ಅಮೆರಿಕಕ್ಕೆ ಟ್ರಂಪ್ ತ್ರಿಸೂತ್ರ: ಆರ್ಥಿಕ ಚಟುವಟಿಕೆ ಪುನರಾರಂಭಕ್ಕೆ ಕ್ರಮ

Donald Trumph (FILEminimizer)
Published on

ವಾಷಿಂಗ್ಟನ್: ಕರೊನಾ ವೈರಸ್​ನಿಂದ ಬಸವಳಿದಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ಹಂತದ ಸೂತ್ರವನ್ನು ಸೂಚಿಸಿದ್ದು, ಇದನ್ನು ಎಲ್ಲ ರಾಜ್ಯಗಳ ಗವರ್ನರ್​ಗಳಿಗೆ ಕಳುಹಿಸಿಕೊಟ್ಟಿದ್ದಾರೆ.

ಕರನಾದಿಂದ ಉಂಟಾಗಿರುವ ಸಾವು- ನೋವಿನ ಮಾಹಿತಿ ಆಧರಿಸಿ ತಜ್ಞರ ತಂಡ ಮುಂದಿನ ಹೋರಾಟಕ್ಕೆ ಅಣಿಯಾಗುತ್ತಿದೆ. ಇದನ್ನು ‘ಒಪನಿಂಗ್ ಅಪ್ ಅಮೆರಿಕ’ ಎಂದು ಹೆಸರಿಸಿದ್ದೇವೆ. ಹೀಗಾಗಿ ದೇಶದ ಆರ್ಥಿಕತೆಯನ್ನು ಮತ್ತೆ ಪ್ರಗತಿ ಪಥದತ್ತ ಕೊಂಡೊಯ್ಯಲು 3 ಹಂತದ ಮಾರ್ಗದರ್ಶಿ ರೂಪಿಸಲಾಗಿದೆ ಎಂದು ಟ್ರಂಪ್ ಗವರ್ನರ್​ಗಳಿಗೆ ಕಳುಹಿಸಿರುವ ಮಾರ್ಗದರ್ಶಿಯಲ್ಲಿ ತಿಳಿಸಿದ್ದಾರೆ.

ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಹೋಗುವುದಕ್ಕೂ ಮುನ್ನ ಕನಿಷ್ಠ 14 ದಿನದ ಅಂತರ ಇರಲಿ ಮತ್ತು ಪ್ರತಿ ಹಂತದಲ್ಲೂ ಹೊಸ ಸೋಂಕಿನ ಪ್ರಕರಣ, ಪರೀಕ್ಷೆಗಳು ಮತ್ತು ಡೇಟಾ ಬಗ್ಗೆ ಕೂಲಂಕಷ ಪರಿಶೀಲನೆ ಅಗತ್ಯ ಎಂದು ಟ್ರಂಪ್ ಸೂಚಿಸಿದ್ದಾರೆ. ಟ್ರಂಪ್ ಪ್ರಸ್ತಾಪಿಸಿರುವ ಮಾರ್ಗದರ್ಶಿಯಲ್ಲಿ ಸೋಂಕು ಪ್ರಮಾಣ ಕಡಿಮೆ ಇರುವ ಕಡೆ ನಿರ್ಬಂಧಗಳನ್ನು ಸಡಿಲಗೊಳಿಸುವುದು ಮತ್ತು ಹೆಚ್ಚಿರುವ ಕಡೆ ನಿರ್ಬಂಧದ ಕಟ್ಟುನಿಟ್ಟಿನ ಪಾಲನೆಯ ಅಂಶಗಳಿವೆ. ನಿರ್ಬಂಧಗಳನ್ನು ಸಡಿಲಗೊಳಿಸಿದರೂ ಈ ವರ್ಷಾಂತ್ಯದವರೆಗೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವುದು ಅನಿವಾರ್ಯ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕರೊನಾ ವಿಷಯದಲ್ಲಿ ಜಾಗರೂಕವಾಗಿ ಹೆಜ್ಜೆ ಇರಿಸಬೇಕಿರುವ ಕಾರಣ ನಾವು ಒಂದೇ ಬಾರಿ ನಿರ್ಬಂಧ ಮುಕ್ತಗೊಳಿಸಲು ಆಗದು. ಕೆಲವು ರಾಜ್ಯಗಳಲ್ಲಿ ಪುನಾರಂಭ ಪ್ರಕ್ರಿಯೆ ಬೇಗ ಆಗಬಹುದು. ಕೆಲವು ಕಡೆ ವಿಳಂಬವಾಗಬಹುದು. ಸೋಂಕು ಇಳಿಮುಖ, ಪರೀಕ್ಷೆ ತೀವ್ರಗೊಳಿಸುವಿಕೆಯನ್ನು ಪರಿಗಣಿಸಿ ವ್ಯಾಪಾರೋದ್ಯಮ, ಶಾಲೆಗಳು ಮರು ಆರಂಭಗೊಳ್ಳುತ್ತವೆ. | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ

ಹಂತ 1

  • ಸಾಮಾಜಿಕ ಅಂತರ ಕಡ್ಡಾಯ
  • 10 ಜನರಿಗಿಂತ ಹೆಚ್ಚು ಜನರು ಸೇರುವಂತಿಲ್ಲ.
  • ಅನಗತ್ಯ ಸಂಚಾರ ತಡೆಯಿರಿ.
  • ಆನ್​ಲೈನ್ ಮೂಲಕ ನೌಕರಿ ಮಾಡಲು ಸಾಧ್ಯವಿರುವ ಕಡೆ ಉದ್ಯೋಗದಾತರು ಅವಕಾಶ ನೀಡಬೇಕು. ಉದ್ಯೋಗಿಗಳನ್ನು ಹಂತ ಹಂತವಾಗಿ ಕಚೇರಿಗೆ ಕರೆಯಿಸಿಕೊಳ್ಳಬಹುದು.

ಹಂತ 2

  • ಉದ್ಯೋಗದಾತರ ಸಂಚಾರಕ್ಕೆ ನಿರ್ಬಂಧ ಸಡಿಲ.
  • ಶಾಲೆ ಪುನಾರಂಭ.
  • ಬಾರ್, ಜಿಮ್ ಜನರು ಸೇರುವ ತಾಣಗಳ ಆರಂಭ. ಆದರೆ, ಸಾಮಾಜಿಕ ಅಂತರ ಕಡ್ಡಾಯ.
  • ಸಾಮಾಜಿಕ ಅಂತರದ ಕಟ್ಟುನಿಟ್ಟು ಗಮನದಲ್ಲಿ ಇರಿಸಿಕೊಂಡು ಚರ್ಚ್​ಗಳು ಬಾಗಿಲು ತೆರೆಯಬಹುದು. ಜನರ ಸಂಖ್ಯೆ 50ಕ್ಕಿಂತ ಕಡಿಮೆ ಇದ್ದರೆ ಒಳ್ಳೆಯದು.
  • ಸಾರ್ವಜನಿಕ ಸಂಚಾರಕ್ಕೆ ಮತ್ತೆ ಚಾಲನೆ.
  • ಅಗತ್ಯ ಶಸ್ತ್ರ ಚಿಕಿತ್ಸೆಗೆ ಅವಕಾಶ.

ಹಂತ 3

  • ಹೊಸದಾಗಿ ಸೋಂಕು ತಗುಲಿಸಿಕೊಂಡವರನ್ನು ಮಾತ್ರ ಐಸೋಲೇಷನ್​ಗೆ ಕಳುಹಿಸಬೇಕು.
  • ಬಾರ್, ಜಿಮ್್ಸ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವೆಡೆ ಸ್ಯಾನಿಟೈಸ್ ಮತ್ತು ಕನಿಷ್ಠ ಮಟ್ಟದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net