

ಶಿವಮೊಗ್ಗ: ವೆಂಕಟೇಶನಗರದ ಬಸವಕೇಂದ್ರದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಬೆಳಗ್ಗೆ ವಿಶ್ವಗುರು ಬಸವಣ್ಣ ಹಾಗೂ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ಬಸವಕೇಂದ್ರದಿಂದ ಹೊರಟು ವೆಂಕಟೇಶನಗರದ 5ನೇ ಅಡ್ಡರಸ್ತೆ, ಅನಕೃ ರಸ್ತೆ, ಎರಡನೇ ಅಡ್ಡರಸ್ತೆ ಮೂಲಕ ಪುನಃ ಬಸವಕೇಂದ್ರ ತಲುಪಿತು.
ನಂತರ ಪಾಲ್ಕುರಿಕೆ ಸೋಮನಾಥ ಕವಿ ವಿರಚಿತ 108 ಬಸವಲಿಂಗ ನಾಮಾವಳಿಗಳಿಂದ ವಿಶ್ವಗುರು ಬಸವಣ್ಣಅವರಿಗೆ ಪೂಜೆ ಸಲ್ಲಿಸಲಾಯಿತು. ಪೂಜೆ ನಂತರ ಅಂಬಲಿ ದಾಸೋಹ, ಶಿವನಾಮ ನೆರೆಯುವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಪೌರ ಕಾರ್ಮಿಕರನ್ನು ಸತ್ಕರಿಸಲಾಯಿತು.
ಶಿಕಾರಿಪುರದ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವಕೇಂದ್ರ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ನಗರದ ಗೋಪಾಳ ಸೇರಿದಂತೆ 19 ಕಡೆ ಸಾರ್ವಜನಿಕರಿಗೆ ಅಂಬಲಿ ಮತ್ತು ಕಾಳು ದಾಸೋಹ ನಡೆಯಿತು.
ಮಡಿವಾಳ ಸಂಘದಿಂದ ಆಚರಣೆ
ಜಿಲ್ಲಾ ಮಡಿವಾಳ ಸಂಘದಿಂದ ಶ್ರೀ ಬಸವೇಶ್ವರ ಜಯಂತಿಯನ್ನು ಡಿವಿಎಸ್ ವೃತ್ತದ ಬಸವೇಶ್ವರ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸುವ ಮೂಲಕ ಆಚರಿಸಲಾಯಿತು. ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಎಂ.ಮಂಜಪ್ಪ, ಮಹಾಕಾರ್ಯಾಧ್ಯಕ್ಷ ಬಾಲಾಜಿ ರಾಜ್, ಕಾರ್ಯಾಧ್ಯಕ್ಷ ಎಂ.ರಾಜಶೇಖರ, ಮಹಾ ಪ್ರಧಾನಕಾರ್ಯದರ್ಶಿ ಎಂ.ಕೆ.ಪ್ರಮೋದ್, ಕೋಶಾಧ್ಯಕ್ಷ ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಮೈಲಾರಪ್ಪ, ರಾಕೇಶ್, ಸಮಾಜದ ಮುಖಂಡರಾದ ಹುಚ್ಚಪ್ಪ, ಕೆ.ಜಿ.ಗಂಗಾಧರ, ಜಯಪ್ಪ, ರಾಜು, ಪ್ರಹ್ಲಾದ್, ಸುಮಿತ್, ಆನಂದ್ ಉಪಸ್ಥಿತರಿದ್ದರು.