

ಬೆಂಗಳೂರು: ಅಮೆರಿಕದ ಮುಂಚೂಣಿ ಕಂಪನಿಯಾದ ಕ್ರಿಪ್ಟನ್ ಸೊಲ್ಯೂಷನ್ಸ್ ಬೆಂಗಳೂರಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನೂತನ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಉತ್ಪಾದನಾ ಘಟಕ ಸ್ಥಾಪಿಸುವ ಒಲವು ವ್ಯಕ್ತಪಡಿಸಿದೆ.
ಈ ಘಟಕ ಆರಂಭಿಸಲು 100 ಮಿಲಿಯನ್ ಡಾಲರ್ (800 ಕೋಟಿ ರೂ.) ಬಂಡವಾಳ ಹೂಡಲು ಮುಂದೆ ಬಂದಿದೆ. ಜತೆಗೆ ಈ ಕಂಪನಿಯು ಮೈಸೂರು ಮತ್ತು ಚಾಮರಾಜನಗರದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ಪರಿಶೀಲಿಸಲು ಒಪ್ಪಿಕೊಂಡಿದೆ.
ಅಮೆರಿಕ ಪ್ರವಾಸದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಈ ಮಾಹಿತಿ ನೀಡಿದ್ದಾರೆ. ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಸುರೇಶ್ ಪಟೇಲ್ ಮತ್ತು ಇತರ ಉನ್ನತಾಧಿಕಾರಿಗಳ ಜತೆಗೆ ಈ ಸಂಬಂಧ ಸೋಮವಾರ ಪ್ರಾಥಮಿಕ ಹಂತದ ಚರ್ಚೆಯಾಗಿದೆ.
ಕಂಪನಿಯು ಸ್ಥಳೀಯ ಸಹಭಾಗಿತ್ವಕ್ಕೆ ಆಸಕ್ತಿ ಹೊಂದಿದ್ದು, ಕೌಶಲ್ಯಪೂರ್ಣ ಮಾನವ ಸಂಪನ್ಮೂಲದ ಖಾತ್ರಿಯನ್ನು ನಮ್ಮಿಂದ ಬಯಸಿದೆ. ಇದೇ ಸಂದರ್ಭದಲ್ಲಿ ಕಂಪನಿಯು ಟೆಕ್ಸಾಸ್‌ನಲ್ಲಿ ಹೊಂದಿರುವ ಉತ್ಪಾದನಾ ಘಟಕಕ್ಕೂ ಭೇಟಿ ನೀಡಿ ವೀಕ್ಷಿಸಲಾಯಿತು.
ಇದೇ ಸಂದರ್ಭದಲ್ಲಿ, ಸೆಮಿಕಂಡಕ್ಟರ್ ಕ್ಷೇತ್ರದ ದೈತ್ಯ ಕಂಪನಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಜತೆಗೂ ಮಾತುಕತೆ ನಡೆಸಲಾಗಿದೆ. ಅದು ಬೆಂಗಳೂರಿನಲ್ಲಿರುವ ತನ್ನ ಆರ್ ಅಂಡ್ ಡಿ ಕೇಂದ್ರದ ಚಟುವಟಿಕೆ ವಿಸ್ತರಿಸುವ ಬದ್ಧತೆಯನ್ನು ತೋರಿದೆ.
ಈ ಸಭೆಯಲ್ಲಿ ಅನಲಾಗ್ ಮತ್ತು ಎಂಬೆಡೆಡ್ ಸೆಮಿಕಂಡಕ್ಟರ್ ಕುರಿತ ಸಂಶೋಧನೆ ಕೈಗೆತ್ತಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗಿದೆ. ಇದಕ್ಕೆ ಬೆಂಗಳೂರಿನ ವೈಟ್ ಫೀಲ್ಡಿನಲ್ಲಿರುವ ಸೆಮಿಕಂಡಕ್ಟರ್ ಸೂಕ್ತ ಸ್ಥಳವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಹೂಡಿಕೆಗೆ ಇರುವ ಅಡಚಣೆಗಳನ್ನು ನಿವಾರಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂಬ ಭರವಸೆ ನೀಡಲಾಯಿತು. ಟೆಕ್ಸಾಸ್‌ನಲ್ಲೇ ಕೇಂದ್ರ ಕಚೇರಿ ಹೊಂದಿರುವ ಇ.ಆರ್.ಪಿ. ಲಾಜಿಕ್ ಕಂಪನಿ ಜತೆ ಚರ್ಚಿಸಲಾಯಿತು. ಸ್ಯಾಪ್ ಕೌಶಲ್ಯದಲ್ಲಿ ಪರಿಣತಿ ಹೊಂದಿರುವ ಅದು ಬೆಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಉತ್ಸಾಹ ತೋರಿಸುತ್ತಿದೆ. ಈ ಕಂಪನಿಯು ಈಗಾಗಲೇ ಹೈದರಾಬಾದ್, ಚೆನ್ನೈ, ಸೇಲಂ ಮುಂತಾದ ಕಡೆ ಸಕ್ರಿಯವಾಗಿದೆ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಮಾತುಕತೆಯಲ್ಲಿ ಕ್ರಿಪ್ಟನ್ ಕಂಪನಿಯ ಪರವಾಗಿ ಸಿಒಒ ದೀಪಕ್ ಪಟೇಲ್, ಸಿಎಂಒ ಮಹೇಶ್ ಪಟೇಲ್, ಉಪಾಧ್ಯಕ್ಷ ಮುಕೇಶ್ ಪಟೇಲ್, ಆನಂದ್ ಪಟೇಲ್, ಹಿತೇಶ್ ಭಕ್ತಾ, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿ ಪರವಾಗಿ ಜನರಲ್ ಮ್ಯಾನೇಜರ್ ಅಮಿಚಾಯ್ ರೋನ್, ಉಪಾಧ್ಯಕ್ಷ ಸ್ಟೀವ್ ಬೋನರ್, ಇಆರ್‌ಪಿಎಲ್ ಪರವಾಗಿ ಕಣ್ಣನ್ ಶ್ರೀನಿವಾಸನ್, ರಾಜ್ಯದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಐಟಿ ಇಲಾಖೆ ಕಾರ್ಯದರ್ಶಿ ಏಕ್‌ರೂಪ್‌ಕೌರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಇದ್ದರು.