ಆಫ್ಘನ್ ಸಂಘರ್ಷ ಅಂತ್ಯಕ್ಕೆ ಒಪ್ಪಂದ: ಭಾರತಕ್ಕೆ ತಲೆಬೇನೆ ತಂದ ಅಮೆರಿಕ-ತಾಲಿಬಾನ್ ಒಡಂಬಡಿಕೆ

Taliban
Published on

ದೋಹಾ: ಅಫ್ಘಾನಿಸ್ತಾನದಲ್ಲಿನ ಹದಿನೆಂಟು ವರ್ಷಗಳಷ್ಟು ಸುದೀರ್ಘ ಆಂತರಿಕ ಯುದ್ಧ ಕೊನೆಗಾಣಿಸುವ ಮಹತ್ವದ ಐತಿಹಾಸಿಕ ಒಪ್ಪಂದಕ್ಕೆ ಅಮೆರಿಕ ಮತ್ತು ತಾಲಿಬಾನ್ ಉಗ್ರ ಸಂಘಟನೆ ಶನಿವಾರ ಸಹಿ ಹಾಕಿವೆ. ಏಷ್ಯಾದಲ್ಲಿ ಶಾಂತಿಯ ಹೊಸಪರ್ವಕ್ಕೆ ಇದು ನಾಂದಿ ಹಾಡಬಹುದೆಂದು ವಿಶ್ಲೇಷಿಸಲಾಗಿದ್ದರೂ ಜಿಹಾದಿ ಗಳ ಮುಂದಿನ ಗುರಿ ಭಾರತ ಆಗುವುದೇ ಎಂಬ ಆತಂಕವೂ ಶುರುವಾಗಿದೆ.

ಕತಾರ್ ರಾಜಧಾನಿ ದೋಹಾದಲ್ಲಿ ಉಭಯ ಪಕ್ಷಗಳು ಸಹಿ ಹಾಕುವ ಸಂದರ್ಭ ಅಲ್ಲಿನ ಭಾರತದ ರಾಯಭಾರಿಯಾಗಿರುವ ಪಿ. ಕುಮಾರನ್ ಉಪಸ್ಥಿತರಿದ್ದರು. ಭಯೋತ್ಪಾದನೆ ಅಂತ್ಯಗೊಳಿಸುವ ಪ್ರಮುಖ ಒಡಂಬಡಿಕೆಯೊಂದು ರೂಪುಗೊಳ್ಳುವುದಕ್ಕೆ ಸಾಕ್ಷಿಯಾದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ತಾಲಿಬಾನ್​ನ ಮುಖಂಡರು ಹಾಜರಿದ್ದರು. ಉಗ್ರರು ಒಪ್ಪಂದವನ್ನು ಸರಿಯಾಗಿ ಪಾಲಿಸಿದರೆ 14 ತಿಂಗಳೊಳಗೆ ಅಫ್ಘಾನಿಸ್ತಾನದಿಂದ ಎಲ್ಲ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲು ಅಮೆರಿಕ ಮತ್ತು ಅದರ ನ್ಯಾಟೋ ಮಿತ್ರ ದೇಶಗಳು ಒಪ್ಪಿವೆ. ಇದೇ ಮಾ.10ರ ವೇಳೆಗೆ ಆಫ್ಘನ್ ಸರ್ಕಾರ ಮತ್ತು ತಾಲಿಬಾನ್ ನಡುವೆ ಆಂತರಿಕ ಮಾತುಕತೆ ಆರಂಭವಾಗಲೂ ಈ ಒಡಂಬಡಿಕೆ ಹಾದಿ ಮಾಡಿದೆ. ದೇಶವ್ಯಾಪಿ ಕದನ ವಿರಾಮ ಮತ್ತು ಯುದ್ಧೋತ್ತರ ಅಫ್ಘಾನಿಸ್ತಾನದಲ್ಲಿ ಅಧಿಕಾರ ಹಂಚಿಕೆ ಕುರಿತು ಮಾತುಕತೆ ನಡೆಯಲಿದೆ.

ಅಲ್ ಖೈದಾಗೆ ಮೂಗುದಾರ: ಅಲ್ ಖೈದಾ ಅಥವಾ ಬೇರಾವುದೇ ಉಗ್ರ ಸಂಘಟನೆಗಳಿಗೆ ತನ್ನ ನಿಯಂತ್ರಣದ ಪ್ರದೇಶಗಳಿಂದ ಕಾರ್ಯಾಚರಿಸಲು ಅವಕಾಶ ನೀಡುವುದಿಲ್ಲ ಎಂದು ಈ ಒಪ್ಪಂದದ ಮೂಲಕ ತಾಲಿಬಾನ್ ಸಮ್ಮತಿಸಿದೆ.

