ್ರವೊಂದನ್ನು ಪ್ರಯೋಗಿಸಿದೆ. ಬಲಾಢ್ಯ ಮಿಲಿಟರಿ ಹಾಗೂ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುವ ಚೀನಾದ ಗುರಿಯನ್ನು ಹೊಡೆಯುವ ಉದ್ದೇಶ ಇದರದ್ದಾಗಿದೆ. ಅಮೆರಿಕದ ಬತ್ತಳಿಕೆಯಿಂದ ಹೊರಹೊಮ್ಮಿದ ಈ ವಿನೂತನ ಅಸ್ತ್ರವೇ ‘ಚಿಪ್’!

ಚೀನಾದ ಟೆಲಿಕಾಂ ಕಂಪನಿ ಹುವೇ ಟೆಕ್ನಾಲಜೀಸ್ ಸಂಸ್ಥೆ ವಿರುದ್ಧ ಎರಡು ವರ್ಷಗಳ ಹಿಂದೆಯೇ ಅಮೆರಿಕವು ಚಿಪ್ ಅಸ್ತ್ರವನ್ನು ಪ್ರಯೋಗಿಸಿತ್ತು. ರಷ್ಯಾದ ವಿರುದ್ಧವೂ ಕೆಲ ತಿಂಗಳುಗಳ ಹಿಂದೆ ಇದನ್ನು ಬಳಸಿದೆ. ಈಗ ಚೀನಾ ದೇಶದ ಒಟ್ಟಾರೆ ಕಂಪ್ಯೂಟಿಂಗ್ ಮತ್ತು ಸೂಪರ್ ಕಂಪ್ಯೂಟರ್ ಉದ್ಯಮದ ಮೇಲೆಯೇ ಈ ಆಯುಧದ ಮೂಲಕ ಪ್ರಹಾರವನ್ನೇ ಅಮೆರಿಕ ಮಾಡಿದೆ.

ಕಂಪ್ಯೂಟರ್, ಟಿವಿ, ಮೊಬೈಲ್​ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೆ ಚಿಪ್​ಗಳು ಅತ್ಯಗತ್ಯ. ವಾಹನ ಹಾಗೂ ಇತರ ಆಟೊಮೊಬೈಲ್ ಉಪಕರಣಗಳಿಗೂ ಇವು ಬೇಕೇ ಬೇಕು. ಬಹುತೇಕ ಅತ್ಯಾಧುನಿಕ ಚಿಪ್​ಗಳು ತಯಾರಾಗುವುದು ಅಮೆರಿಕ ತಂತ್ರಜ್ಞಾನ ಹಾಗೂ ಅಮೆರಿಕದ ಉಪಕರಣಗಳ ಮೂಲಕವೇ. ಹೀಗಾಗಿ, ತನ್ನ ತಂತ್ರಜ್ಞಾನ ಮತ್ತು ತಯಾರಿಕೆ ಉಪಕರಣಗಳು ಚೀನಾಗೆ ಸಿಗದಂತೆ ಮಾಡಲು ಅಮೆರಿಕ ಕ್ರಮ ಕೈಗೊಂಡಿದೆ. ಅಲ್ಲದೆ, ಅಮೆರಿಕದ ತಯಾರಿಕೆ ಉಪಕರಣಗಳನ್ನು ಬಳಸಿಕೊಂಡು ಬೇರೆ ದೇಶಗಳಲ್ಲಿ ತಯಾರಾಗುವ ಚಿಪ್​ಗಳು ಕೂಡ ಚೀನಾಗೆ ಲಭ್ಯವಾಗದಂತೆ ಚಕ್ರವ್ಯೂಹವನ್ನು ಅಮೆರಿಕ ಹೆಣೆದಿದೆ. ಇದಕ್ಕಾಗಿ ಕಳೆದ ಶುಕ್ರವಾರವಷ್ಟೇ ಅಮೆರಿಕವು ವಿದೇಶಿ ನೇರ ಉತ್ಪನ್ನ ನಿಯಮವನ್ನು (ಎಫ್​ಡಿಪಿಆರ್) ಚೀನಾದ ಸುಧಾರಿತ ಕಂಪ್ಯೂಟಿಂಗ್ ಮತ್ತು ಸೂಪರ್​ಕಂಪ್ಯೂಟರ್ ಉದ್ಯಮಕ್ಕೆ ಅನ್ವಯಿಸುವ ನಿರ್ಣಯ ಕೈಗೊಳ್ಳುವ ಮೂಲಕ ಚಿಪ್ ಚಕ್ರವ್ಯೂಹವನ್ನು ಬಲಗೊಳಿಸಿದೆ.

