ಮಹಿಳೆಯ ಹೃದಯ ಕಿತ್ತು ಸಂಬಂಧಿಕರಿಗೆ ಉಣಬಡಿಸಿ ಅವರನ್ನೂ ಹತ್ಯೆಗೈದಿದ್ದ ರಾಕ್ಷಸನಿಗೆ ಜೀವಾವಧಿ ಶಿಕ್ಷೆ!

America Accused
Published on

ವಾಷಿಂಗ್ಟನ್​: ಮಹಿಳೆಯ ಹೃದಯವನ್ನು ಕಿತ್ತು ಅದನ್ನು ಆಲೂಗೆಡ್ಡೆ ಜೊತೆ ಬೇಯಿಸಿ ತನ್ನ ಕುಟುಂಬಕ್ಕೆ ಉಣಬಡಿಸಿದ ಬಳಿಕ ಅವರನ್ನು ಕೊಲೆ ಮಾಡಿದ್ದ ಅರೋಪಿಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಈ ಭಯಾನಕ ಕೃತ್ಯ ಅಮೆರಿಕದ ಒಕ್ಲಾಹೋಮ್​ ರಾಜ್ಯದಲ್ಲಿ 2021ರಲ್ಲಿ ನಡೆಯಿತು. ಜೈಲಿನಿಂದ ಬಿಡುಗಡೆಯಾದ ಒಂದು ತಿಂಗಳ ಬೆನ್ನಲ್ಲೇ ಈ ಕೃತ್ಯವನ್ನು ಎಸಗಿದ್ದ. ಆರೋಪಿಯನ್ನು 44 ವರ್ಷದ ಲಾರೆನ್ಸ್​ ಪೌಲ್​ ಆ್ಯಂಡರ್ಸನ್​ ಎಂದು ಗುರುತಿಸಲಾಗಿದೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಆರೋಪಿ ಲಾರೆನ್ಸ್​, ಆ್ಯಂಡ್ರಿಯಾ ಬ್ಲಾಂಕೆನ್​ಶಿಫ್​ ಎಂಬಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ಆಕೆಯ ಹೃದಯವನ್ನು ಹೊರ ಕಿತ್ತು, ತನ್ನ ಅಂಕಲ್​ ಮತ್ತು ಆಂಟಿ ಮನೆಗೆ ತೆರಳಿ, ಆಲೂಗೆಡ್ಡೆಯ ಜತೆ ಹೃದಯವನ್ನು ಬೇಯಿಸಿ, ಇಬ್ಬರಿಗೂ ಉಣಬಡಿಸಲು ಯತ್ನಿಸಿದ್ದಾನೆ. ಬಳಿಕ 67 ವರ್ಷದ ಅಂಕಲ್​ ಲಿಯೋನ್​ ಪೇ ಮತ್ತು ಆತನ ಮೊಮ್ಮಗಳಾದ 4 ವರ್ಷದ ಕಯೋಸ್​ ಯಾಟ್ಸ್​ನನ್ನು ಹತ್ಯೆ ಮಾಡಿದ್ದಾನೆ.

ಈ ಹಿಂದೆ ಡ್ರಗ್ಸ್​ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆ್ಯಂಡರ್ಸನ್​ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಮನ ಪರಿವರ್ತನೆ ಅಡಿಯಲ್ಲಿ 20 ವರ್ಷದ ಬದಲು ಕೇವಲ 3 ವರ್ಷ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ಅಲ್ಲಿನ ಗವರ್ನರ್​ ಬಿಡುಗಡೆ ನಿರ್ಧಾರವನ್ನು ಪ್ರಕಟಿಸಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಮತ್ತೆ ಸಿಕ್ಕಿಬಿದ್ದಿದ್ದು, ತಪ್ಪನ್ನು ಒಪ್ಪಿಕೊಂಡ ಬಳಿಕ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

ದಾಳಿಯಲ್ಲಿ ಗಾಯಗೊಂಡಿರುವ ಆ್ಯಂಡರ್ಸನ್ ಅವರ ಚಿಕ್ಕಮ್ಮ ಮತ್ತು ಇತರ ಸಂತ್ರಸ್ತರ ಕುಟುಂಬಗಳು ಒಕ್ಲಹೋಮ ಗವರ್ನರ್ ಮತ್ತು ಜೈಲು ಪೆರೋಲ್ ಮಂಡಳಿಯ ವಿರುದ್ಧ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net