

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ಆಕಾಂಕ್ಷಿಯಾಗಿರುವ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರ ಜನಪ್ರಿಯತೆ ರೇಟಿಂಗ್ ಮತ್ತು ಆನ್ಲೈನ್ ನಿಧಿಸಂಗ್ರಹಣೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಚರ್ಚೆಯಲ್ಲಿ ಅವರ ಪ್ರಭಾವಶಾಲಿ ಪ್ರದರ್ಶನದ ನಂತರ ಈ ಬೆಳವಣಿಗೆ ನಡೆದಿದೆ. 38 ವರ್ಷದ ವಿವೇಕ್ 4,50,000 ಡಾಲರ್ಗಿಂತ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿದ್ದಾರೆ. ಬುಧವಾರ ನಡೆದ ಬಹಿರಂಗ ಚರ್ಚೆಯ ನಂತರದ ದೇಣಿಗೆಯಲ್ಲಿ ಏರುಗತಿ ಕಂಡುಬಂದಿದೆ.
ಮೂವರು ಪ್ರಮುಖ ಪ್ರತಿಸ್ಪರ್ಧಿಗಳಾದ ನ್ಯೂಜೆರ್ಸಿ ಮಾಜಿ ಗವರ್ನರ್ ಕ್ರಿಸ್ ಕ್ರಿಸ್ಟೀಸ್, ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ದಕ್ಷಿಣ ಕೆರೊಲಿನಾ ಗವರ್ನರ್ ನಿಕ್ಕಿ ಹ್ಯಾಲೆ ಅವರಿಗೆ ವಿವೇಕ್ ಪ್ರಬಲ ಪೈಪೋಟಿ ನೀಡಿದ್ದಾರೆ. ಚರ್ಚೆಯ ನಂತರ ಹೊರಬಂದ ಮೊದಲ ಸಮೀಕ್ಷೆಯ ಪ್ರಕಾರ, 504 ಪ್ರತಿವಾದಿಗಳಲ್ಲಿ ಶೇ. 28 ಜನರು ವಿವೇಕ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ. ಫ್ಲಾರಿಡಾ ಗವರ್ನರ್ ರಾನ್ ಡಿಸಾಂಟಿಸ್ ಶೇ. 27 ಮತ್ತು ಮೈಕ್ ಪೆನ್ಸ್ ಶೇ. 13, ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಶೇ. 7 ಮತಗಳನ್ನು ಪಡೆದಿದ್ದಾರೆ.
ರಿಪಬ್ಲಿಕನ್ ಅಧ್ಯಕ್ಷೀಯ ಚರ್ಚೆಗಾಗಿ ವಿವೇಕ್ ರಾಮಸ್ವಾಮಿ ಗೂಗಲ್ನಲ್ಲಿ ಹೆಚ್ಚು ಹುಡುಕಲ್ಪಟ್ಟ ಅಭ್ಯರ್ಥಿಯಾಗಿದ್ದಾರೆ ಎಂದು ಫಾಕ್ಸ್ ನ್ಯೂಸ್ ಹೇಳಿದೆ. ಮೊದಲ ರಿಪಬ್ಲಿಕನ್ ಪ್ರೖೆಮರಿ ಡಿಬೇಟ್ನಲ್ಲಿ ವಿವೇಕ್ ರಾಮಸ್ವಾಮಿ ಹೆಚ್ಚು ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಆದರೆ ಅವರ ವಿದೇಶಾಂಗ ನೀತಿಗೆ ಟೀಕೆ ವ್ಯಕ್ತವಾಗಿದೆ. ಶೀಘ್ರದಲ್ಲೇ ಇಬ್ಬರು ಅಭ್ಯರ್ಥಿಗಳು ಮಾತ್ರ ಸ್ಪರ್ಧೆಯಲ್ಲಿ ಉಳಿಯುತ್ತಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿವೇಕ್ ನಡುವೆ ಹಣಾಹಣಿ ಬಹುತೇಕ ಖಚಿತವಾಗಿದೆ.
ಭಾರತೀಯ-ಅಮೆರಿಕನ್ ವಿವೇಕ್ ಅವರು 2014ರಲ್ಲಿ ರೋವಂಟ್ ಸೈನ್ಸಸ್ ಎಂಬ ಕಂಪನಿ ಸ್ಥಾಪಿಸಿದರು. 2015 ಮತ್ತು 2016ರಲ್ಲಿ ಅತಿದೊಡ್ಡ ಬಯೋಟೆಕ್ ಐಪಿಒವನ್ನು ಅವರು ಹೊರತಂದರು. ಬಹು ರೋಗ ಕ್ಷೇತ್ರದಲ್ಲಿ ಅವರ ಕಂಪನಿಯ ಕ್ಲಿನಿಕಲ್ ಪ್ರಯೋಗ ಯಶಸ್ವಿಗೊಂಡಿದೆ. ಅವರ ಬಯೋಟೆಕ್ ಕಂಪನಿ ಒಂದು ಶತಕೋಟಿ ಡಾಲರ್ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಅವರು ಅಮೆರಿಕದ 20 ಕಿರಿಯ ಬಿಲಿಯನೇರ್ಗಳಲ್ಲಿ ಒಬ್ಬರು. ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕದಲ್ಲಿ ಸ್ಪರ್ಧೆಯಲ್ಲಿ ಹಣಕ್ಕೆ ಇಳಿದಿರುವ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿವ್ವಳ ಆಸ್ತಿ ಮೌಲ್ಯವು 2.5 ಶತಕೋಟಿ ಡಾಲರ್ ಆಗಿದೆ.