

America-Russia: ಯುಕ್ರೇನ್ ಮೇಲಿನ ಯುದ್ಧವನ್ನು ಕೈಬಿಡುವಂತೆ ಸೂಚಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ವಿರುದ್ಧ ಸುಂಕ ಸಮರದ ಜೊತೆಗೆ ತೀವ್ರ ಕಿಡಿಕಾರಿದ್ದರು. ಈ ಎಲ್ಲ ಬೆಳವಣಿಗೆಯ ನಡುವೆಯೇ ರಷ್ಯಾ ಮತ್ತು ಅಮೆರಿಕ ನಡುವೆ ಮಾತುಕತೆ ಸಾಧ್ಯತೆಗಳಿವೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೀಗ ಕಡೆಗೂ ಮಹೂರ್ತ ಫಿಕ್ಸ್ ಆಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಭೇಟಿಗೆ ದಿನಾಂಕ ನಿಗದಿಪಡಿಸಲಾಗಿದೆ. ಮುಂದಿನ ವಾರ, ಅಂದರೆ ಆಗಸ್ಟ್ 15ರಂದು ಇಬ್ಬರೂ ಪರಸ್ಪರ ಭೇಟಿಯಾಗಲಿದ್ದಾರೆ. ಈ ಕುರಿತು ಟ್ರಂಪ್ ತಮ್ಮ ಅಧಿಕೃತ ಜಾಲತಾಣ ಖಾತೆ 'ಟ್ರೂತ್ ಸೋಷಿಯಲ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎರಡು ಬಲಿಷ್ಠ ರಾಷ್ಟ್ರಗಳ ನಾಯಕರು, ಅಮೆರಿಕದ ಶ್ವೇತಭವನದ ಬದಲಿಗೆ ಅಲಾಸ್ಕಾ ರಾಜ್ಯದಲ್ಲಿ ಮಾತುಕತೆ ನಡೆಸಲಿದ್ದಾರೆ. ಇದು ಹಲವರ ಕುತೂಹಲಕ್ಕೆ ಕಾರಣವಾಗಿದೆ.
ಅಲಾಸ್ಕಾ ಅಮೆರಿಕದ ರಾಜ್ಯವೇ. ಇದು ರಷ್ಯಾಕ್ಕೆ ಹತ್ತಿರದಲ್ಲಿದೆ. ಟ್ರಂಪ್ ಈ ಸಭೆಗೆ ಅಲಾಸ್ಕಾವನ್ನು ಆಯ್ಕೆ ಮಾಡಿದ್ದರ ಹಿಂದೆ ಒಂದು ಬಲವಾದ ಕಾರಣವಿದೆ ಎಂಬುದು ಸ್ಪಷ್ಟ. 2019ರ ನಂತರ ಟ್ರಂಪ್ ಮತ್ತು ಪುಟಿನ್ ನಡುವಿನ ಮೊದಲ ಸಭೆ ಇದಾಗಿದೆ. ಅಧ್ಯಕ್ಷರಾಗಿ ಇಬ್ಬರದ್ದು ಇದು ಮೊದಲ ಭೇಟಿ. ಜನವರಿಯಿಂದ ಇಬ್ಬರೂ ಹಲವು ಬಾರಿ ಫೋನ್ ಕರೆಯಲ್ಲಿ ಮಾತನಾಡಿದ್ದಾರೆ. ಆದರೆ, ನೇರವಾಗಿ ಭೇಟಿಯಾಗುತ್ತಿರುವುದು ಇದೇ ಮೊದಲು. ಈ ಸಭೆಯು ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸುತ್ತದೆಯೇ ಅಥವಾ ಮತ್ತೊಂದು ದಿಕ್ಕಿಗೆ ಕೊಂಡೊಯ್ಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
2022ರಲ್ಲಿ ಉಕ್ರೇನ್ ಮೇಲೆ ದಾಳಿ ಮಾಡಿದಾಗಿನಿಂದ ಎರಡೂ ದೇಶಗಳ ನಡುವೆ ಯುದ್ಧ ಮುಂದುವರೆದಿದೆ. ಈ ಯುದ್ಧದಿಂದಾಗಿ ಎರಡೂ ರಾಷ್ಟ್ರಗಳಲ್ಲಿ ಅನೇಕ ಸ್ಥಳೀಯರು ಮತ್ತು ಸೈನಿಕರು ಮೃತಪಟ್ಟಿದ್ದಾರೆ. ವಿಶೇಷವಾಗಿ ಯುಕ್ರೇನ್‌ನಲ್ಲಿ, ಲಕ್ಷಾಂತರ ಜನರು ಜೀವ ಭಯದಿಂದ ತಮ್ಮ ಮನೆಗಳನ್ನು ತೊರೆದಿದ್ದಾರೆ. ಈ ಯುದ್ಧವನ್ನು ಕೊನೆಗೊಳಿಸಲು ಇಲ್ಲಿಯವರೆಗೆ ಮೂರು ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ಇದರ ಬೆನ್ನಲ್ಲೇ ಯುದ್ಧವನ್ನು ಕೂಡಲೇ ನಿಲ್ಲಿಸುವಂತೆ ಟ್ರಂಪ್ ರಷ್ಯಾಗೆ ಪದೇ ಪದೇ ಎಚ್ಚರಿಕೆ ನೀಡಿದ್ದಾರೆ. ಆದ್ರೆ, ಇದ್ಯಾವುದಕ್ಕೂ ಪುಟಿನ್ ಕ್ಯಾರೇ ಎಂದಿಲ್ಲ. ಈ ಸಭೆಯಲ್ಲಿ ಯುದ್ಧ ಅಂತ್ಯದ ಕುರಿತು ಯಾವ ರೀತಿಯ ಮಾತುಕತೆ ನಡೆಯಲಿದೆ? ಯುಕ್ರೇನ್ ಮೇಲಿನ ಸಂಘರ್ಷ ಇದೊಂದು ಸಭೆ ಮೂಲಕ ಇತ್ಯರ್ಥಗೊಳ್ಳಲಿದೆಯೇ ಎಂಬುದೇ ಸದ್ಯ ದೊಡ್ಡ ಪ್ರಶ್ನೆಯಾಗಿ ಉಳಿದಿದೆ,(ಏಜೆನ್ಸೀಸ್).