ಸ್ವಚ್ಛ ರಾಜಕಾರಣದ ರಾಯಭಾರಿ

SM Krishna
Published on

ಎಸ್.ಎಂ. ಕೃಷ್ಣ ಎಂದ ಕೂಡಲೇ ನೆನಪಾಗುವುದು ಬೆಂಗಳೂರಿಗೆ ‘ಸಿಲಿಕಾನ್ ಸಿಟಿ’ ಎಂಬ ಬ್ರ್ಯಾಂಡ್​ನೇಮ್ ತಂದುಕೊಟ್ಟ ಅವರ ಕರ್ತೃತ್ವ ಶಕ್ತಿ. ಅದೇ ರೀತಿ ವರನಟ ಡಾ.ರಾಜಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಸೆರೆಯಿಂದ ಬಿಡಿಸಲು ಪಟ್ಟ ಪ್ರಯತ್ನ ಹಾಗೂ ಸತತ ಬರದಂತಹ ತೀವ್ರ ಸಂಕಷ್ಟದಲ್ಲಿ ಅಧಿಕಾರ ನಡೆಸಿದ ಮುತ್ಸದ್ದಿತನ. ಇದರಿಂದಾಗಿ ರಾಜ್ಯ ರಾಜಕಾರಣದಲ್ಲಿ ಸದಾ ನೆನಪಲ್ಲಿ ಉಳಿಯುವಂತಹ ಹೆಸರು.

ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ರಾಜ್ಯ ಕಂಡ ಅಪೂರ್ವ ಮತ್ತು ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ. ಸಣ್ಣ ಹಳ್ಳಿಯೊಂದರ ರಾಜಕಾರಣದ ಹಿನ್ನೆಲೆಯ ಕೃಷಿಕ ಮನೆತನದಿಂದ ಬಂದು ಸಂಸದೀಯ ವ್ಯವಸ್ಥೆಯಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದೂ ಅಲ್ಲದೆ ದೂರದೃಷ್ಟಿಯ ಸಮಾಜವಾದಿ ಹಿನ್ನೆಲೆಯಲ್ಲಿ ಬೆಳೆದ ವ್ಯಕ್ತಿ. ನಾಲ್ಕು ಸದನಗಳಲ್ಲೂ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿರುವುದು ರಾಜ್ಯದ ಕೆಲವೇ ರಾಜಕಾರಣಿಗಳಿಗೆ ಮಾತ್ರ. ಅಂಥವರಲ್ಲಿ ಕೃಷ್ಣ ಸಹ ಒಬ್ಬರು ಎಂಬುದು ಅವರ ಪಾಲಿನ ಹೆಗ್ಗಳಿಕೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ, ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ಸೋಮನಹಳ್ಳಿಯ ಕೃಷ್ಣ ಸಂಸತ್ತಿನ ಎರಡೂ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಾಗಿದ್ದವರು. ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಕೇಂದ್ರದಲ್ಲಿ ಸಚಿವ ಸ್ಥಾನ, ಮಹಾರಾಷ್ಟ್ರದಲ್ಲಿ ರಾಜ್ಯಪಾಲ, ರಾಜ್ಯದಲ್ಲಿ ಸ್ಪೀಕರ್, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ... ಹೀಗೆ ಹಲವು ಹುದ್ದೆಗಳನ್ನು ಅಲಂಕರಿಸಿದರು.

30ನೇ ವಯಸ್ಸಿಗೇ ಶಾಸಕರಾದ ಕೃಷ್ಣ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಅನೇಕ ಏಳುಬೀಳುಗಳನ್ನು ಹತ್ತಿರದಿಂದ ಕಂಡರು. ಮೈಸೂರಿನಲ್ಲಿ ಪದವಿ ಮುಗಿಸಿ, ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಅಮೆರಿಕದ ವಿಮಾನ ಹತ್ತಿದರು. ಟೆಕ್ಸಾಸ್​ನ ಸದರ್ನ್ ಮೆಥಾಡಿಸ್ಟ್ ವಿ.ವಿ ಹಾಗೂ ವಾಷಿಂಗ್ಟನ್ ಡಿಸಿಯ ಜಾರ್ಜ್ ವಾಷಿಂಗ್ಟನ್ ವಿ.ವಿ.ಗಳಲ್ಲಿ ಉನ್ನತ ವ್ಯಾಸಂಗ ಮಾಡಿದರು. ಸ್ವದೇಶಕ್ಕೆ ಮರಳುತ್ತಿದ್ದಂತೆ ರಾಜಕಾರಣದ ಸೆಳೆತಕ್ಕೆ ಸಿಕ್ಕಿ, ಸಾರ್ವಜನಿಕ ಬದುಕು ಪ್ರವೇಶಿಸಿದರು.

ರಾಜಕೀಯ ಪಥ: ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದಿಂದ ಅವರು 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಬಳಿಕ ಲೋಕಸಭೆಯಲ್ಲಿ ಮಂಡ್ಯ ವನ್ನು ಪ್ರತಿನಿಧಿಸಿದರು. ಆದರೆ, ಕಾರಣಾಂತರದಿಂದ 1972ರಲ್ಲಿ ರಾಜೀನಾಮೆ ನೀಡಿದರು. 1972ರಲ್ಲಿ ವಿಧಾನಪರಿಷತ್ ಸದಸ್ಯರಾದರು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವರಾದರು. 1983ರಲ್ಲಿ ಮತ್ತೆ ಸಂಸತ್ತಿಗೆ ಆಯ್ಕೆಯಾಗಿ ಹಣಕಾಸು ಖಾತೆ ರಾಜ್ಯ ಸಚಿವರಾದರು.

