VIDEO | ಹಿಂದೂ ಸಮುದಾಯದೊಂದಿಗೆ ದೀಪಾವಳಿ ಆಚರಿಸಿದ ನ್ಯೂಯಾರ್ಕ್ ಮೇಯರ್

newyork
Published on

ನ್ಯೂಯಾರ್ಕ್: ಪ್ರಪಂಚದಾದ್ಯಂತ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಭಾರತೀಯ ಸಮುದಾಯ ಮಾತ್ರವಲ್ಲದೆ, ವಿದೇಶಿ ಪ್ರಜೆಗಳೂ ಆಚರಿಸುತ್ತಾರೆ. ಅದರಲ್ಲೂ ಅಮೆರಿಕದಲ್ಲಿ ಮ್ಯಾನ್‌ಹ್ಯಾಟನ್ ಅಥವಾ ನ್ಯೂಯಾರ್ಕ್​​​​​ನಲ್ಲಿ ಹಿಂದೂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲ್ಲಿ ಅಮೆರಿಕದ ಜನರು ಭಾರತೀಯ ಸಮುದಾಯದೊಂದಿಗೆ ದೀಪಾವಳಿಯನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದಾರೆ.  

ದೀಪಾವಳಿ ಆಚರಿಸಿದ ನ್ಯೂಯಾರ್ಕ್ ಮೇಯರ್
ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ಉಪ ಆಯುಕ್ತ ದಿಲೀಪ್ ಚೌಹಾಣ್ ಕೂಡ ಈ ವರ್ಷ ಹಿಂದೂ ಸಮುದಾಯದೊಂದಿಗೆ ದೀಪಾವಳಿಯನ್ನು ಆಚರಿಸಿದರು. ಇಬ್ಬರೂ ಮ್ಯಾನ್‌ಹ್ಯಾಟನ್‌ನ ಅತ್ಯಂತ ಹಳೆಯ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ, ದೀಪಾವಳಿಯನ್ನು ಆಚರಿಸಿದರು. ದೀಪಾವಳಿಯನ್ನು ಆಚರಿಸಲು 1500 ಕ್ಕೂ ಹೆಚ್ಚು ಜನರು ದೇವಾಲಯದಲ್ಲಿ ಜಮಾಯಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಎರಿಕ್ ಆಡಮ್ಸ್, ದೀಪಾವಳಿಯ ಸಂದರ್ಭದಲ್ಲಿ ಈ ದೇವಾಲಯಕ್ಕೆ ಬಂದಿರುವುದು ನನಗೆ ಅದ್ಭುತ ಅನುಭವವಾಗಿದೆ. ಇಲ್ಲಿಗೆ ಬಂದಾಗಲೆಲ್ಲಾ ಧನಾತ್ಮಕ ಶಕ್ತಿ ಅನುಭವಿಸಬಹುದು. ದೀಪಾವಳಿಯಂದು ಮಾತ್ರವಲ್ಲದೆ, ನಾವು ಯಾವಾಗಲೂ ಜಗತ್ತನ್ನು ಉತ್ತಮಗೊಳಿಸಲು ಶ್ರಮಿಸಬೇಕು ಎಂದು ಹೇಳಿದರು.

ಭಾನುವಾರ ಸಂಜೆ (ಭಾರತೀಯ ಕಾಲಮಾನ) ದೀಪಾವಳಿ ಸಂದರ್ಭದಲ್ಲಿ, ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅಮೆರಿಕ ಮತ್ತು ವಿಶ್ವದಾದ್ಯಂತ ದೀಪಾವಳಿ ಆಚರಿಸುವ ಜನರಿಗೆ ಶುಭಾಶಯಗಳನ್ನು ಕೋರಿದರು. ಜನತೆಯನ್ನು ಅಭಿನಂದಿಸಿ ಮಾತನಾಡಿದ ಅವರು, ಅಜ್ಞಾನ, ದ್ವೇಷ, ಒಡಕು ಎಂಬ ಅಂಧಕಾರವನ್ನು ಹೋಗಲಾಡಿಸಿ ಜ್ಞಾನ, ಪ್ರೀತಿ, ಒಗ್ಗಟ್ಟಿನ ಬೆಳಕನ್ನು ಕಾಣುವ ಸಂದೇಶವನ್ನು ದೀಪಾವಳಿ ಸಂಕೇತಿಸುತ್ತದೆ ಎಂದರು. ಈ ಸಂದೇಶವು ಕಳೆದ ಕೆಲವು ವರ್ಷಗಳಲ್ಲಿ ಅಮೆರಿಕವು ಪ್ರಬಲವಾಗಿ ಹೊರಹೊಮ್ಮಲು ಸಹಾಯ ಮಾಡಿದೆ ಎಂದು ಅವರು ಹೇಳಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net