ಅಫ್ಘಾನಿಸ್ತಾನ ಮೂಲದ ಅಲ್ ಖೈದಾ ಸಂಘಟನೆ 2001ರ ಸೆ.11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭೀಕರ ದಾಳಿ ನಡೆಸಿದ ಹಿನ್ನೆಲೆಯಲ್ಲಿ ತಾಲಿಬಾನ್ ಪಡೆಯನ್ನು ಬಗ್ಗುಬಡಿಯಲೆಂದು ಅಫ್ಘಾನಿಸ್ತಾನದ ಮೇಲೆ ಅಮೆರಿಕ ಆಕ್ರಮಣ ನಡೆಸಿತ್ತು. ಅಂದಿನಿಂದಲೂ ಅಮೆರಿಕ ಹಾಗೂ ಮಿತ್ರದೇಶಗಳ ಸೇನೆ ಅಲ್ಲಿ ಬೀಡುಬಿಟ್ಟಿದೆ. ತಾಲಿಬಾನ್​ನೊಂದಿಗಿನ ಸಂಘರ್ಷದಲ್ಲಿ ಅಫ್ಘಾನಿಸ್ತಾನದಲ್ಲಿ ಇದುವರೆಗೆ ಅಮೆರಿಕದ 2,352 ಸೈನಿಕರು ಮೃತಪಟ್ಟಿದ್ದಾರೆ.

ನಿಲುವು ಬದಲಾಯಿತೇ?

ತಾಲಿಬಾನ್​ನೊಂದಿಗೆ ಮಾತುಕತೆ ನಡೆಸುವುದು ದೇಶದ ನೀತಿಗೆ ವಿರುದ್ಧವಾದುದು ಎಂಬುದು ಭಾರತದ ವಾದ. ಆದರೆ, ಶಾಂತಿ ಒಡಂಬಡಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡಿದ್ದು ಎಲ್ಲರೂ ಪ್ರಸ್ತಾಪಿತ ಒಪ್ಪಂದದ ಬಗ್ಗೆ ‘ಖುಷಿ’ಯಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ ಹೇಳಿದ್ದರು.

ಮೋದಿ ಪತ್ರ

ಶುಕ್ರವಾರ ಕಾಬೂಲ್​ಗೆ ತೆರಳಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಪತ್ರವನ್ನು ಹಸ್ತಾಂತರಿಸಿದರು. ಒಪ್ಪಂದ ರೂಪುಗೊಳ್ಳುತ್ತಿರುವುದಕ್ಕಾಗಿ ಆಫ್ಘನ್ ಅಧ್ಯಕ್ಷರನ್ನು ಮೋದಿ ಈ ಪತ್ರದಲ್ಲಿ ಅಭಿನಂದಿಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸುವ್ಯವಸ್ಥೆ ಸ್ಥಾಪನೆಗೆ ಭಾರತ ನಿರಂತರ ನೀಡುತ್ತಿರುವ ಪ್ರಯತ್ನಗಳಿಗೆ ಘನಿ ಕೃತಜ್ಞತೆ ಸಲ್ಲಿಸಿದರು.

ತಾಲಿಬಾನ್ ನೆಲದಲ್ಲಿ

*ಅಮೆರಿಕ ಆಕ್ರಮಣ ಮಾಡಿದಾಗಿನಿಂದ ಅಫ್ಘಾನಿಸ್ತಾನದಲ್ಲಿ ನಡೆದ ಆಂತರಿಕ ಸಮರದಲ್ಲಿ ಹತ್ತಾರು ಸಾವಿರ ಜನರು ಮೃತಪಟ್ಟಿದ್ದಾರೆ

*ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲಿನ ದಾಳಿಗೆ ಕಾರಣವಾದ ಅಲ್​ಖೈದಾ ಹಾಗೂ ಅದರ ನಾಯಕ ಒಸಾಮಾ ಬಿನ್ ಲಾಡೆನ್​ಗೆ ತಾಲಿಬಾನ್ ರಕ್ಷಣೆ ನೀಡುತ್ತಿದೆ ಎಂಬುದು ಅಮೆರಿಕದ ಆರೋಪವಾಗಿತ್ತು

*ಅಫ್ಘಾನಿಸ್ತಾನದಲ್ಲಿ ಸದ್ಯ ನ್ಯಾಟೋದ ಒಟ್ಟು 16,500 ಸೈನಿಕರಿದ್ದಾರೆ. ಆ ಪೈಕಿ 13,000ಕ್ಕೂ ಹೆಚ್ಚು ಅಮೆರಿಕನ್ನರು. ಜರ್ಮನಿಯ 1,300, ಬ್ರಿಟನ್​ನ 1,100 ಯೋಧರಿದ್ದಾರೆ

