ಕಾಶ್ಮೀರ ದಾಳಿ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ - ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾಹಿತಿ

Published on

ಪುತ್ತೂರು: ಕಾಶ್ಮಿರದಲ್ಲಿ ಉಗ್ರಗಾಮಿ ದಾಳಿಗೊಳಗಾದ ಸಂತ್ರಸ್ತರ ಜತೆ ನಿಲ್ಲಬೇಕಾದದ್ದು ಸಮಸ್ತ ನಾಗರಿಕ ಸಮುದಾಯದ ಜವಾಬ್ದಾರಿ. ದೇಶಪ್ರೇಮ, ಧರ್ಮ ರಕ್ಷಣೆ ಬಗ್ಗೆ ತುಡಿಯುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ಕಾಶ್ಮೀರ ದಾಳಿ ಸಂತ್ರಸ್ತರ ಜತೆ ನಿಲ್ಲುವ ಮೂಲಕ ಅವರಿಗೆ ಸಾಂತ್ವನ ನೀಡುವ ಪ್ರಯತ್ನಕ್ಕಿಳಿಯುತ್ತಿದೆ. ಉಗ್ರರ ದುಷ್ಕೃತ್ಯಕ್ಕೆ ಬಲಿಯಾದವರ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲು ಪುತ್ತೂರು ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ನಿರ್ಧರಿಸಿದೆ ಎಂದು ಸಂಸ್ಥೆ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ನಟ್ಟೋಜ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಅಂಬಿಕಾ ವಿದ್ಯಾಲಯ(ಸಿಬಿಎಸ್‌ಇ) ವಸತಿಯುಕ್ತ ಹಾಗೂ ಎರಡು ಪ್ರತ್ಯೇಕ ಅಂಬಿಕಾ ಪದವಿಪೂರ್ವ ವಿದ್ಯಾಲಯ ಜತೆಗೆ ಅಂಬಿಕಾ ಪದವಿ ಮಹಾವಿದ್ಯಾಲಯವನ್ನು ನಡೆಸುತ್ತಿದೆ. ಎಲ್‌ಕೆಜಿಯಿಂದ ಪದವಿ ಹಂತದವರೆಗೆ ಯಾವುದೇ ತರಗತಿಯಲ್ಲಿ ಓದಲು ಬಯಸುವ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ, ಊಟೋಪಚಾರ, ವಸತಿ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಟ್ಟೋಜ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ರಾಜಶ್ರೀ ಎಸ್.ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಡಾ.ಎಚ್.ಮಾಧವ ಭಟ್, ಬಾಲಕೃಷ್ಣ ಬೋರ್ಕರ್, ಆಡಳಿತಾಽಕಾರಿ ಗಣೇಶ್‌ಪ್ರಸಾದ್, ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಾಜೆ ಉಪಸ್ಥಿತರಿದ್ದರು.

ಕಾಶ್ಮೀರದ ಪಂಡಿತರ ಮೇಲಾದ ದೌರ್ಜನ್ಯದ ಘೋರತೆಯನ್ನು ಮನಗಂಡು ಕಾಶ್ಮೀರಿ ಸಂತ್ರಸ್ತ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ಘೋಷಿಸಲಾಗಿತ್ತು. ಅದರಂತೆ ಕಾಶ್ಮೀರದ ಇಬ್ಬರು ವಿದ್ಯಾರ್ಥಿಗಳು ಪುತ್ತೂರು ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದೇಶದ ರಕ್ಷಣೆಗಾಗಿ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ನಮ್ಮೆಲ್ಲರನ್ನು ಸಂರಕ್ಷಿಸುವ ಸೈನಿಕರ ಮಕ್ಕಳಿಗೆ ಹಲವು ವರ್ಷಗಳಿಂದ ಅಂಬಿಕಾ ರಿಯಾಯಿತಿ ಶುಲ್ಕದೊಂದಿಗೆ ಶಿಕ್ಷಣ ನೀಡುತ್ತಿದೆ.

| ಸುಬ್ರಹ್ಮಣ್ಯ ನಟ್ಟೋಜ, ಅಧ್ಯಕ್ಷ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net