

ಮಹಾಮಾರಿ ಕರೊನಾದಿಂದಾಗಿ ವಿಶ್ವದಲ್ಲೇ ಅತಿ ಹೆಚ್ಚು ಬಾಧಿತವಾಗಿರುವ ಅಮೆರಿಕಕ್ಕೆ ವೈರಸ್ ನಿಯಂತ್ರಣ ಒಂದು ಸವಾಲಾಗಿದ್ದರೆ, ಇದರ ಜತೆಗೆ ಉದ್ಯೋಗ ನಷ್ಟ ಪ್ರಮಾಣ ನಿಯಂತ್ರಿಸುವುದೂ ಪ್ರಮುಖ ಸವಾಲಾಗಿ ಪರಿಣಮಿಸಿದೆ. ವಿಶ್ವದಲ್ಲಿ ಪ್ರಬಲ ಆರ್ಥಿಕತೆ ಹೊಂದಿರುವ ಅಮೆರಿಕದಲ್ಲಿ ಕೆಲಸ ಕಳೆದುಕೊಂಡು ಬೀದಿಗೆ ಬೀಳುತ್ತಿರುವವರ ಪ್ರಮಾಣ 3 ಕೋಟಿಗೂ ಅಧಿಕವಾಗಿದೆ.
ಕರೊನಾ ವೈರಸ್ ಪಸರಿಸುವಿಕೆ ತಡೆಗಟ್ಟುವ ಸಲುವಾಗಿ ಅಮೆರಿಕದಲ್ಲಿ ಘೋಷಿಸಲಾಗಿರುವ ಲಾಕ್ಡೌನ್ನಿಂದಾಗಿ ಬಹುತೇಕ ಎಲ್ಲ ಕ್ಷೇತ್ರಗಳು ಪಾತಾಳಕ್ಕೆ ಕುಸಿದಿದ್ದು, ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಕೈಗಾರಿಕೆಗಳು, ನಿರ್ಮಾಣ ಸಂಸ್ಥೆಗಳು, ರೆಸ್ಟೋರಂಟ್ಗಳು ಸೇರಿ ಎಲ್ಲ ಕ್ಷೇತ್ರಗಳ ಚಟುವಟಿಕೆಗಳು ಸ್ತಬ್ಧವಾಗಿರುವುದರಿಂದ ಆಯಾ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕೋಟ್ಯಂತರ ಉದ್ಯೋಗಿಗಳು ನೆರವಿಗಾಗಿ ಸರ್ಕಾರದ ಮೊರೆ ಹೋಗಿದ್ದಾರೆ.
ಅಮೆರಿಕದ ಕಾರ್ವಿುಕರ ಸಚಿವಾಲಯ ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ನೀಡುವುದಾಗಿ ಮಾರ್ಚ್ ಮಧ್ಯದಲ್ಲಿ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಿರುದ್ಯೋಗಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದು, ಈ ಸಂಖ್ಯೆಯ ಪ್ರಮಾಣ ಸರ್ಕಾರವನ್ನೇ ಚಿಂತೆಗೆ ದೂಡಿದೆ. ಈವರೆಗೆ 3.3 ಕೋಟಿ ಜನರು ನಿರುದ್ಯೋಗ ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಮಾರ್ಚ್ ಅಂತ್ಯದಲ್ಲಿ 69 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಕಳೆದ ವಾರ 32 ಲಕ್ಷ ಜನರು ಅರ್ಜಿ ಹಾಕಿದ್ದಾರೆ. ಅಮೆರಿಕದಲ್ಲಿ ನಿರುದ್ಯೋಗಿಗಳ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಆರ್ಥಿಕತೆ ಮೇಲೆ ಇನ್ನೂ ದೊಡ್ಡ ಹೊಡೆತ ಬೀಳುವ ಸಂಭವವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿ ಕ್ಷೇತ್ರದಲ್ಲೂ ಉದ್ಯೋಗ ನಷ್ಟ
ಅಮೆರಿಕದಲ್ಲಿ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಮನೆಗೆ ಕಳಿಸದೇ ಉಳಿಸಿಕೊಂಡಿರುವ ಯಾವ ಕ್ಷೇತ್ರವೂ ಇಲ್ಲ. ಕಳೆದ ತಿಂಗಳು ಹೋಟೆಲ್ ಕ್ಷೇತ್ರದಲ್ಲಿ 86 ಲಕ್ಷ ಉದ್ಯೋಗಿಗಳು, ವ್ಯಾಪಾರ, ಸಾರಿಗೆ ಮುಂತಾದ ಕ್ಷೇತ್ರಗಳಲ್ಲಿ 34 ಲಕ್ಷ ಉದ್ಯೋಗಿಗಳು, ನಿರ್ಮಾಣ ಕಂಪನಿಗಳಲ್ಲಿನ 25 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಉತ್ಪಾದನಾ ವಲಯ ಕಂಪನಿಗಳು 17 ಲಕ್ಷ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ.
ಶೇ. 4.4 ರಿಂದ ಶೇ.14.7ಕ್ಕೆ ಏರಿಕೆ
1929ರಲ್ಲಿ ಸಂಭವಿಸಿದ್ದ ಆರ್ಥಿಕ ಕುಸಿತದ ಬಳಿಕ ಈಗ ಅತಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ. ಕೆಲ ತಜ್ಞರ ಅಂದಾಜಿನ ಪ್ರಕಾರ ಕಳೆದ ಮಾರ್ಚ್ನಲ್ಲಿ ಶೇ. 4.4 ಇದ್ದ ಅಮೆರಿಕದ ನಿರುದ್ಯೋಗ ಪ್ರಮಾಣ ಏಪ್ರಿಲ್ ತಿಂಗಳಿಗೆ ಶೇ. 14.7ಕ್ಕೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಸುಮಾರು 2.1 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.