* ಅಫ್ಘಾನಿಸ್ತಾನದ ಜೈಲುಗಳಲ್ಲಿರುವ ತನ್ನ 5,000 ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ತಾಲಿಬಾನ್ ಆಗ್ರಹಿಸಿದೆ

*ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಪೂರ್ವಭಾವಿಯಾಗಿ ಒಂದು ವಾರ ಶಾಂತಿಯಿಂದಿರಲು ಅಮೆರಿಕ ಮತ್ತು ತಾಲಿಬಾನ್ ಒಪ್ಪಿದ್ದವು. ಈ ಕದನ ವಿರಾಮ ಶುಕ್ರವಾರ ರಾತ್ರಿ ಮುಕ್ತಾಯಗೊಂಡಿದೆ.

ಹಿಂಸೆಯನ್ನು ಅಂತ್ಯಗೊಳಿಸುವುದು, ಅಂತಾರಾಷ್ಟ್ರೀಯ ಭಯೋತ್ಪಾದನೆಯೊಂದಿಗೆ ಸಂಪರ್ಕ ಕಡಿತಗೊಳಿಸುವುದು, ಹಾಗೂ ಆಫ್ಘನ್ ನೇತೃತ್ವದ ಆಫ್ಘನ್​ನದ್ದೇ ಆದ ಹಾಗೂ ಆಫ್ಘನ್ ನಿಯಂತ್ರಿತ ಪ್ರಕ್ರಿಯೆಯಿಂದ ಶಾಶ್ವತ ರಾಜಕೀಯ ಇತ್ಯರ್ಥ ಏರ್ಪಡಬೇಕೆನ್ನುವುದು ಭಾರತದ ಆಶಯ. ರವೀಶ್ ಕುಮಾರ್, ವಿದೇಶಾಂಗ ಖಾತೆ ವಕ್ತಾರ

ಭಾರತ ಇದೇ ಮೊದಲು ಭಾಗಿ

ತಾಲಿಬಾನ್ ಒಳಗೊಂಡಿರುವ ಕಾರ್ಯಕ್ರಮವೊಂದರಲ್ಲಿ ಭಾರತ ಅಧಿಕೃತವಾಗಿ ಭಾಗವಹಿಸಿದ್ದು ಇದೇ ಮೊದಲ ಸಲ. ಒಡಂಬಡಿಕೆಗೆ ಸಹಿ ಹಾಕುವ ಸಮಾರಂಭದಲ್ಲಿ ಹಾಜರಿರುವಂತೆ ಭಾರತವನ್ನು ಕತಾರ್ ಸರ್ಕಾರ ಆಹ್ವಾನಿಸಿತ್ತು. ಇದಕ್ಕೂ ಮುನ್ನ 2018ರಲ್ಲಿ ಮಾಸ್ಕೋದಲ್ಲಿ ನಡೆದ ರಷ್ಯಾ ಪ್ರಾಯೋಜಿತ ಆಫ್ಘನ್ ಶಾಂತಿ ಸಮ್ಮೇಳನಕ್ಕೆ ಇಬ್ಬರು ಮಾಜಿ ರಾಜತಾಂತ್ರಿಕರನ್ನು ಭಾರತ ಅನಧಿಕೃತ ಪ್ರತಿನಿಧಿಗಳಾಗಿ ಕಳಿಸಿತ್ತು. ತಾಲಿಬಾನ್​ನ ಉನ್ನತ ನಿಯೋಗ, ಅಫ್ಘಾನ್ ಹಾಗೂ ಅಮೆರಿಕ, ಪಾಕಿಸ್ತಾನ, ಚೀನಾ ಸಹಿತ ಹಲವು ದೇಶಗಳ ಪ್ರತಿನಿಧಿಗಳು ಅದರಲ್ಲಿ ಭಾಗವಹಿಸಿದ್ದರು.

ಭಾರತದ ಕಳವಳವೇನು

  • ಈ ಒಪ್ಪಂದ ಪ್ರಾದೇಶಿಕ ಸ್ಥಿರತೆಗೆ ಹೇಗೆ ಸಹಾಯವಾದೀತು ಎಂಬ ಅನುಮಾನ
  • ಉಗ್ರರನ್ನು ಪಾಕಿಸ್ತಾನ ಭಾರತಕ್ಕೆ ಛೂ ಬಿಡಬಹುದು
  • ಆಫ್ಘನ್​ನಲ್ಲಿ ಯಾವುದೇ ಬಾಹ್ಯ ಪಡೆಗಳು ಇಲ್ಲದ ಅವಕಾಶ ಬಳಸಿಕೊಳ್ಳಬಹುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net