2020ರ ಆಗಸ್ಟ್​ನಲ್ಲಿಯೇ ಚೀನಾದ ಟೆಲಿಕಾಂ ಸಂಸ್ಥೆ ಹುವೇ ಟೆಕ್ನಾಲಜೀಸ್ ಕಂಪನಿಗೆ ಸೆಮಿಕಂಡಕ್ಟರ್ ಚಿಪ್ ಪೂರೈಕೆ ನಿರ್ಬಂಧಿಸಲು ಅಮೆರಿಕ ಸರ್ಕಾರ ಕ್ರಮ ಕೈಗೊಂಡಿತ್ತು. ಹುವೇ ಕಂಪನಿಗೆ ಅಮೆರಿಕದ ಕಂಪನಿಗಳು ಚಿಪ್ ಒದಗಿಸುವುದನ್ನು ತಡೆಯಲಾಗಿತ್ತು. ಆದರೆ, ಈ ಕಂಪನಿಗೆ ಅಮೆರಿಕದ ಹೊರಗಿನ ಕಾರ್ಖಾನೆಗಳಲ್ಲಿ ತಯಾರಿಸಿದ ಚಿಪ್​ಗಳು ಪೂರೈಕೆ ಆಗುತ್ತಿವೆ ಎಂಬ ಸಂಗತಿಯು ನಂತರದಲ್ಲಿ ಗಮನಕ್ಕೆ ಬಂದಿತು. ಅಮೆರಿಕದ ಹೊರಗೆ ಚಿಪ್ ತಯಾರಿಸುವ ಕಾರ್ಖಾನೆಗಳು ಕೂಡ ಚಿಪ್ ತಯಾರಿಸಲು ಬಳಸುತ್ತಿರುವುದು ಅಮೆರಿಕದ ಆಧುನಿಕ ಉಪಕರಣಗಳನ್ನೇ. ಹೀಗಾಗಿ, ಎಫ್​ಡಿಪಿಆರ್ ಜಾರಿಗೊಳಿಸುವ ಮೂಲಕ ಅಮೆರಿಕದ ಹೊರಗಿನ ಕಾರ್ಖಾನೆಗಳು ಕೂಡ ಚೀನಾಗೆ ಚಿಪ್ ಪೂರೈಸುವುದರ ಮೇಲೆ ಅಮೆರಿಕ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಮೂಲಕ ಹುವೇ ಸೇರಿದಂತೆ ಚೀನಾ ಕಂಪನಿಗಳ ಸ್ಮಾರ್ಟ್ ಫೋನ್ ವ್ಯವಹಾರಕ್ಕೆ ಬಹುದೊಡ್ಡ ಪೆಟ್ಟನ್ನೇ ಅಮೆರಿಕ ನೀಡಿದೆ. ಯೂಕ್ರೇನ್ ಮೇಲೆ ಯುದ್ಧ ಆರಂಭಿಸಿದ ನಂತರ ರಷ್ಯಾ ಹಾಗೂ ಬೆಲಾರಸ್ ದೇಶಗಳ ವಿರುದ್ಧವೂ ಇಂತಹುದೇ ಕ್ರಮವನ್ನು ಅಮೆರಿಕ ಕೈಗೊಂಡಿದೆ.

