

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗೆ ಇತ್ಯಾದಿ 47 ಜಾತಿಗಳನ್ನು ಸೃಷ್ಟಿಸಲಾಗಿದೆ. ಹೊಸ ಜಾತಿಗಳ ಅಧಿಸೂಚನೆ ಹೊರಡಿಸಿ ಕ್ರಿಶ್ಚಿಯನ್‌ಗೆ ಮತಾಂತರಿಸಲು ಹುನ್ನಾರ ಹೂಡಿದಂತಿದೆ ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಶಂಕಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಬಹುಶಃ 47 ಹೊಸ ಜಾತಿಗಳ ಬಗ್ಗೆ ಕ್ರಿಶ್ಚಿಯನ್ನರಿಗೇ ಗೊತ್ತಿರಲಾರದು. ಕ್ರಿಶ್ಚಿಯನ್ ಸಮುದಾಯದಲ್ಲಿ ಹಲವಾರು ಜಾತಿಗಳಿವೆಯೆ ? ಎಂಬ ಪ್ರಶ್ನೆಗೆ ಸರ್ಕಾರದಿಂದ ಈವರೆಗೂ ಉತ್ತರವಿಲ್ಲ ಎಂದು ಆಕ್ಷೇಪಿಸಿದರು.
ಹೊಸ ಜಾತಿಗಳನ್ನು ಕೈಬಿಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಲ್ಲ. ಹಿಂದು ಸಮುದಾಯಗಳನ್ನು ವಿಭಜಿಸಲು ಮತ್ತೊಮ್ಮೆ ಷಡ್ಯಂತ್ರವೆಂದು ಭಾವಿಸಬೇಕಾಗುತ್ತದೆ ಎಂದು ಎನ್.ರವಿಕುಮಾರ್ ಕಿಡಿ ಕಾರಿದರು.
ಎರಡು ವಿಫಲ ಸಮೀಕ್ಷೆಗಳು ನಮ್ಮ ಮುಂದಿವೆ. ಈಗ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಮತ್ತೆ ನಡೆಸಲು ಉದ್ದೇಶಿಸಿರುವ ಸಮೀಕ್ಷೆಯನ್ನೂ ಸಿಎಂ ಸಿದ್ದರಾಮಯ್ಯ ಅವರು ಇದೇ ಪಟ್ಟಿಗೆ ಸೇರಿಸಬಾರದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ವಿ.ಸುನಿಲ್ ಕುಮಾರ್ ಕಾಲೆಳೆದಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಆಯೋಗ ಪಟ್ಟಿ ಮಾಡಿರುವ ಕೆಲ ಜಾತಿಗಳ ವಗೀರ್ಕರಣದ ಬಗ್ಗೆ ಈಗಾಗಲೇ ಆಕ್ಷೇಪ ಎತ್ತಿದ್ದೇವೆ. ಈ ರೀತಿ ಕೋಡ್ ಪಡೆದವರು ಮುಂದೆ ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ ಮೀಸಲು ಸೌಲಭ್ಯದಲ್ಲಿ ಪಾಲು ಪಡೆಯುವ ಸಂದರ್ಭ ಸೃಷ್ಟಿಯಾದರೆ ಮತ್ತೆ ಗೊಂದಲ, ಸಮಸ್ಯೆ ಸೃಷ್ಟಿಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಗೆ ಮುನ್ನವೇ ಗೊಂದಲಗಣನ್ನು ಬಗೆಹರಿಸಬೇಕು. ಮತಾಂತರಗೊಂಡವರನ್ನು ಆಯಾ ಧರ್ಮದ ಕಾಲಂನಲ್ಲೇ ಇಡಿ. ತಕ್ಷಣ ಇಂತಹವರಿಗೆ ಜಾತಿ ವಾಚಕ ಶಬ್ದಗಳನ್ನು ಹಿಂಪಡೆಯಲು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಸಿಎಂಗೆ ವಿ.ಸುನಿಲ್‌ಕುಮಾರ್ ಒತ್ತಾಯಿಸಿದ್ದಾರೆ.