1989ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ವೀರೇಂದ್ರ ಪಾಟೀಲ್ ನೇತೃತ್ವದಲ್ಲಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದಾಗ ಕೃಷ್ಣ ವಿಧಾನಸಭಾಧ್ಯಕ್ಷರಾದರು ಮತ್ತು ನಿಷ್ಪಕ್ಷಪಾತ ಕಾರ್ಯನಿರ್ವಹಣೆ ಮೂಲಕ ಸದನಕ್ಕೆ ಘನತೆ ತಂದುಕೊಟ್ಟರು. ವಿಧಾನಸಭೆ ಮೊಗಸಾಲೆಯನ್ನು ಆಧುನೀಕರಣಗೊಳಿಸಿದರು. ಸಿಎಂ ಹುದ್ದೆಯಿಂದ 1992ರಲ್ಲಿ ಬಂಗಾರಪ್ಪ ಕೆಳಗಿಳಿದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಕೃಷ್ಣ ಹೆಸರು ಕೇಳಿಬಂತು. ಆದರೆ ವೀರಪ್ಪ ಮೊಯ್ಲಿ ಅವರಿಗೆ ಸಿಎಂ ಪಟ್ಟ ಸಿಕ್ಕಾಗ ಕೃಷ್ಣ ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ರಾಜ್ಯದ ಮೊದಲ ಉಪಮುಖ್ಯಮಂತ್ರಿ ಎಂಬ ಗೌರವಕ್ಕೂ ಪಾತ್ರರಾದರು. ಜತೆಗೆ, ಇಂಧನ ಖಾತೆ ಸಚಿವರಾಗಿ ಮಹತ್ವದ ಸುಧಾರಣಾ ಪ್ರಕ್ರಿಯೆಗೆ ಚಾಲನೆ ನೀಡಿದರು.1996ರಲ್ಲಿ ಮತ್ತೆ ರಾಜ್ಯಸಭೆ ಸದಸ್ಯರಾದರು. 1999ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪುನಃಶ್ಚೇತನ ನೀಡುವ ಸಲುವಾಗಿ ಕಾಂಗ್ರೆಸ್ ಹೈಕಮಾಂಡ್ ಕೃಷ್ಣ ಹೆಗಲಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹೊಣೆ ಹೊರಿಸಿತು. ನಯ, ವಿನಯಕ್ಕೆ ಹೆಸರಾದ ಕೃಷ್ಣ ಅವರ ಕೈಲಿ ಪಕ್ಷ ಸಂಘಟನೆ ಸಾಧ್ಯವೇ ಎಂಬ ಮಾತನ್ನು ಸುಳ್ಳು ಮಾಡುವ ರೀತಿಯಲ್ಲಿ ಪಕ್ಷದ ಎಲ್ಲ ಗುಂಪುಗಳನ್ನು ಒಗ್ಗೂಡಿಸಿ ‘ಪಾಂಚಜನ್ಯ’ ಮೊಳಗಿಸಿ ಪಕ್ಷ ಅಧಿಕಾರಕ್ಕೆ ತಂದು ಸಿಎಂ ಆದರು.

SM Krishna

ಬೆಂಗಳೂರು ಬ್ರ್ಯಾಂಡ್​ಗೆ ಎಸ್​ಎಂಕೆ ಬೀಜಾಂಕುರ: ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರಿಗೆ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಕನಸು ಇತ್ತು. ಬೆಂಗಳೂರು ಮೇಯರ್ ಮತ್ತು ಆಯುಕ್ತರ ಜತೆ ಪ್ರತಿನಿತ್ಯ ಚರ್ಚೆ ನಡೆಸುವ, ಸಲಹೆ ಸೂಚನೆ ನೀಡುವ ಪರಿಪಾಠವನ್ನು ಕೃಷ್ಣ ಬೆಳೆಸಿಕೊಂಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಅವರ ಅವಧಿಯಲ್ಲಿ ಮೇಯರ್ ಆಗಿದ್ದ ಎಂ. ರಾಮಚಂದ್ರಪ್ಪ. ಉದ್ದಿಮೆಗಳ ಮುಖ್ಯಸ್ಥರನ್ನು ಸೇರಿಸಿಕೊಂಡು ಬೆಂಗಳೂರು ಅಜೆಂಡಾ ಟಾಸ್ಕ್​ಪೋರ್ಸ್ ರಚನೆ ಮಾಡಿದರು. ಬಿಬಿಎಂಪಿಯ ತೆರಿಗೆ ಹೆಚ್ಚಳಕ್ಕೆ ಆಸ್ತಿ ತೆರಿಗೆ ಸ್ವಯಂ ಘೋಷಣೆ, ಬೆಂಗಳೂರು ಬಸ್ ನಿಲ್ದಾಣಗಳಿಗೆ ಹೊಸ ರೂಪ ನೀಡಿದರು. ಮರಗಳನ್ನು ಉಳಿಸಿಕೊಂಡು ಮೇಲ್ಸೇತುವೆಗಳ ನಿರ್ವಣಕ್ಕೆ ಆದ್ಯತೆ ನೀಡಿದರು.

