

Ambedkar Photo: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಇಂದು ಸಂಸತ್ತಿನಲ್ಲಿ ವಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿವೆ. ಇನ್ನು ಬಿಜೆಪಿ ನಾಯಕರ ವಿರುದ್ಧ ಪ್ರತಿಪಕ್ಷಗಳು ವ್ಯಾಪಕ ಖಂಡನೆ ವ್ಯಕ್ತಪಡಿಸುತ್ತಿದ್ದು, ಸಂಸತ್ತಿನಲ್ಲಿ ದೊಡ್ಡ ಹೈಡ್ರಾಮಾವೇ ನಡೆದುಹೋಗಿದೆ.
ಡಾ.ಬಾಬಾಸಾಹೇಬ್ ಅಂಬೇಡ್ಕರ್ರನ್ನು ಕೇಂದ್ರ ಗೃಹ ಸಚಿವರು ಅವಹೇಳನ ಮಾಡಿರುವುದನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ಸದನದಲ್ಲಿ ಇಂದು ಕೂಡ ಪ್ರತಿಭಟನೆ ಮುಂದುವರೆಸಿದ್ದಾರೆ. ರಾಜ್ಯದಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನದ ಭಾಗವಾಗಿ ಸದನದಲ್ಲಿ ಭಾಗಿಯಾಗಿದ್ದ ಬಿಜೆಪಿಗರ ಮುಂದೆ ಕಾಂಗ್ರೆಸ್ಸಿಗರು ಅಮಿತ್ ಶಾ ಹೇಳಿಕೆಯನ್ನು ಮುಂದಿಟ್ಟು ವಿರೋಧ ವ್ಯಕ್ತಪಡಿಸಿದರೆ, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಮಿತ್ ಷಾ ಹೇಳಿಕೆಯನ್ನು ಸಮರ್ಥಿಸಿಕೊಂಡು ಸದನದಿಂದ ಹೊರ ನಡೆದಿದ್ದಾರೆ. ಈ ನಡೆಗೆ ಆಕ್ರೋಶಗೊಂಡ ವಿಪಕ್ಷಗಳ ನಾಯಕರು, ತಮ್ಮ ಆಸನಗಳ ಎದುರು ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಾಲಾಗಿ ಜೋಡಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಮಂಗಳವಾರ (ಡಿ.17) ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ಅಮಿತ್ ಷಾ, ‘ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಹೆಸರು ಪಠಿಸುವುದು ಈಗ ವ್ಯಸನ ಆಗಿ ಬಿಟ್ಟಿದೆ. ಅಂಬೇಡ್ಕರ್ ಬದಲು 100 ಬಾರಿ ದೇವರನ್ನು ಜಪಿಸಿದ್ದರೆ ಏಳೇಳು ಜನ್ಮದಲ್ಲೂ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು. ಆದರೆ, ಅಂಬೇಡ್ಕರ್ ಕುರಿತು ನಿಮ್ಮ (ಕಾಂಗ್ರೆಸ್) ಭಾವನೆ ಏನೆಂಬುದನ್ನು ನಾನು ಹೇಳುತ್ತೇನೆ. ನೆಹರು ಅವರ ಮೊದಲ ಸಚಿವ ಸಂಪುಟಕ್ಕೆ ಅಂಬೇಡ್ಕರ್ ಮತ್ತು ರಾಜಾಜಿ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಇಬ್ಬರು ದಿಗ್ಗಜರ ರಾಜೀನಾಮೆ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿ.ಸಿ. ರಾಯ್ ಪತ್ರ ಬರೆದಿದ್ದರು.
ಇದಕ್ಕೆ ಪ್ರತಿಯಾಗಿ, ರಾಜಾಜಿ ರಾಜೀನಾಮೆ ನೀಡಿದ್ದು ನಮಗೆ ಸ್ವಲ್ಪ ನಷ್ಟ ತರಲಿದೆ. ಆದರೆ, ಅಂಬೇಡ್ಕರ್ ರಾಜೀನಾಮೆಯಿಂದ ಸಂಪುಟ ದುರ್ಬಲ ಆಗುವುದಿಲ್ಲ ಎಂದು ನೆಹರೂ ಪ್ರತಿಕ್ರಿಯಿಸಿದ್ದರು. ಆದರೆ, ಈಗ ಅಂಬೇಡ್ಕರ್ಗೆ ದೊಡ್ಡ ಸಂಖ್ಯೆಯ ಬೆಂಬಲಿಗರು ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು ವೋಟ್ ಬ್ಯಾಂಕ್ ಕಾರಣಕ್ಕೆ ಅಂಬೇಡ್ಕರ್ ಜಪ ಮಾಡುತ್ತಿದ್ದಾರೆ’ ಎಂದು ಅಮಿತ್ ಷಾ ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು. ಇದನ್ನು ಬುಧವಾರ ಪ್ರಸ್ತಾಪ ಮಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಂಬೇಡ್ಕರ್ ಅವರಿಗೆ ಷಾ ಅವಮಾನ ಮಾಡಿದ್ದಾರೆಂದು ಆರೋಪ ಮಾಡಿದರು.
ಕಾಂಗ್ರೆಸ್ ನಾನು ಹೇಳಿದ ಸತ್ಯವನ್ನು ತಪ್ಪಾಗಿ ವ್ಯಾಖ್ಯಾನಿಸಿದೆ. ಸಂವಿಧಾನ ವಿರೋಧಿ ಪಕ್ಷವು ತನ್ನ ಟೀಕೆಗಳನ್ನು ತಪ್ಪಾಗಿ ಪಸ್ತುತಪಡಿಸುತ್ತಿದೆ. ನನ್ನ ವಿರುದ್ಧ ಸಮಾಜದಲ್ಲಿ ಸುಳ್ಳು ನಿರೂಪಣೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅಮಿತ್ ಷಾ ಬುಧವಾರ ಸ್ಪಷ್ಟನೆ ನೀಡಿದ್ದಾರೆ.