

ಬೆಂಗಳೂರು: ಬೆಂಗಳೂರಿನಲ್ಲಿ ಅಮೆರಿಕಾ ದೂತಾವಾಸ ಕಚೇರಿ ಗುರುವಾರ ತನ್ನ ಚಟುವಟಿಕೆಯನ್ನು ಅಧಿಕೃತವಾಗಿ ಆರಂಭಿಸಿದೆ. ಶೀಘ್ರವೇ ವೀಸಾ ವಿತರಣೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ವ್ಯಕ್ತಪಡಿಸಿದೆ.
ಜೆಡಬ್ಲ್ಯು ಮಾರಿಯೆಟ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಜೈಶಂಕರ್, ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಸಮ್ಮುಖ ಭಾರತದಲ್ಲಿನ ಅಮೆರಿಕಾ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಬೆಂಗಳೂರು ದೂತಾವಾಸ ಕಚೇರಿ ಆರಂಭವನ್ನು ಪ್ರಕಟಿಸಿದರು.
ಈವರೆಗೂ ಉದ್ಯೋಗ, ಶಿಕ್ಷಣ, ಪ್ರವಾಸ, ಕೌಟುಂಬಿಕ ಅಥವಾ ಇತರೆ ಕಾರಣಕ್ಕೆ ಅಮೆರಿಕಾಗೆ ಪ್ರಯಾಣಿಸುವ ಕರ್ನಾಟಕದ ವಾಸಿಗಳು ವೀಸಾ ಪಡೆದುಕೊಳ್ಳಲು ಚೆನ್ನೈ, ದೆಹಲಿಯಲ್ಲಿರುವ ದೂತಾವಾಸ ಕಚೇರಿಗೆ ತೆರಳಬೇಕಿತ್ತು.
ಸದ್ಯ ಬೆಂಗಳೂರು ಕಚೇರಿ ವಿಠಲ್ ಮಲ್ಯ ರಸ್ತೆಯ ಜೆಡಬ್ಲ್ಯು ಮಾರಿಯೆಟ್ ಹೋಟೆಲ್‌ನಲ್ಲಿ ಕಾರ್ಯಾಚರಣೆ ಆರಂಭಿಸಲಿದ್ದು, ನಂತರ ತನ್ನ ಪೂರ್ಣ ಪ್ರಮಾಣದ ಕಚೇರಿಯಲ್ಲಿ ಆರಂಭಿಸುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಅಮೆರಿಕಾದ ರಾಯಭಾರ ಕಚೇರಿ ಆಗಬೇಕೆಂದು ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಲೇ ಪ್ರಯತ್ನ ನಡೆಸಿದ್ದರು. ಅಂದು ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಭೇಟಿ ಮಾಡಲಾಗಿತ್ತು. ಅಲ್ಲಿಂದ ಪ್ರಯತ್ನ ನಡೆದರೂ ಆಗಿರಲಿಲ್ಲ. ಇದೀಗ ಅನುಷ್ಠಾನವಾಗುತ್ತಿದೆ, ಖುಷಿಯ ವಿಚಾರ ಎಂದರು.
ಬೆಂಗಳೂರು ಜಾಗತಿಕವಾಗಿ ಬೆಳೆದಿದೆ. ಯೋಜನಾ ಬದ್ಧವಾದ ನಗರ ಅಲ್ಲದ ಕಾರಣ ಒಂದಷ್ಟು ಸಮಸ್ಯೆ ಇರಬಹುದು. ಅದನ್ನು ಪರಿಹರಿಸಲು ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.
ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿ, ನನಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲೂ ಕಾರ್ಯ ನಿರ್ವಹಿಸಿದ್ದು, ಅಮೆರಿಕಾ ದೂತಾವಾಸ ಕಚೇರಿ ಆರಂಭವಾಗಬೇಕೆಂದ ಬಹಳ ಆಶಯ ಹೊಂದಿದ್ದೆ ಎಂದರು.
ನಾನು ಬೆಂಗಳೂರಿಗೆ ಬಂದಾಗಲೆಲ್ಲ ಅಮೆರಿಕಾ ದೂತಾವಾಸ ಕಚೇರಿ ಎಂದು ಪ್ರಶ್ನೆ ಎದುರಿಸುತ್ತಿದ್ದೆ. ಬೆಂಗಳೂರು ಪ್ರತಿನಿಧಿಸುವ ಸಂಸದರು ಬಹಳ ಒತ್ತಡ ಹೇರಿದ್ದರು. ಎಲ್ಲರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಭಾರತದಲ್ಲಿನ ಅಮೆರಿಕಾ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರ ತವರು ಲಾಸ್ ಎಂಜಲೀಸ್‌ನಲ್ಲಿ ನಮ್ಮ ಕಾನ್ಸೊಲೇಟ್ ಆರಂಭಿಸಿದೆವು. ಈಗ ಅವರು ಇಲ್ಲಿ ದೂತಾವಾಸ ಆರಂಭಿಸಲು ಆಸಕ್ತಿ ತೋರಿಸಿದರೆಂದು ಹೇಳಿದರು.
