

ಜೈಪುರ: ಬಾಲ್ಯವಿವಾಹವೂ ಸೇರಿದಂತೆ ಎಲ್ಲಾ ವಿವಾಹಗಳ ನೋಂದಣಿಯನ್ನು ಕಡ್ಡಾಯಗೊಳಿಸುವ ತಿದ್ದುಪಡಿ ವಿಧೇಯಕವೊಂದನ್ನು ರಾಜಸ್ಥಾನದ ವಿಧಾನಸಭೆ ಇಂದು ಅಂಗೀಕರಿಸಿದೆ. ಬಾಲ್ಯವಿವಾಹಗಳಿಗೆ ಮಾನ್ಯತೆ ನೀಡುವ ಈ ವಿಧೇಯಕ ವಿಧಾನಸಭೆಯ ಇತಿಹಾಸದಲ್ಲಿ ಕರಾಳ ದಿನವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇಂದು ರಾಜಸ್ಥಾನದ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ರಾಜಸ್ಥಾನ ಕಂಪಲ್ಸರಿ ರಿಜಿಸ್ಟ್ರೇಷನ್ ಆಫ್ ಮ್ಯಾರೇಜಸ್(ಅಮೆಂಡ್ಮೆಂಟ್) ಬಿಲ್, 2021 ಅನ್ನು ಮಂಡಿಸಿತು. ತಕ್ಷಣ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ವಿಧೇಯಕವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸದನದಿಂದ ಹೊರನಡೆದರು. "ವಿಧಾನಸಭೆಯು ಸರ್ವಾನುಮತದಿಂದ ಬಾಲವಿವಾಹಗಳಿಗೆ ಅವಕಾಶ ಕೊಡಲು ಸಾಧ್ಯವೇ? ಈ ವಿಧೇಯಕವನ್ನು ಅಂಗೀಕರಿಸಿದರೆ ಇದು ವಿಧಾನಸಭಾ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯವಾಗಲಿದೆ" ಎಂದು ಬಿಜೆಪಿ ಶಾಸಕ ಅಶೋಕ್ ಲಹೋಟಿ ಸುದ್ದಿಗಾರರಿಗೆ ಹೇಳಿದರು.
ಆದಾಗ್ಯೂ ನಂತರದಲ್ಲಿ ವಿಧಾನಸಭೆಯಲ್ಲಿ ವಾಯ್ಸ್ ಓಟ್ನ ಮೂಲಕ ಮಸೂದೆಯು ಅಂಗೀಕರಿಸಲ್ಪಟ್ಟಿತು. ಈ ಮಸೂದೆಯು ಹೆಚ್ಚುವರಿ ಜಿಲ್ಲಾ ವಿವಾಹ ನೋಂದಣಿ ಅಧಿಕಾರಿ(ಡಿಎಂಆರ್ಒ)ಗಳನ್ನು ನೇಮಿಸಲು ಅವಕಾಶ ನೀಡುತ್ತದೆ. ಜೊತೆಗೆ, ವಿವಾಹಗಳ ಕಡ್ಡಾಯ ನೋಂದಣಿ ಕಾಯ್ದೆ ಸೆಕ್ಷನ್ 8 ರಲ್ಲಿ ಮದುವೆಯ ಸಮಯದಲ್ಲಿ ಹುಡುಗಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿದ್ದರೆ ಮತ್ತು ಹುಡುಗನ ವಯಸ್ಸು 21 ಕ್ಕಿಂತ ಕಡಿಮೆಯಿದ್ದರೆ, ಅವರ ಪಾಲಕರು ಅಥವಾ ಪೋಷಕರು 30 ದಿನಗಳಲ್ಲಿ ನೋಂದಣಿ ಅಧಿಕಾರಿಗೆ ವಿವಾಹದ ಮಾಹಿತಿ ನೀಡಬೇಕೆಂದು ಹೇಳುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)