ಕಿಡಿಗೇಡಿಗಳನ್ನು ಬಂಧಿಸಿಲು ಆಗ್ರಹಿಸಿ ಪ್ರತಿಭಟನೆ

28 apr tnp 01
ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸಿರುವುದನ್ನ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಿ.ನರಸೀಪುರ ತಾಲೂಕು ಕಚೇರಿ ಮುಂಭಾಗವಿರುವ ಅಂಬೇಡ್ಕರ್ ಪುತ್ಥಳಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು. ಬನ್ನಹಳ್ಳಿ ಸೋಮಣ್ಣ, ಕೆ.ಎನ್.ಪ್ರಭುಸ್ವಾಮಿ, ಆಲಗೂಡು ಎಸ್. ಚಂದ್ರಶೇಖರ್, ಸೋಸಲೆ ರಾಜಶೇಖರ, ಗಂಗಾಧರ, ಮರಿಸ್ವಾಮಿ, ಕುಮಾರ ಇತರರು ಇದ್ದರು.
Published on

ತಿ.ನರಸೀಪುರ: ಮೈಸೂರು ತಾಲೂಕಿನ ವಾಜಮಂಗಲ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಶೋಷಿತ ಸಮುದಾಯಗಳ ವಿಮೋಚಕ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ತಾಲೂಕು ಕಚೇರಿ ಮುಂಭಾಗವಿರುವ ಅಂಬೇಡ್ಕರ್ ಪುತ್ಥಳಿ ಎದುರು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನೆತ್ತಿ ಸುಡುವ ಬಿಸಿಲಿನ ನಡುವೆ ಪ್ರತಿಭಟನೆಯನ್ನ ಪ್ರಾರಂಭಿಸಿದ ದಲಿತ ಸಂಘಟನೆಗಳ ಮುಖಂಡರು ಆಧುನಿಕ ಭಾರತದ ನಿರ್ಮಾತೃ ಅಂಬೇಡ್ಕರ್ ಅವರನ್ನೇ ಅವಮಾನಿಸುತ್ತಿರುವ ವಿಕೃತ ಮನಸ್ಸಿನ ಕಿಡಿಗೇಡಿಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಘಟನೆ ನಡೆದು ಹಲವು ದಿನಗಳಾದರೂ ಕಿಡಿಗೇಡಿಗಳನ್ನ ಪತ್ತೆ ಹಚ್ಚದ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಒಕ್ಕೂಟದ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಮಾತನಾಡಿ, ಸರ್ವರು ಸಮಾಧಾನದಿಂದ ಜೀವನ ನಡೆಸಲಿ. ಕಾನೂನು ಸುವ್ಯವಸ್ಥೆಯಿಂದ ಪ್ರತಿಯೊಬ್ಬರೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲಿ ಎಂದು ಅತ್ಯುತ್ತಮ ಸಂವಿಧಾನವನ್ನು ರಚನೆ ಮಾಡಿದ ಅಂಬೇಡ್ಕರ್ ಅವರ ಬಗ್ಗೆ ಕೆಲವರಲ್ಲಿ ತಪ್ಪು ಭಾವನೆ ಮತ್ತು ವಿಕೃತಿ ಮನಸ್ಸು ಇರುವುದರಿಂದ ಅವರನ್ನು ಅಪಮಾನಿಸುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಿವೆ.

ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ವಿರೂಪಗೊಳಿಸಿ ವಿಕೃತಿ ಮೆರೆದಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಶಿಕ್ಷೆ ನೀಡಬೇಕು. ಅವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು. ಅಲ್ಲಿಯವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ. ಮಂಗಳವಾರ ಅಂಬೇಡ್ಕರ್ ಅಭಿಮಾನಿಗಳು ಆಯೋಜಿಸಿರುವ ಪಾದಯಾತ್ರೆ ಚಳವಳಿಯಲ್ಲಿ ಒಕ್ಕೂಟದ ಪದಾಧಿಕಾರಿಗಳೆಲ್ಲರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗಿಯ ಸಂಚಾಲಕ ಆಲಗೂಡು ಎಸ್.ಚಂದ್ರಶೇಖರ್ ಹಾಗೂ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ ಮೂರ್ತಿ ಮಾತನಾಡಿದರು. ನಂತರ ತಹಸೀಲ್ದಾರ್ ಸುರೇಶ್ ಆಚಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಆಲಗೂಡು ಶಿವಣ್ಣ, ಸೋಸಲೆ ಗಂಗಾಧರ, ನಂಜುಂಡಯ್ಯ, ಕನ್ನಾಯಕನಹಳ್ಳಿ ಮರಿಸ್ವಾಮಿ, ಕೇಶವಮೂರ್ತಿ, ನಿಲಸೋಗೆ ಕುಮಾರ, ಎಚ್ ಡಿ ರಾಜೇಶ್, ರಂಗಸ್ವಾಮಿ, ಬಸವರಾಜು, ಶಾಂತಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net