ಎಸ್ಕಾಂಗಳ ಸ್ಥಾಪನೆ: ಕೃಷ್ಣ ವಿದ್ಯುತ್ ವಲಯದ ಸುಧಾರಣೆಗೆ ಆದ್ಯತೆ ನೀಡಿ ವಿತರಣೆ ಮತ್ತು ಸರಬರಾಜಿಗೆ ಐದು ಕಂಪನಿಗಳನ್ನು ಸ್ಥಾಪನೆ ಮಾಡಿ, ಪ್ರಸರಣ ನಷ್ಟ ತಗ್ಗಿಸಿದರು. ಬಳ್ಳಾರಿಯಲ್ಲಿ 500 ಮೆಗಾವಾಟ್ ಸಾಮರ್ಥ್ಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಸ್ಥಾವರಗಳ ಸ್ಥಾಪನೆಗೆ ಮುನ್ನುಡಿ ಬರೆದರು.

ಬೆಂಗಳೂರಿಗೆ ಐಟಿ ಬಲ: ಮುಖ್ಯಮಂತ್ರಿಯಾಗಿ ಐಟಿ ಮತ್ತು ಬಿಟಿ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಿದರ ಪರಿಣಾಮ ಬೆಂಗಳೂರಿನ ಐಟಿ ಕ್ಷೇತ್ರ ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿ ಆಯಿತು.

ಯಶಸ್ವಿನಿ ಹರಿಕಾರ: ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ರೂಪಿಸಿದರು. ಆ ಪೈಕಿ ಪ್ರಮುಖವಾದುದು ರೈತ ಸಹಕಾರಿಗಳ ಆರೋಗ್ಯ ವಿಮೆಯ ‘ಯಶಸ್ವಿನಿ’. ಶಿಕ್ಷಣ ವಂಚಿತ ಬಡಮಕ್ಕಳನ್ನು ಶಾಲೆಗಳತ್ತ ಕರೆತರಲು ‘ಅಕ್ಷರ ದಾಸೋಹ’ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿ ಗೊಳಿಸಿದರು. ದೇಶದಲ್ಲೇ ಮೊದಲ ಪ್ರಯೋಗವಾದ ಈ ಯೋಜನೆ ರಾಜ್ಯದಲ್ಲಿ ಮುಂದು ವರಿದುಕೊಂಡು ಬಂದಿದೆ.

ಭೂಮಿ ಯೋಜನೆ: ರಾಜ್ಯದಲ್ಲಿನ ಎಲ್ಲ ಭೂದಾಖಲೆ ಗಳನ್ನು ಡಿಜಿಟಲೀಕರಿಸಿದ್ದು ಕೃಷ್ಣ ಅವಧಿಯ ಮತ್ತೊಂದು ಮಹತ್ವದ ಕಾರ್ಯ. ಯಾವುದೇ ರೈತ ಆನ್​ಲೈನ್ ಮೂಲಕವೇ ತನ್ನ ಭೂಮಿಗೆ ಸಂಬಂಧಿಸಿದ ದಾಖಲೆಯನ್ನು ಪಡೆಯಬಹುದಾಗಿದೆ.

ಯಾರನ್ನೂ ನೋಯಿಸದ ನಾಜೂಕು: ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಯಾವತ್ತೂ ಯಾರ ಮೇಲೂ ಕೋಪ ಮಾಡಿಕೊಂಡ ರಾಜಕಾರಣಿಯಲ್ಲ. ಸಂಪುಟದ ಎಲ್ಲ ಸದಸ್ಯರ ಅಭಿಪ್ರಾಯ ತೆಗೆದುಕೊಂಡು ತೀರ್ಮಾನ ಮಾಡುತ್ತಿದ್ದರು. ಟಿ.ಜಾನ್ ಪ್ರಕರಣ ಇದಕ್ಕೊಂದು ನಿದರ್ಶನ. ಸಚಿವ ಟಿ.ಜಾನ್ ನೀಡಿದ್ದ ಹೇಳಿಕೆಯೊಂದು ವಿವಾದ ಸೃಷ್ಟಿಸಿತ್ತು. ಸಂಪುಟ ಸಹೋದ್ಯೋಗಿಗಳನ್ನು ಕರೆಸಿದ ಕೃಷ್ಣ, ಮಾಧ್ಯಮ ವರದಿಯ ಭಾಗವನ್ನು ತೋರಿಸಿ, ಅಭಿಪ್ರಾಯ ಕೇಳಿದರು. ಸಚಿವರ ರಾಜೀನಾಮೆಯೇ ಸೂಕ್ತ ಎಂದು ಹತ್ತಾರು ಸಚಿವರು ಅಭಿಪ್ರಾಯಪಟ್ಟರು. ಬಳಿಕ ಜಾನ್ ಅವರತ್ತ ಕೃಷ್ಣ ಬೀರಿದ ಕಣ್ಣೋಟವೇ ಪರಿಹಾರ ಒದಗಿಸಿತು. ಅವರು ರಾಜೀನಾಮೆ ಕೊಟ್ಟರು.