ಆದಷ್ಟು ಶೀಘ್ರ ವೀಸಾ ವಿತರಣೆ ಆರಂಭವಾಗಲಿ ಎಂದು ಬಯಸುತ್ತೇವೆ ಎಂದು ಇದೇ ವೇಳೆ ತಿಳಿಸಿದರು.
ಭಾರತದಲ್ಲಿನ ಅಮೆರಿಕಾ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮಾತನಾಡಿ, ಚೆನ್ನೈನಲ್ಲಿ ಬಹಳ ವರ್ಷದಿಂದ ನಾವು ಸೇವೆ ನೀಡುತ್ತಾ ಬಂದಿದ್ದೆವು. ಈಗ ಕರ್ನಾಟಕದಲ್ಲಿ ನಾವು ವಿಸ್ತರಿಸುತ್ತಿದ್ದೇವೆ ಎಂದು ಹೇಳಿದರು.
ಇವತ್ತು ಒಂದು ಹೊಸ ಆರಂಭ ಎಂದು ಕನ್ನಡದಲ್ಲಿ ಉಚ್ಚರಿಸಿದ ಗಾರ್ಸೆಟ್ಟಿ ಮಾತು ಆರಂಭಿಸಿ, ಮೋದಿ ವಾಶಿಂಗ್ಟನ್ ಭೇಟಿ ವೇಳೆ ಜೈಶಂಕರ್ ಅವರು ಬೆಂಗಳೂರು ದೂತಾವಾಸ ಕಚೇರಿ ಆರಂಭಿಸುವ ಅಗತ್ಯವಿದೆ ಎಂದು ಹೇಳಿದ್ದರು. ಅಂದಿನ ಪ್ರಯತ್ನ ಈಗ ಸಾಕಾರವಾಗಿದೆ ಎಂದು ಹೇಳಿದರು
ಬೆಂಗಳೂರಲ್ಲಿ ಏಳನೂರಕ್ಕೂ ಅಧಿಕ ಕಂಪನಿಗಳಿವೆ. ಅಮೆರಿಕಾವು ಉದ್ಯಮಿಗಳು, ವಿದ್ಯಾರ್ಥಿ, ಪ್ರವಾಸಿಗರನ್ನು ಎದುರು ನೋಡುತ್ತಿದೆ. ಇಲ್ಲಿ ವೀಸಾ ವಿತರಣೆಯ ವ್ಯವಸ್ಥೆಯನ್ನು ಬಹಳ ಮಂದಿ ಎದುರು ನೋಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಪ್ರಿಯಾಂಕ್ ಖರ್ಗೆ, ಸಂಸದರಾದ ಮಂಜುನಾಥ್, ತೇಜಸ್ವಿಸೂರ್ಯ, ಉದ್ಯಮಿ ಕ್ರಿಸ್ ಗೋಪಾಲಕೃಷ್ಣ, ಕಿರಣ್ ಮಜುಂದಾರ್ ಷಾ, ಅಧಿಕಾರಿಗಳಾದ ಏಕರೂಪ ಕೌರ್, ಗುಂಜನ್ ಕೃಷ್ಣ, ಸತ್ಯವತಿ ಮತ್ತಿತರರು ಹಾಜರಿದ್ದರು
ಬಹು ಉಪಯೋಗಿ:
ಬೆಂಗಳೂರಲ್ಲಿ ಮೀಸಲಾದ ಅಮೆರಿಕ ಕಾನ್ಸುಲೇಟ್ ಇಲ್ಲದಿರುವುದರಿಂದ ಕರ್ನಾಟಕದವರು ಯುಎಸ್ ವೀಸಾ-ಸಂಬಂಧಿತ ಸೇವೆಗಳಿಗಾಗಿ ಚೆನ್ನೈ, ದೆಹಲಿ ಅಥವಾ ಹೈದರಾಬಾದ್‌ಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿದ್ಯಾರ್ಥಿಗಳು, ಐಟಿ ಹಾಗೂ ಇತರೆ ವೃತ್ತಿಪರರು ಮತ್ತು ಉದ್ಯಮಿಗಳಿಗೆ ವೀಸಾ ಅರ್ಜಿ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತದೆ.