ಅಂಬೇಡ್ಕರ್​ ಅವರಿಗೆ ತುತ್ತು ನೀಡಿದ್ದ ಶತಾಯುಷಿ 'ಮುನ್ನಿ'ಯ ನಿಧನ

ambedkarweb
Published on

ಚಿಕ್ಕೋಡಿ (ಬೆಳಗಾವಿ): ಈ ಚಿತ್ರದಲ್ಲಿ ಕಾಣಿಸುತ್ತಿರುವ ಅಜ್ಜಿಯ ಹೆಸರು ಜಗಣಭಿ ಪಟೇಲ್. ಇವರು ಬೆಳಗಾವಿಯ ಚಿಕ್ಕೋಡಿಯವರು. ಇವರ ವಯಸ್ಸು 108. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಈ ಅಜ್ಜಿ ಇಂದು ನಿಧನರಾಗಿದ್ದಾರೆ.

ಅಷ್ಟಕ್ಕೂ ಈ ಅಜ್ಜಿಯ ವಿಶೇಷತೆ ಎಂದರೆ, ಇವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಅವರಿಗೆ ಉಟೋಪಚಾರ ಮಾಡಿದವರು.

ಹೌದು. ಅದು 1927ರ ಸಮಯ. ಅಂಬೇಡ್ಕರ್​ ಅವರು ಬಾಂಬೆ ಹೈಕೋರ್ಟ್ ಸುಪ್ರಸಿದ್ಧ ವಕೀಲರಾಗಿದ್ದರು. ಮಹಾರಾಷ್ಟ್ರದ ಔರವಾಡ ಗ್ರಾಮದ ದೇವಸ್ಥಾನದ ಜಮೀನಿನ ವಿವಾದದ ಕುರಿತಾದ ಅರ್ಜಿಯೊಂದರಲ್ಲಿ ಇವರು ವಕಾಲತ್ತು ವಹಿಸಿದ್ದರು. ಈ ಜಮೀನಿನ ಕುರಿತಾಗಿ ದೇವಸ್ಥಾನ ಸಮಿತಿ ಹಾಗೂ ಪಟೇಲರ ನಡುವೆ ವಿವಾದ ಉಂಟಾಗಿತ್ತು.

ಆ ಸಂದರ್ಭದಲ್ಲಿ ಅವರು ಜಮೀನಿನ ಸಮೀಪ ಬಂದಾಗ ಸುಮಾರು 9 ದಿನಗಳ ಕಾಲ ಅಲ್ಲಿ ತಂಗಿದ್ದರು. ಆಗ ಸುಮಾರು 15 ವರ್ಷದ ಬಾಲಕಿಯಾಗಿದ್ದ ಜಗಣಭಿ ಪಟೇಲ್ ಅವರು ಅಂಬೇಡ್ಕರ್ ಅವರಿಗೆ ಉಟದ ವ್ಯವಸ್ಥೆ ಮಾಡಿದ್ದರು. ಒಂಬತ್ತೂ ದಿನಗಳೂ ಇಲ್ಲಿಯೇ ಅಂಬೇಡ್ಕರ್​  ಊಟ ಮಾಡಿದ್ದರು.

ಈ ಬಾಲಕಿಗೆ ಪ್ರೀತಿಯಿಂದ ಅಂಬೇಡ್ಕರ್​ ಅವರು ಮುನ್ನಿ ಎಂದು ಕರೆಯುತ್ತಿದ್ದರು. ಸದ್ಯ ಕರೋಶಿಯಲ್ಲಿ ತಂಗಿದ್ದ ಶತಾಯುಷಿ ಜಗಣಭಿ ಇಂದು ಮೃತಪಟ್ಟಿದ್ದಾರೆ.

ಇವರಿಗೆ ಐದು ಜನ ಮಕ್ಕಳು. ಅವರ ಪೈಕಿ ಹಿರಿಯ ಮಗ ನಿಧನರಾಗಿದ್ದು,‌ ಓರ್ವ ಪುತ್ರ, ಮೂವರು ಪುತ್ರಿಯರು ಇದ್ದಾರೆ. ವರ್ಷ ನೂರು ದಾಟಿದ್ದರೂ ಖುದ್ದು ಕೆಲಸ ಮಾಡಿಕೊಳ್ಳುತ್ತಿದ್ದ ಜಗಣಭಿ ಅವರು ಸುತ್ತಮುತ್ತಲೂ ತಮ್ಮ ಚುರುಕುತನದಿಂದಾಗಿ ತುಂಬಾ ಪ್ರಸಿದ್ಧರು.

ಬಿ.ಆರ್​. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್, ಬಿಎಸ್ ಪಿ ರಾಷ್ಟ್ರೀಯ ಅಧ್ಯಕ್ಷ ಮಾಯಾವತಿ ಅವರು ಈ ಅಜ್ಜಿಯನ್ನು ಈಚೆಗೆ ಭೇಟಿ ಮಾಡಿ ಸನ್ಮಾನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net