ಸೊಗಸುಗಾರ, ತಂತ್ರಗಾರ: ಸಮಯಕ್ಕೆ ತಕ್ಕ ಭಾಷೆ, ಭಾಷೆಗೆ ತಕ್ಕ ಮುಖಭಾವ, ಸಂದರ್ಭಕ್ಕೆ ತಕ್ಕ ಉಡುಪು, ಉಡುಗೆಗೆ ತಕ್ಕ ವರ್ತನೆ ಎಂಬುದು ಕೃಷ್ಣ ಅವರಿಗೆ ಸರಿಯಾಗಿ ಒಪ್ಪುತ್ತದೆ. ಸಂದರ್ಭ ಮತ್ತು ಸಮಾರಂಭಕ್ಕೆ ತಕ್ಕಂತೆ ಉಡುಪು ಧರಿಸುವ ಸೊಗಸುಗಾರ ಅವರು. ವಿದೇಶದಲ್ಲಿ ವ್ಯಾಸಂಗ ಮಾಡಿದರೂ ಅವರ ಕನ್ನಡ ಬಳಕೆ ಸರಳ, ಸುಂದರ ಮತ್ತು ಪಕ್ಕಾ. ಪ್ರತಿಪಕ್ಷಗಳನ್ನು ಮಣಿಸುವ ಮತ್ತು ದುರ್ಬಲಗೊಳಿ ಸುವ ಜಾಣತನವೂ ಅವರಿಗೆ ಸಿದ್ಧಿಸಿತ್ತು. ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಜೆಡಿಎಸ್​ನ 10 ಶಾಸಕರಲ್ಲಿ ಆರು ಜನರನ್ನು ಕಾಂಗ್ರೆಸ್​ನತ್ತ ಅವರು ಸೆಳೆದಿದ್ದರು. ಬಿಜೆಪಿಯ 10 ಶಾಸಕರ ಬಂಡಾಯಕ್ಕೆ ಪರೋಕ್ಷ ಕಾರಣರಾಗಿದ್ದರು ಎಂಬ ಅಭಿಪ್ರಾಯವಿದೆ.

ಸಾಮರ್ಥ್ಯಕ್ಕೆ ಮಣೆ: ಒಂದು ಕಡೆ ಬುದ್ಧಿಜೀವಿ ರಾಜಕಾರಣಿಗಳೆನಿಸಿದ ಬಿ.ಕೆ.ಚಂದ್ರಶೇಖರ್, ಬಿ.ಎಲ್.ಶಂಕರ್ ಅವರಂತಹವರನ್ನು ಜತೆಗಿಟ್ಟು ಕೊಂಡಿದ್ದರೆ ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್, ಆರ್.ವಿ. ದೇವರಾಜ್​ರಂತಹವರ ಸಾಂಗತ್ಯವನ್ನೂ ಸಾಧಿಸಿಕೊಂಡು ಹೋದವರು ಕೃಷ್ಣ. ಜಾತಿ ರಾಜಕೀಯಕ್ಕಿಂತ ಹೆಚ್ಚಾಗಿ ಅವರು ಸಾಮರ್ಥ್ಯಕ್ಕೆ ಮಣೆ ಹಾಕುತ್ತಿದ್ದರು.

ಸಿಂಗಾಪುರ ಕನಸು: ಮುಖ್ಯಮಂತ್ರಿ ಆದ ಹೊಸದರಲ್ಲಿ ಬೆಂಗಳೂರನ್ನು ಸಿಂಗಾಪುರ ಮಾದರಿಯಲ್ಲಿ ಬೆಳೆಸುವ ಕನಸನ್ನು ಕೃಷ್ಣ ಕಂಡಿದ್ದರು. ಆ ದಿಸೆಯಲ್ಲಿ ಪ್ರಯತ್ನವನ್ನೂ ನಡೆಸಿದ್ದರು.

