

ಅಂಬೇಡ್ಕರ್ ಅವರನ್ನು ನಾನು ದಲಿತ ನಾಯಕ ಎಂದು ನಂಬುವುದಿಲ್ಲ. ಒಂದಷ್ಟು ಹಿತಾಸಕ್ತಿಗಳು ಈ ರೀತಿ ಬಿಂಬಿಸುವುದನ್ನು ನಾನು ಒಪ್ಪುವುದಿಲ್ಲ. ಇವರು ಸರ್ವಜನಾಂಗದ ಪ್ರಶ್ನಾತೀತ ನಾಯಕ. ಸಮಾಜದ ಕಟ್ಟಕಡೆಯ ಶೋಷಿತರಿಂದ ಹಿಡಿದು ಮೇಲ್ವರ್ಗ ಎಂದು ಕರೆಯಲ್ಪಡುವ ಪ್ರತಿಯೊಬ್ಬರು ಇವರು ರಚಿಸಿದ ಸಂವಿಧಾನದಿಂದ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗ ಪಡೆದಿದ್ದಾರೆ. ಈ ಕಾರಣಕ್ಕೆ ಬಾಬಾಸಾಹೇಬರು ಭಾರತ ಭಾಗ್ಯವಿಧಾತ.
ಈ ಲೇಖನದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ ನೀಡುವುದು ನನ್ನ ಉದ್ದೇಶವಲ್ಲ. ಬದಲಾಗಿ ನನ್ನ ಮೇಲೆ ಅವರು ಹೇಗೆ ಪ್ರಭಾವ ಬೀರಿದರು, ಅವರ ಆಶಯಗಳನ್ನು ಈಡೇರಿಸಲು ನಮ್ಮ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂದು ಹೇಳುವುದು ನನ್ನ ಇರಾದೆ.
ಕಾಂಗ್ರೆಸ್ಸಿಗನಾಗಿರುವುದೇ ನನಗೆ ಹೆಮ್ಮೆ: ವಿದ್ಯಾರ್ಥಿ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಮೂಲಕ ರಾಜಕಾರಣದ ಮೆಟ್ಟಿಲುಗಳನ್ನು ಹತ್ತುತ್ತ ಬೆಳೆದವನು ನಾನು. ನಾವು ರಾಜಕೀಯವನ್ನು ಬೆರಗುಗಣ್ಣಿನಿಂದ ನೋಡುವಾಗ ವಿಧಾನಸಭೆ ಸೇರಿದಂತೆ ಹೊರಗೆ ಹಲವಾರು ಧೀಮಂತ ನಾಯಕರು ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸುತ್ತಿದ್ದರು. ರಾಜಕೀಯ ಗುರುಗಳಾದ ಬಂಗಾರಪ್ಪ, ಬಸವಲಿಂಗಪ್ಪ, ಎಸ್.ಎಂ.ಕೃಷ್ಣ, ಕೆ.ಎಚ್.ಪಾಟೀಲರು, ಕೆ.ಎಚ್.ರಂಗನಾಥ್ ಅವರು ಸೇರಿದಂತೆ ಅನೇಕ ಘಟಾನುಘಟಿ ನಾಯಕರ ಹಲವಾರು ಚಿಂತನೆಗಳಲ್ಲಿ ಅಂಬೇಡ್ಕರ್ ಅವರ ನೆರಳಿರುವುದನ್ನು ನಾನು ಕಂಡುಕೊಂಡೆ. ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಸಂವಿಧಾನಕ್ಕೆ ಯಾವುದೇ ಸಂದರ್ಭದಲ್ಲಿ ಅಪಚಾರ ಉಂಟಾದಾಗ ಬೀದಿಗೆ ಇಳಿದು ಹೋರಾಟ ರೂಪಿಸುವುದು ಕಾಂಗ್ರೆಸ್ ಪಕ್ಷ, ಸಂವಿಧಾನದ ಪದಗಳು ಎಲ್ಲರ ಎದೆಯಲ್ಲಿ ಮಾರ್ದನಿಸಬೇಕು ಎಂದು ಪೀಠಿಕೆಯನ್ನು ಶಾಲೆಗಳಲ್ಲಿ ಓದುವಂತೆ ಮಾಡಿದ್ದು ಕಾಂಗ್ರೆಸ್. ಈ ಕಾರಣಕ್ಕೆ ನಾನು ಕಾಂಗ್ರೆಸ್ಸಿಗನಾಗಿರುವುದೇ ಹೆಮ್ಮೆಯ ಸಂಗತಿ ಎಂದು ನಂಬಿದ್ದೇನೆ.