ಅಮೆರಿಕದ ಈ ಕ್ರಮವು ಅಂತಾರಾಷ್ಟ್ರೀಯ ಆರ್ಥಿಕ ಮತ್ತು ವ್ಯಾಪಾರ ನಿಯಮಗಳ ಉಲ್ಲಂಘನೆ ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ‘ತನ್ನ ವೈಜ್ಞಾನಿಕ-ತಂತ್ರಜ್ಞಾನದ ಪ್ರಾಬಲ್ಯವನ್ನು ಕಾಪಾಡಿಕೊಳ್ಳುವ ಅಗತ್ಯತೆಯಿಂದಾಗಿ, ಚೀನಾದ ಕಂಪನಿಗಳನ್ನು ದುರುದ್ದೇಶಪೂರಿತವಾಗಿ ನಿರ್ಬಂಧಿಸಲು ಮತ್ತು ನಿಗ್ರಹಿಸಲು ಅಮೆರಿಕವು ರಫ್ತು ನಿಯಂತ್ರಣ ಕ್ರಮಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ಟೀಕಿಸಿದ್ದಾರೆ. ಇದು ಚೀನೀ ಕಂಪನಿಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಹಾನಿಗೊಳಿಸುವುದಲ್ಲದೆ, ಅಮೆರಿಕದ ಕಂಪನಿಗಳ ಹಿತಾಸಕ್ತಿಗಳ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಶಸ್ತ್ರಾಸ್ತ್ರೀಕರಣ ಮತ್ತು ರಾಜಕೀಯಕರಣ ಹಾಗೂ ಆರ್ಥಿಕ ಮತ್ತು ವ್ಯಾಪಾರ ಸಮಸ್ಯೆಗಳು ಚೀನಾದ ಪ್ರಗತಿಯನ್ನು ತಡೆಯುವುದಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಏನಿದು ಎಫ್​ಡಿಪಿಆರ್?: ವಿದೇಶಿ ನೇರ ಉತ್ಪನ್ನ ನಿಯಮ (ಎಫ್​ಡಿಪಿಆರ್) ಎಂಬ ನಿಬಂಧನೆಯನ್ನು ಅಮೆರಿಕದ ತಂತ್ರಜ್ಞಾನಗಳ ವ್ಯಾಪಾರವನ್ನು ನಿಯಂತ್ರಿಸಲು 1959ರಲ್ಲಿ ಮೊದಲು ಪರಿಚಯಿಸಲಾಯಿತು. ಅಮೆರಿಕದ ತಂತ್ರಜ್ಞಾನವನ್ನು ಬಳಸಿಕೊಂಡು ಯಾವುದಾದರೂ ಉತ್ಪನ್ನವನ್ನು ತಯಾರಿಸಿದರೆ, ಅದನ್ನು ಮಾರಾಟ ಮಾಡುವುದನ್ನು ತಡೆಯುವ ಅಧಿಕಾರವನ್ನು ಈ ನಿಯಮವು ಅಮೆರಿಕ ಸರ್ಕಾರಕ್ಕೆ ನೀಡುತ್ತದೆ. ವಿದೇಶಿ ನೆಲದಲ್ಲಿ ತಯಾರಿಸಿದ ಉತ್ಪನ್ನಗಳಿಗೂ ಈ ನಿಯಮ ಅನ್ವಯವಾಗುತ್ತದೆ.

10 ವರ್ಷ ಹಿನ್ನಡೆ: ಈಗಾಗಲೇ ಹಲವಾರು ಚೀನೀ ಸೂಪರ್​ಕಂಪ್ಯೂಟಿಂಗ್ ಕಂಪನಿಗಳನ್ನು ನಿರ್ಬಂಧಿತ ಪಟ್ಟಿಯಲ್ಲಿ ಅಮೆರಿಕ ಇರಿಸಿದ್ದು, ಚಿಪ್ ಪೂರೈಸುವುದನ್ನು ಕಡಿತಗೊಳಿಸಿದೆ. ಈ ಕಂಪನಿಗಳು ತಮ್ಮದೇ ಆದ ಚಿಪ್​ಗಳನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿವೆ. ಆದರೆ, ಚಿಪ್​ಗಳನ್ನು ತಯಾರಿಸಲು ಚೀನಾ ಕಂಪನಿಗಳು ಇದುವರೆಗೆ ಅವಲಂಬಿಸಿದ್ದು ಅಮೆರಿಕದ ಅತ್ಯಾಧುನಿಕ ಉಪಕರಣಗಳನ್ನೇ. ಈಗ ತಮ್ಮದೇ ಆದ ಉತ್ಪಾದನಾ ತಂತ್ರಜ್ಞಾನಗಳನ್ನು ಹಾಗೂ ಚಿಪ್ ತಯಾರಿಕೆ ಉಪಕರಣಗಳನ್ನು ಈ ಕಂಪನಿಗಳು ಅಭಿವೃದ್ಧಿಪಡಿಸಬೇಕಾಗುತ್ತದೆ. ಇದೆಲ್ಲ ಸಾಧ್ಯವಾಗಬೇಕಾದರೆ 10 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ, ಚಿಪ್ ಉದ್ಯಮದಲ್ಲಿ ಚೀನಾ ಒಂದು ದಶಕದಷ್ಟು ಹಿನ್ನಡೆ ಅನುಭವಿಸುವಂತಾಗಿದೆ.

ಶಸ್ತ್ರಾಸ್ತ್ರ ತಯಾರಿಕೆಗೆ ಹೊಡೆತ: ಅಮೆರಿಕದ ತಂತ್ರಜ್ಞಾನ ಮತ್ತು ಉಪಕರಣಗಳ ಮೂಲಕ ತಯಾರಾಗುವ ಅತ್ಯಾಧುನಿಕ ಸೆಮಿಕಂಡಕ್ಟರ್ ಚಿಪ್​ಗಳನ್ನು ಚೀನಾವು ಅತ್ಯಾಧುನಿಕ ಮಿಲಿಟರಿ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಬಳಸುತ್ತದೆ ಎಂಬ ಪ್ರಮುಖ ಕಾರಣಕ್ಕಾಗಿಯೂ ಅಮೆರಿಕವು ಈ ನಿರ್ಬಂಧವನ್ನು ಕೈಗೊಂಡಿದೆ. ‘ಮಿಲಿಟರಿ ಬಳಕೆಗಾಗಿ ಸೂಕ್ಷ್ಮ ತಂತ್ರಜ್ಞಾನಗಳನ್ನು ಚೀನಾ ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ಅಮೆರಿಕ ಎಲ್ಲವನ್ನೂ ಮಾಡುತ್ತಿದೆ’ ಎಂದು ಅಮೆರಿಕದ ವಾಣಿಜ್ಯ ವಿಭಾಗದ ಹಿರಿಯ ಅಧಿಕಾರಿ ಅಲನ್ ಎಸ್ಟೆವೆಜ್ ಹೇಳಿದ್ದಾರೆ. ಅಣ್ವಸ್ತ್ರ ಹಾಗೂ ಮಿಲಿಟರಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸೂಪರ್ ಕಂಪ್ಯೂಟಿಂಗ್ ವ್ಯವಸ್ಥೆಗಳಲ್ಲಿ ಉಪಯೋಗಿಸುವ ಚಿಪ್​ಗಳನ್ನು ಪೂರೈಸದಂತೆ ಪ್ರಮುಖ ಮೆಮೊರಿ ಚಿಪ್ ತಯಾರಕ ಕಂಪನಿಗಳಾದ ಎನ್​ವಿಡಿಯಾ ಕಾರ್ಪ್ ಹಾಗೂ ಅಡ್ವಾನ್ಸ್​ಡ್ ಮೈಕ್ರೊ ಡಿವೈಸಸ್ ಇಂಕ್​ಗೆ ಸ್ಪಷ್ಟ ಸೂಚನೆಯನ್ನು ಅಮೆರಿಕ ಸರ್ಕಾರ ನೀಡಿದೆ.

ಯುಎಸ್ ಏಕಸ್ವಾಮ್ಯ: ಚಿಪ್​ಗಳನ್ನು ತಯಾರಿಸಲು ಅಲ್ಟ್ರಾಕಾಂಪ್ಲೆಕ್ಸ್ ಯಂತ್ರೋಪಕರಣಗಳನ್ನು ಬಳಸಬೇಕಾಗುತ್ತದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಒಂದೆರಡು ದೇಶಗಳ ಕೆಲ ಸಂಸ್ಥೆಗಳು ಮಾತ್ರ ಉತ್ಪಾದಿಸುತ್ತವೆ. ಈ ಪೈಕಿ ಕೆಲವು ಅತ್ಯಾಧುನಿಕ ಉಪಕರಣಗಳನ್ನು ಅಮೆರಿಕದ ಸಂಸ್ಥೆಗಳು ಮಾತ್ರ ಉತ್ಪಾದಿಸುತ್ತವೆ. ಚಿಪ್ ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ತೈವಾನ್, ದಕ್ಷಿಣ ಕೊರಿಯ ಮತ್ತು ಇತರೆಲ್ಲ ದೇಶಗಳ ಕಂಪನಿಗಳು ಕೂಡ ಅಮೆರಿಕದ ಈ ಉಪಕರಣಗಳನ್ನೇ ಅವಲಂಬಿಸಿವೆ. ಹೀಗಾಗಿ, ಚಿಪ್ ಉದ್ಯಮದಲ್ಲಿ ಅಮೆರಿಕದ ಏಕಸ್ವಾಮ್ಯ ಮುಂದುವರಿದಿದೆ.

ತಂತ್ರಜ್ಞಾನ ಸವಾಲು: ಚಿಪ್ ತಯಾರಿಕೆಯಲ್ಲಿ ಚೀನಾ ಹೆಚ್ಚಿನ ಪ್ರಗತಿ ಸಾಧಿಸಿಲ್ಲ. ಚಿಪ್​ಗಳನ್ನು ವಿನ್ಯಾಸಗೊಳಿಸಲು ಈ ದೇಶದ ಕಂಪನಿಗಳು ಹೆಚ್ಚಾಗಿ ಅಮೆರಿಕ ಸಾಫ್ಟ್​ವೇರ್ ಹಾಗೂ ಉಪಕರಣಗಳನ್ನು ಬಳಸುತ್ತವೆ. ಅಲ್ಲದೆ, ತೈವಾನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕದಲ್ಲಿನ ಚಿಪ್ ತಯಾರಿಕೆ ಕಂಪನಿಗಳಿಗೆ ಹೋಲಿಸಿದರೆ ಚೀನಾ ಈ ಕ್ಷೇತ್ರದಲ್ಲಿ ಸಾಕಷ್ಟು ಹಿಂದೆ ಉಳಿದಿದೆ. ಹೀಗಾಗಿಯೇ ಆಧುನಿಕ ಚಿಪ್​ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಚೀನಾ ದೇಶವು ಪೆಟ್ರೋಲ್ ಖರೀದಿಗಿಂತಲೂ ಹೆಚ್ಚಿನ ಹಣವನ್ನು ವ್ಯಯಿಸುತ್ತಿದೆ. ಈಗ ಚಿಪ್ ತಯಾರಿಕೆಗೆ ತನ್ನದೇ ತಂತ್ರಜ್ಞಾನ ಮತ್ತು ಉಪಕರಣ ಸಿದ್ಧಪಡಿಸಿಕೊಳ್ಳುವುದು ಚೀನಾಕ್ಕೆ ಬಹುದೊಡ್ಡ ಸವಾಲಾಗಿದೆ. ಚಿಪ್ ತಯಾರಿಕೆ ಯಂತ್ರೋಪಕರಣಗಳು ಮಾನವ ಇತಿಹಾಸದಲ್ಲಿಯೇ ಅತಿಹೆಚ್ಚು ಸಂಕೀರ್ಣ ಮತ್ತು ನಿಖರವಾದವು ಆಗಿವೆ. ಉದಾಹರಣೆಗೆ, ಅಲ್ಟ್ರಾವಾಯಲೆಟ್ ಲಿಥೋಗ್ರಫಿ ಸಿಸ್ಟಂನ ಒಂದು ಭಾಗವಾದ ಲೇಸರ್ ತಯಾರಿಸಲು 4,57,320ಕ್ಕೂ ಹೆಚ್ಚಿನ ಬಿಡಿಭಾಗಗಳು ಬೇಕಾಗುತ್ತವೆ. ಹೀಗಾಗಿ, ಚೀನಾಕ್ಕೆ ಈ ತಂತ್ರಜ್ಞಾನ ದೊರಕಿಸಿಕೊಳ್ಳುವುದು ಸವಾಲಿನ, ದುಬಾರಿಯಾದ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net