SM Krishna

ಸಾಲುಸಾಲು ಸಂಕಷ್ಟ: ಮುಖ್ಯಮಂತ್ರಿಯಾಗಿ ಹಲವು ಉತ್ತಮ ಯೋಜನೆಗಳನ್ನು ಜಾರಿ ಮಾಡುವುದರ ಜತೆಗೆ, ಬೆಂಗಳೂರಿನ ಅಭಿವೃದ್ಧಿಗೂ ಶ್ರಮಿಸಿದರು. ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದರು. ಅದಕ್ಕೆ ಅವರ ಸಂಪುಟದಲ್ಲಿದ್ದ ಅನೇಕ ಸಚಿವರು ಬೆಂಬಲ ನೀಡಿದರೂ, ಪ್ರಕೃತಿ ಕೃಷ್ಣ ವಿರುದ್ಧ ಮುನಿದಿತ್ತು. ಪದೇಪದೆ ಸಂಕಷ್ಟಗಳು ಎದುರಾದವು. ಕೃಷ್ಣ ಎಲ್ಲವನ್ನೂ ನಾಜೂಕಾಗಿ ನಿಭಾಯಿಸಿದರು. ವರನಟ ಡಾ.ರಾಜಕುಮಾರ್ ಮತ್ತು ಮಾಜಿ ಸಚಿವ ಹನೂರಿನ ಎಚ್. ನಾಗಪ್ಪ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ. ಸತತ 108 ದಿನಗಳ ಪ್ರಯತ್ನದ ಬಳಿಕ ರಾಜ್ ಅವರನ್ನು ಬಿಡುಗಡೆ ಮಾಡಿಸಲಾಯಿತು. ಆದರೆ, ನಾಗಪ್ಪ ಅವರನ್ನು ಜೀವಂತವಾಗಿ ಕರೆತರಲು ಸಾಧ್ಯವಾಗಲಿಲ್ಲ. ಇದಾದ ಬೆನ್ನಲ್ಲೇ ಬರ ಅಗ್ನಿಪರೀಕ್ಷೆಯಾಗಿ ಕಾಡಿತು. ಸತತ ಮೂರು ವರ್ಷ ಮಳೆರಾಯನ ಕಣ್ಣಾಮುಚ್ಚಾಲೆ ಆಟ ಪ್ರತಿಕೂಲ ಪರಿಣಾಮ ಬೀರಿ ರಾಜ್ಯದ ಜನತೆ ತತ್ತರಿಸುವಂತಾಯಿತು. ರಾಜ್ಯಕ್ಕೇ ನೀರಿಲ್ಲದಾಗ ಕಾವೇರಿ ನದೀಪಾತ್ರದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುವಂತೆ ನ್ಯಾಯಾಧಿಕರಣ ಆದೇಶ ನೀಡಿದ್ದು, ಕೃಷ್ಣ ಅವರ ಪಾಲಿನ ಸಂಕಷ್ಟದ ದಿನಗಳು. ನಿಗದಿತ ಅವಧಿಗಿಂತ ಕೆಲವು ತಿಂಗಳು ಮೊದಲೇ ಚುನಾವಣೆ ನಡೆಯಿತು. ಕೃಷ್ಣ 2004ರಲ್ಲಿ ರಾಜ್ಯ ವಿಧಾನಸಭೆಗೆ ಮತ್ತೆ ಆಯ್ಕೆಯಾದರೂ ಪಕ್ಷ ಸೋತಿತು. ಆದರೆ, ಅವರನ್ನು ಪಕ್ಷ ಕೈಬಿಡಲಿಲ್ಲ. 2004ರಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕ ಮಾಡಿತು. ಸಕ್ರಿಯ ರಾಜಕಾರಣದ ಸೆಳೆತದಿಂದ ಆ ಹುದ್ದೆಗೆ 2008ರಲ್ಲಿ ರಾಜೀನಾಮೆ ನೀಡಿದರು. ತಕ್ಷಣವೇ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ವಿದೇಶಾಂಗ ವ್ಯವಹಾರಗಳ ಖಾತೆ ನೀಡಲಾಯಿತು.

ಕೆನಡಿ ಪರ ಅಮೆರಿಕದಲ್ಲಿ ಮತಯಾಚನೆ: ಕೃಷ್ಣ ಅವರು ಅಮೆರಿಕದ ಮೆಥಾಡಿಸ್ಟ್ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅವಧಿ ಅಂದರೆ 1960ರ ಸೆಪ್ಟಂಬರ್​ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾನ್ ಎಫ್. ಕೆನಡಿ ಪರ ಪ್ರಚಾರ ಮಾಡಿದ್ದರು. ಅದು ಅನಿವಾಸಿ ಭಾರತೀಯರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಅಂತೆಯೇ ಕೆನಡಿ ಭರ್ಜರಿ ಜಯವನ್ನು ಕಂಡರು. ಬಳಿಕ ಕೆನಡಿ ಅವರು ಕೃಷ್ಣ ಅವರಿಗೆ ಅಭಿನಂದನಾ ಪತ್ರವನ್ನು ಬರೆದು, ‘ಭವಿಷ್ಯ ಉಜ್ವಲವಾಗಲಿ’ ಎಂದು ಹಾರೈಸಿದರು.

ವಿದೇಶಾಂಗ ಸಚಿವ: ಸಕ್ರಿಯ ರಾಜಕಾರಣದ ಸೆಳೆತದಿಂದ ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದ ಕೃಷ್ಣ ಅವರನ್ನು ಕಾಂಗ್ರೆಸ್ ನೇರವಾಗಿ ರಾಜ್ಯಸಭೆ ಮೆಟ್ಟಿಲೇರಿಸಿತು. ಅದರ ಬೆನ್ನಲ್ಲೇ, ವಿದೇಶಾಂಗ ಸಚಿವರಾದರು. ಮನಮೋಹನ್​ಸಿಂಗ್ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲು ವಿದೇಶಾಂಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು.

ಗೌರವ ಡಾಕ್ಟರೇಟ್ ಪದವಿ: ಕೃಷ್ಣ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ. ಎಸ್​ಎಂಕೆ ಅವರ ಆಧ್ಯಾತ್ಮಿಕ ಸಾಧನೆ ಗುರುತಿಸಿ ಉಡುಪಿಯ ಪೇಜಾವರ ಮಠ ‘ಕರ್ನಾಟಕ ಧಾರ್ವಿುಕ ರತ್ನ’ ಪ್ರಶಸ್ತಿ ನೀಡಿ, ಗೌರವಿಸಿದೆ. 2023ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದರು.