‘ಭಾರತ್ ಜೋಡೋ’ ಯಾತ್ರೆಯನ್ನು ಕಾಂಗ್ರೆಸ್ ಪಕ್ಷಕ್ಕಾಗಿ ನಡೆಸಲಾಯಿತು ಎನ್ನುವ ಕಲ್ಪನೆ ಹಲವರಲ್ಲಿದೆ. ಭಾರತ್ ಜೋಡೋ ಯಾತ್ರೆ ಮಾಡಿದ್ದು ಸಂವಿಧಾನದ ರಕ್ಷಣೆಗೆ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ಉಳಿಸುವ ಸಲುವಾಗಿ. ಈ ಪಾದಯಾತ್ರೆ ಸಂದರ್ಭದಲ್ಲಿ ನಡೆದ ಈ ಘಟನೆಯನ್ನು ಉಲ್ಲೇಖಿಸಲೇ ಬೇಕು. ಚಾಮರಾಜನಗರದ ಗುಂಡ್ಲುಪೇಟೆಯಿಂದ ಕರ್ನಾಟಕ ಪ್ರವೇಶ ಮಾಡಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ನಂಜನಗೂಡು ಬಳಿಯ ಬದನವಾಳುವಿಗೆ ಭೇಟಿಕೊಟ್ಟಿತು.
1993ರಲ್ಲಿ ನಡೆದ ಜಾತಿ ಸಂಘರ್ಷದ ಕಾರಣಕ್ಕೆ ಕಳೆದ ಮೂರು ದಶಕಗಳಿಂದ ಇಬ್ಭಾಗವಾಗಿದ್ದ ಹಳ್ಳಿಯಲ್ಲಿ ಒಂದು ರೀತಿಯ ನವೋಲ್ಲಾಸ ತುಂಬಿತ್ತು. ಒಡೆದು ಹೋಗಿದ್ದ ಮನಸುಗಳಿಗೆ ಬೆಸುಗೆ ಹಾಕುವ ಅಪರೂಪದ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಯಾದೆವು. ಜಾತಿ ಗಲಭೆಯಿಂದ ಎರಡು ಓಣಿಗಳ ನಡುವೆಯಿದ್ದ ಸಂಪರ್ಕವೇ ಕಡಿದು ಹೋಗಿತ್ತು. ಹೀಗಾಗಿ ಇಲ್ಲಿ ಹೊಸ ರಸ್ತೆಯನ್ನು ನಿರ್ಮಾಣ ಮಾಡಿ ಭಾರತ್ ಜೋಡೋ ರಸ್ತೆ ಎಂದು ಹೆಸರಿಡಲಾಯಿತು. ಪರಿಶಿಷ್ಟರು ಹಾಗೂ ಸವರ್ಣೀಯ ಸಮುದಾಯದವರು ಒಟ್ಟಿಗೆ ಕುಳಿತು ಸಹಪಂಕ್ತಿ ಭೋಜನ ಮಾಡಿದ್ದು ಎಲ್ಲರೂ ಒಂದೇ ಎನ್ನುವ ಭಾವವನ್ನು ಮೂಡಿಸಿತು. ಇದು ಅಂಬೇಡ್ಕರ್ ಅವರ ನಿಜವಾದ ಆಶಯ. ಈ ವೇಳೆ ನನಗೆ ಅಂಬೇಡ್ಕರ್ ಅವರು 1927ರ ಮಾರ್ಚ್ 20ರಂದು ನಡೆಸಿದ್ದ ಮಹಾದ್ ಸತ್ಯಾಗ್ರಹ ನೆನಪಾಯಿತು.
ಸಂವಿಧಾನ ಅಪಾಯದಲ್ಲಿದೆ ಎಂದು ಹೇಳಿದರೆ ಪ್ರಯೋಜನವಿಲ್ಲ. ಅದನ್ನು ಉಳಿಸುವ ಕ್ರಿಯೆಗೆ ಇಳಿಯಬೇಕು. ‘ಶಿಕ್ಷಣ, ಸಂಘಟನೆ, ಹೋರಾಟದ ಮೂಲಕವೇ ನಮ್ಮ ಹಕ್ಕುಗಳನ್ನು ಪಡೆಯಬೇಕು’ ಎನ್ನುವ ಬಾಬಾಸಾಹೇಬರ ಮಾತು ಇಂದಿನ ವಿದ್ಯಾರ್ಥಿ ಹಾಗೂ ಯುವಪೀಳಿಗೆ ಮರೆಯಬಾರದು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಸಂವಿಧಾನ ಪೀಠಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆಯು ರಾಜ್ಯದಾದ್ಯಂತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿತು. ‘ಗುಲಾಮನಿಗೆ ತನ್ನ ಗುಲಾಮತನದ ಅರಿವು ಮೂಡಿಸುವುದೇ ಶಿಕ್ಷಣ’ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರಿಯಾದ ಶಿಕ್ಷಣ ನೀಡುವುದೇ ನಮ್ಮ ಮುಂದಿನ ಗುರಿ. ಗುಲಾಮತನವನ್ನು ಹೋಗಲಾಡಿಸಿ ಈ ದೇಶವನ್ನು ನಿಜವಾದ ಶಕ್ತಿಯನ್ನಾಗಿ ಹೊರಹೊಮ್ಮಿಸುವುದೇ ನಮ್ಮ ಗುರಿ.