ಮಲೆನಾಡ ಅಳಿಯ: ಎಸ್.ಎಂ.ಕೃಷ್ಣ ಮಲೆನಾಡಿನ ಅಳಿಯ. ಅವರ ಪತ್ನಿ ಪ್ರೇಮಾ ತವರುಮನೆ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ. ಕೃಷ್ಣ ಅವರಿಗೆ ಪ್ರೇಮಾ ಕುಟುಂಬವನ್ನು ಪರಿಚಯಿಸಿದ್ದು ಮಾಜಿ ಸಿಎಂ ಕಡಿದಾಳ್ ಮಂಜಪ್ಪ. ಕೃಷ್ಣ ಅವರು ಕಡಿದಾಳ್ ಮಂಜಪ್ಪ ಅವರ ಸಂಬಂಧಿಯೂ ಹೌದು. ಅಡಕೆ ಬೆಳೆಗಾರರಾಗಿದ್ದ ಚಿನ್ನಪ್ಪ ಗೌಡ-ಕಮಲಾಕ್ಷಮ್ಮ ದಂಪತಿ ಪುತ್ರಿ ಪ್ರೇಮಾ ಹಾಗೂ ಕೃಷ್ಣ ಅವರ ವಿವಾಹ 1966ರಲ್ಲಿ ನೆರವೇರಿತ್ತು.

ಸಂಯಮದ ಲಕ್ಷ್ಮಣರೇಖೆ: ಕೃಷ್ಣರ ಮಾತು, ನಡೆ, ಉಡುಪು, ನಿಲುವು ಎಲ್ಲವೂ ಪೂರ್ವನಿರ್ಧಾರಿತವಾದುದು. ಎಲ್ಲೂ ಅಂಕೆ ತಪ್ಪುವ ಪ್ರಮೇಯವೇ ಇಲ್ಲ. ಅಷ್ಟು ಖಚಿತ. ರಾಜಕೀಯವಾಗಿ ಟೀಕೆ-ಟಿಪ್ಪಣಿಗಳನ್ನು ಮಾಡುವಾಗ ಮತ್ತು ಆಕ್ರೋಶವನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಕೂಡ ಅದಕ್ಕೊಂದು ಸಂಯಮ, ಲಕ್ಷ ್ಮ ರೇಖೆ ಹಾಕಿಕೊಳ್ಳುತ್ತಿದ್ದರು. ಆದರೆ, ಎದುರಾಳಿಗಳತ್ತ ಅಳೆದು ತೂಗಿ ಎಸೆಯುತ್ತಿದ್ದ ಟೀಕಾ ಕೂರಂಬುಗಳು ಹರಿತವಾಗಿಯೇ ಇರುತ್ತಿದ್ದವು. ರಾಜಕೀಯ ತಂತ್ರಗಾರಿಕೆಯಲ್ಲಿ ಹೆಗಡೆ ಅವರಿಗೆ ಸರಿಸಮಾನರು.

ರಾಜ್ಯದಲ್ಲಿ 190 ಕಾಯ್ದೆ ಜಾರಿ: ಕೃಷ್ಣ ಅವರು 1999ರಿಂದ 2004ರವರೆಗೆ ಒಟ್ಟು 190 ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸಂಸದೀಯ ವ್ಯವಸ್ಥೆಗೆ ಹೊಸ ರೂಪ ಕೊಟ್ಟರು. 1999ರಲ್ಲಿ ಕರ್ನಾಟಕ ವಿದ್ಯುತ್ ಕಾಯ್ದೆ, 2000ರಲ್ಲಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ, 2003ರಲ್ಲಿ ಎಂಜಲು ಪದ್ಧತಿ ನಿಷೇಧ ಶಾಸನ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ, 2003ರಲ್ಲಿ ಅಂತರ್ಜಲ ಕುಡಿಯುವ ನೀರು ಸಂಕರಕ್ಷಣಾ ಕಾಯ್ದೆ, ಕರ್ನಾಟಕ ಕೈಗಾರಿಕೆ ಅಧಿನಿಯಮ ಸೇರಿದಂತೆ ಶಿಕ್ಷಣ, ವಾಣಿಜ್ಯ, ಅರಣ್ಯ, ನಗರಾಭಿವೃದ್ಧಿ ಹಾಗೂ ಹಲವು ಇಲಾಖೆಯಲ್ಲಿ ಹೊಸ ಕಾಯ್ದೆಗಳನ್ನು ಅವರ ಅವಧಿಯಲ್ಲಿ ಜಾರಿಗೆ ತರಲಾಯಿತು.

ಟೆನ್ನಿಸ್​ಪ್ರಿಯ: ಕೃಷ್ಣ ಅವರಿಗೆ ಸಂಗೀತ, ಕ್ರೀಡೆ ಅಚ್ಚುಮೆಚ್ಚು. ರಾಜಕೀಯ ಒತ್ತಡದ ಮಧ್ಯೆಯೂ ಸಿನಿಮಾ, ನಾಟಕ, ನೃತ್ಯ ಕಾರ್ಯಕ್ರಮಗಳಿಗೆ ಬಿಡುವು ಮಾಡಿಕೊಳ್ಳುತ್ತಿದ್ದರು. 80ರ ಇಳಿವಯಸ್ಸಿನಲ್ಲೂ ಟೆನ್ನಿಸ್ ಆಟಕ್ಕೆ ನಿಂತರೆ ಯುವಕರನ್ನೂ ಹಿಂದಿಕ್ಕುವ ಉತ್ಸಾಹವಿತ್ತು.

ತಂತ್ರಜ್ಞಾನ ಸ್ನೇಹಿ: ಮಾಹಿತಿ-ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡ ರಾಜಕಾರಣಿ ಕೃಷ್ಣ. ಅಂತೆಯೇ ಆಡಳಿತ ವ್ಯವಸ್ಥೆಯಲ್ಲಿಯೂ ಅದನ್ನು ಅನುಷ್ಠಾನಗೊಳಿಸಿದರು. ಸಿಎಂ ಕಚೇರಿಗೆ ಇ-ಮೇಲ್​ನಲ್ಲಿ ಬರುತ್ತಿದ್ದ ಮನವಿಗಳಿಗೆ ಸ್ವತಃ ಎಸ್​ಎಂಕೆ ಉತ್ತರಿಸುತ್ತಿದ್ದರು. ವಿವಿಧ ಕಾರ್ಯಪಡೆಗಳ ಮುಖ್ಯಸ್ಥರೊಂದಿಗೆ, ಕೇಂದ್ರದ ರಾಜಕಾರಣಿಗಳೊಂದಿಗೆ ಇ-ಮೇಲ್ ಮೂಲಕವೇ ಮಾಹಿತಿ ಪಡೆದು ಉತ್ತರ ನೀಡುತ್ತಿದ್ದರು.

90 ವರ್ಷದ ಅರಿವಿದೆ: ಕೃಷ್ಣ ಅವರು ತಮ್ಮ ರಾಜಕೀಯ ಜೀವನದ ಕೊನೆಯ ಕಾಲದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಒಮ್ಮೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪತ್ರಕರ್ತರು ಬಿಜೆಪಿ ನಿಮ್ಮನ್ನು ಕಡೆಗಣಿಸಿದೆಯೇ ಎಂದು ಕೇಳಿದಾಗ, ‘ನನಗೆ ಈಗ 90 ವರ್ಷ, ಅದರ ಅರಿವು ನನಗಿದೆ. 90 ವರ್ಷದ ನಾನು 50 ವರ್ಷದವರಂತೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯಲು ನಾನೇ ನಿರ್ಧರಿಸಿದ್ದೇನೆ. ಆದ್ದರಿಂದ ನನ್ನನ್ನು ನಿರ್ಲಕ್ಷಿಸಲಾಗಿದೆ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ’ ಎಂದಿದ್ದರು.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1999-2004) ಹಲವು ಜನಪರ ಮತ್ತು ವಿನೂತನ ಯೋಜನೆಗಳನ್ನು ಜಾರಿಗೆ ತಂದರು. ಇವು ಅಭಿವೃದ್ಧಿಯ ಹಾದಿಯಲ್ಲಿ ಮೈಲಿಗಲ್ಲನ್ನು ಸೃಷ್ಟಿಸಿದವು.

ಭೂಮಿ ಯೋಜನೆ: ರಾಜ್ಯದಲ್ಲಿನ ಎಲ್ಲ ಭೂದಾಖಲೆಗಳನ್ನು ಡಿಜಿಟಲೀಕರಿಸಿದ್ದು ಕೃಷ್ಣ ಅವಧಿಯ ಮತ್ತೊಂದು ಮಹತ್ವದ ಕಾರ್ಯ. ಯಾವುದೇ ರೈತ ಆನ್​ಲೈನ್ ಮೂಲಕವೇ ತನ್ನ ಭೂಮಿಗೆ ಸಂಬಂಧಿಸಿದ ದಾಖಲೆಯನ್ನು ಪಡೆಯಬಹುದಾಗಿದೆ.

ಲಾಟರಿಗೆ ಕಡಿವಾಣ: ಆನ್​ಲೈನ್ ಲಾಟರಿ ಮತ್ತು ಒಂದಂಕಿ ಲಾಟರಿ ಆ ಅವಧಿಯಲ್ಲಿ ಬಹುದೊಡ್ಡ ಪಿಡುಗಾಗಿ ಬೆಳೆದಿತ್ತು. ಈ ಪಿಡುಗಿನ ವಿರುದ್ಧ ದೊಡ್ಡ ಹೋರಾಟವೇ ನಡೆದಿತ್ತು. ಕೃಷ್ಣ ಸರ್ಕಾರ ಇವನ್ನು ನಿಷೇಧಿಸಿತು.

ಜನತಾ ದರ್ಶನ: ರಾಮಕೃಷ್ಣ ಹೆಗಡೆಯವರ ಕಾಲದಲ್ಲಿದ್ದ ಜನತಾದರ್ಶನ ಮೂಲೆಗೆ ಸರಿದಿತ್ತು. ಕೃಷ್ಣ ಕಾಲದಲ್ಲಿ ಇದಕ್ಕೆ ಮತ್ತೆ ಚಾಲನೆ ದೊರಕಿತು.

ಸ್ತ್ರೀಶಕ್ತಿ ಸಂಘಗಳ ಸ್ಥಾಪನೆ: ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಸ್ತ್ರೀಶಕ್ತಿ ಸಂಘಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಯಿತು. ಈ ಯೋಜನೆ ಕೃಷ್ಣ ಆಡಳಿತಾವಧಿಯಲ್ಲೇ ರಾಜ್ಯದಲ್ಲಿ ಜಾರಿಗೊಂಡಿತು.

ವ್ಯಾಟ್ ಜಾರಿಗೆ ವೇದಿಕೆ: ದೇಶಾದ್ಯಂತ ಏಕರೂಪ ತೆರಿಗೆಗೆ ಕೇಂದ್ರ ಸರ್ಕಾರ ರೂಪಿಸಿದ ಮೌಲ್ಯವರ್ಧಿತ ತೆರಿಗೆ ಪದ್ದತಿಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಸಿದ್ಧತೆ ಪೂರ್ಣಗೊಳಿಸಿದವರು ಕೃಷ್ಣ. ರಾಜ್ಯದ ಹಣಕಾಸು ಸ್ಥಿತಿಯನ್ನು ಸರಿದಾರಿಗೆ ತರುವ ಸಲುವಾಗಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಸಹ ಜಾರಿಗೆ ತಂದರು.

ಕನ್ನಡ ಲಿಪಿ ತಂತ್ರಾಂಶ: ಕಂಪ್ಯೂಟರ್ ಜ್ಞಾನವನ್ನು ಹೆಚ್ಚು ಜನರು ಬಳಕೆ ಮಾಡುವಂತಾಗಬೇಕಾದರೆ ಪ್ರಾದೇಶಿಕ ಭಾಷೆಯ ಅವಶ್ಯಕತೆ ಇದೆ ಎಂದು ಭಾವಿಸಿ ‘ಕನ್ನಡ ಲಿಪಿ ತಂತ್ರಾಂಶ’ ಸಿದ್ಧಪಡಿಸುವ ಪ್ರಯತ್ನಕ್ಕೆ ಕೃಷ್ಣ ಮುನ್ನುಡಿ ಬರೆದರು. 2001ರ ಜನವರಿಯಲ್ಲಿ ಕಲಿಕಾ ಹೆಸರಿನ ‘ಕನ್ನಡ ಲಿಪಿ ತಂತ್ರಾಂಶ’ ಸಿದ್ಧವಾಯಿತು. ಬಳಿಕ ಹಲವಾರು ಸುಧಾರಣೆಗೊಳಪಟ್ಟು ಅಕ್ಟೋಬರ್​ನಲ್ಲಿ ‘ನುಡಿ’ ಎಂದು ಹೆಸರಿಸಿ ಕಾರ್ಯಗತಗೊಳಿಸಲಾಯಿತು. ಜತೆಗೆ ಕಂಪ್ಯೂಟರ್​ಗಳಲ್ಲಿ ಯಶಸ್ವಿಯಾಗಿ ಬಳಕೆಯೂ ಆಯಿತು. ಮಾತ್ರವಲ್ಲದೆ ಕಂಪ್ಯೂಟರ್ ಕ್ಷೇತ್ರದಲ್ಲಿ ಭಾರತೀಯ ಭಾಷೆಗೆ ಕನ್ನಡ ಮಾದರಿಯಾಯಿತು.

ಪಾದಯಾತ್ರೆ: ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿ, ಕಾವೇರಿ ನದಿಪಾತ್ರದ ಜಲಾಶಯಗಳಲ್ಲಿ ನೀರು ತಳಮಟ್ಟ ತಲುಪಿದ್ದರೂ, ತಮಿಳುನಾಡಿನ ರಾಜಕೀಯ ಒತ್ತಡಕ್ಕೆ ಮಣಿದು ನೀರು ಬಿಡುವಂತೆ ಕೇಂದ್ರ ಸರ್ಕಾರ ಸೂಚಿಸಿತು. ಕೃಷ್ಣ ಅವರು ಕೇಂದ್ರದ ಅಪ್ಪಣೆ, ರಾಜ್ಯದ ಅಸಹಾಯಕತೆ ಮಧ್ಯೆ ಪಾದಯಾತ್ರೆ ಕೈಗೊಂಡರು. ಮತ್ತೊಂದೆಡೆ, ಕಾನೂನು ಹೋರಾಟದಲ್ಲೂ ತಮಿಳುನಾಡು ಮೇಲುಗೈ ಸಾಧಿಸಿ ಸುಪ್ರೀಂಕೋರ್ಟ್ ನಿರ್ದೇಶನ ಬಂತು.

ಬದುಕಿನ ಪಥ

  • ಎಸ್.ಎಂ.ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ)
  • ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಸೋಮನಹಳ್ಳಿ ಗ್ರಾಮದಲ್ಲಿ ಮಲ್ಲಯ್ಯ, ತಾಯಮ್ಮ ದಂಪತಿಯ 8ನೇ ಮಗುವಾಗಿ 1932 ಮೇ 1ರಂದು ಜನನ.
  • ಸೋಮನಹಳ್ಳಿ, ಮದ್ದೂರು, ತಿಪಟೂರು, ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ.
  • ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರೌಢಶಿಕ್ಷಣ.
  • ಯುವರಾಜ ಕಾಲೇಜಿನಲ್ಲಿ ಪಿಯು ಶಿಕ್ಷಣ
  • ಮಹಾರಾಜ ಕಾಲೇಜಿನಲ್ಲಿ ಕಾನೂನು ಪದವಿ ಶಿಕ್ಷಣ
  • ಅಮೆರಿಕದ ಡಲ್ಲಾಸ್​ನ ಸೌಥರ್ನ್ ಮೆಥಾಡಿಸ್ಟ್ ಹಾಗೂ ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಉನ್ನತ ವ್ಯಾಸಂಗ.
  • 1966ರ ಏಪ್ರಿಲ್ 29ರಂದು ಶಿವಮೊಗ್ಗ ಜಿಲ್ಲೆಯ ಕುಡುಮಲ್ಲಿಗೆಯ ಚನ್ನಪ್ಪ ಗೌಡ, ಕಮಲಾಕ್ಷಮ್ಮ ದಂಪತಿಯ ಪುತ್ರಿ ಪ್ರೇಮಾ ಅವರೊಂದಿಗೆ ವಿವಾಹ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net