ಈ ವರ್ಷದ ಗಣರಾಜ್ಯೋತ್ಸವದ ವೇಳೆ ಗೆಳೆಯರೊಬ್ಬರು ಅಂಬೇಡ್ಕರ್ ಅವರ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಹೇಳಿದ್ದರು. ಇದು ನನ್ನ ನೆನಪಿನಿಂದ ಮಾಸದೆ ಇನ್ನೂ ಹಸಿರಾಗಿ ಉಳಿದಿದೆ. ಈ ಘಟನೆಯನ್ನು ಅಂಬೇಡ್ಕರ್ ಅವರ ಸಹಾಯಕರಾಗಿದ್ದ ರತ್ತು ಅವರು ಬರೆದ ಪುಸ್ತಕದಲ್ಲಿದೆ ಎಂದು ಅವರು ಹೇಳಿದ್ದರು. ಒಮ್ಮೆ ಬಾಬಾಸಾಹೇಬರು ದಿಲ್ಲಿಯ ತಮ್ಮ ಮನೆಯಲ್ಲಿ ಪಿಟೀಲು ನುಡಿಸುತ್ತ ಖುಷಿಯಲ್ಲಿದ್ದರಂತೆ. ಆಗ ಅವರ ಸಹಾಯಕರಾದ ರತ್ತು ಅವರು ‘ಏನು ಸಾಹೇಬರು ಇಷ್ಟೊಂದು ಖುಷಿಯಲ್ಲಿದ್ದೀರಿ?’ ಎಂದು ಕೇಳಿದಾಗ, ಅಂಬೇಡ್ಕರ್ ಅವರು, ‘ನಾಳೆ (1950ರ ಜನವರಿ 26 ಸಂವಿಧಾನ ಜಾರಿಯಾಗುವ ದಿನ) ರಾಜರು ಎಂದುಕೊಂಡವರು ಬೀದಿಗೆ ಬೀಳುತ್ತಾರೆ, ಬೀದಿಯಲ್ಲಿ ಇರುವ ಜನಸಾಮಾನ್ಯರು ರಾಜರಾಗುತ್ತಾರೆ’ ಎಂದರಂತೆ.
ಅಂಬೇಡ್ಕರ್ ಅವರ ಈ ಕನಸನ್ನು ನನಸು ಮಾಡಬೇಕು ಎಂದೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ವರದಿಯನ್ನು ಸ್ವೀಕರಿಸಲು, ಒಳಮೀಸಲಾತಿ ಜಾರಿ ಮಾಡಲು ಮುಂದಡಿ ಇಟ್ಟಿದ್ದೇವೆ. ಈ ಭೀಮ ಹೆಜ್ಜೆ ಭಾರತದ ಇತಿಹಾಸದಲ್ಲಿಯೇ ಅಚ್ಚಳಿಯದೆ ಉಳಿಯಲಿದೆ. ಅಂಬೇಡ್ಕರ್ ಎಂದರೆ ಸ್ಪೂರ್ತಿ, ತೇಜಸ್ಸು, ಮಮತೆ, ಪ್ರೀತಿ. ಭಗವಾನ್ ಬುದ್ಧನಂತೆಯೇ ಪ್ರಭಾವಶಾಲಿಯಾದ ಈ ಶಕ್ತಿಯನ್ನು ಅವರ ಜಯಂತಿಯ ನೆಪದಲ್ಲಿ ನೆನಪಿಸಿಕೊಳ್ಳುವ ಕೆಲಸ ಮಾಡಿದ್ದೇನೆ. ‘ನನ್ನ ದೇಹ ಸತ್ತರೂ ನಾನು ಭಾರತದ ಸಂವಿಧಾನದ ರೂಪದಲ್ಲಿ ಬದುಕಿರುತ್ತೇನೆ’ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಅವರ ಸಂವಿಧಾನವನ್ನು ಎದೆಗೆ ಅಪ್ಪಿಕೊಂಡು ಉಳಿಸುವ ಕೆಲಸವನ್ನು ನಾವೆಲ್ಲರೂ ಸದಾ ಮಾಡೋಣ, ಭೀಮಪಥದಲ್ಲಿ ನಡೆಯೋಣ.
(ಲೇಖಕರು ರಾಜ್ಯದ ಉಪಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು)