ಕೋಟ್ಯಾಧಿಪತಿ ಕಾನ್‌ಸ್ಟೆಬಲ್: 500 ಕೋಟಿ ರೂ. ಒಡೆಯ ನಾಪತ್ತೆ..Crorepati Constable ಡೈರಿ ಬಗ್ಗೆ ಶುರುವಾಯ್ತು ರಾಜಕೀಯ ಗಲಾಟೆ

Crorepati Constable
Published on

ಮಧ್ಯಪ್ರದೇಶ: (Crorepati Constable ) ಮಧ್ಯಪ್ರದೇಶದ ಸಾರಿಗೆ ಇಲಾಖೆಯಲ್ಲಿ ಮಾಜಿ ಕಾನ್‌ಸ್ಟೆಬಲ್ ನಿವಾಸದ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಏಕೆಂದರೆ ಅವರ ಬಳಿ 500 ಕೋಟಿ ರೂ.ಗೂ ಹೆಚ್ಚು ಆಸ್ತಿ ಇರುವುದು ಗೊತ್ತಾಗಿದೆ.

ಗ್ವಾಲಿಯರ್‌ನ ಸೌರಭ್ ಶರ್ಮಾ ಎಂಬ ವ್ಯಕ್ತಿಯನ್ನು 2015 ರಲ್ಲಿ ಅನುಕಂಪದ ಆಧಾರದ ಮೇಲೆ ಸಾರಿಗೆ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿ ನೇಮಿಸಲಾಯಿತು. ಸೌರಭ್ ಶರ್ಮಾ ಅವರ ತಂದೆ 2015 ರಲ್ಲಿ ನಿಧನರಾದರು. ನಂತರ ಅವರು ಆರ್‌ಟಿಒ ಕಾನ್‌ಸ್ಟೆಬಲ್ ಆಗಿ ಕೆಲಸಕ್ಕೆ ಸೇರಿದರು.

ಲೋಕಾಯುಕ್ತ ಪೊಲೀಸರು, ಆದಾಯ ತೆರಿಗೆ ಇಲಾಖೆ ಹಾಗೂ ಇಡಿ ಇಲಾಖೆಗಳು ಜಂಟಿಯಾಗಿ ಸೌರಭ್ ನಿವಾಸದ ಮೇಲೆ ದಾಳಿ ನಡೆಸಿವೆ. 19 ಡಿಸೆಂಬರ್ 2024 ರಂದು, ಲೋಕಾಯುಕ್ತ ಪೊಲೀಸರು ಭೋಪಾಲ್‌ನಲ್ಲಿ ಸೌರಭ್ ಶರ್ಮಾ ಅವರ ಮನೆಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆಸಿ 2.1 ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನ, ಬೆಳ್ಳಿ ಮತ್ತು ಇತರ ಆಭರಣಗಳನ್ನು ವಶಪಡಿಸಿಕೊಂಡರು.  ಅದೇ ದಿನ ಅರಣ್ಯದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ-ಆರ್‌ಟಿಒ ಹೆಸರಿನಲ್ಲಿ ಇನ್ನೋವಾ ಕಾರು ಪತ್ತೆಯಾಗಿದೆ. 11 ಕೋಟಿ ನಗದು ಹಾಗೂ 52 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಈ ದಾಳಿಗಳ ನಂತರ ಸೌರಭ್ ಶರ್ಮಾ ನಾಪತ್ತೆಯಾಗಿದ್ದಾನೆ. ಸೌರಭ್ ಶರ್ಮಾ ಅವರ ಮನೆಯಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು 500 ರಿಂದ 700 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಕದ್ದಿರುವುದು ಪತ್ತೆಯಾಗಿದೆ. ಈ ಹುಡುಕಾಟದ ಸಮಯದಲ್ಲಿ, ಸೌರಭ್ ಶರ್ಮಾಗೆ ಸಂಬಂಧಿಸಿದ  ಡೈರಿಯೊಂದು ಇದೀಗ ಮಧ್ಯಪ್ರದೇಶ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷಗಳು ಭ್ರಷ್ಟಾಚಾರದ ಬಗ್ಗೆ ಪರಸ್ಪರ ಟೀಕೆ ಮಾಡುತ್ತಿವೆ.

ಸೌರಭ್ ಶರ್ಮಾ (ಕೋಟ್ಯಾಧಿಪತಿ ಕಾನ್‌ಸ್ಟೆಬಲ್) ಅವರ ಡೈರಿಯಲ್ಲಿ ಒಟ್ಟು 66 ಪುಟಗಳಿವೆ. ಅದರ 6 ಪುಟಗಳ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಮಧ್ಯಪ್ರದೇಶದ ವಿವಿಧ ಚೆಕ್ ಪೋಸ್ಟ್‌ಗಳಲ್ಲಿ ಸುಮಾರು 1,300 ಕೋಟಿ ರೂಪಾಯಿಗಳ ಅಕ್ರಮ ಸಂಗ್ರಹದ ಪಟ್ಟಿ ಇದೆ ಎಂದು ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಆರೋಪಿಸಿದ್ದಾರೆ. ಇದೆಲ್ಲಾ ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ’ ಎಂದು ಟೀಕಿಸಿದರು.

ತಮಗೆ ನೀಡಿರುವ ಮಾಹಿತಿಯಿಂದ ಸೌರಭ್‌ಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ. ಸೌರಭ್‌ಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ‘‘ಸೌರಭ್ ಅವರಿಗೆ ಸೇರಿದ ಡೈರಿಯಲ್ಲಿ ‘ಟಿಸಿ’, ‘ಟಿಎಂ’ ಎಂಬ ಪದಗಳಿವೆ. 'ಟಿಸಿ' ಎಂದರೆ ಸಾರಿಗೆ ಆಯುಕ್ತ ಮತ್ತು 'ಟಿಎಂ' ಎಂದರೆ ಸಾರಿಗೆ ಮಂತ್ರಿಯೇ ಎಂದು ಜಿತು ಪಟ್ವಾರಿ ಕೇಳಿದರು.

ಮಧ್ಯಪ್ರದೇಶ ಬಿಜೆಪಿ ಮಾಧ್ಯಮ ಉಸ್ತುವಾರಿ ಆಶಿಶ್ ಅಗರ್ವಾಲ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕಮಲ್ ನಾಥ್ ನೇತೃತ್ವದಲ್ಲಿ 15 ತಿಂಗಳ ಕಾಲ ಮಧ್ಯಪ್ರದೇಶದಲ್ಲಿ ಆಡಳಿತ ನಡೆಸಿದ ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಮತ್ತೊಮ್ಮೆ ನೆನಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸೌರಭ್ ಶರ್ಮಾ ಪ್ರಕರಣದೊಂದಿಗೆ ಕಾಂಗ್ರೆಸ್ ನ ನಂಟು ಬಯಲಾಗುತ್ತದೆ ಎಂಬ ಭಯ ಜಿತು ಪಟ್ವಾರಿ ಅವರಿಗೆ ತೋರುತ್ತಿದೆ ಎಂದು ಆಶಿಶ್ ಅಗರ್ವಾಲ್ ಹೇಳಿದ್ದಾರೆ. ಜಿತು ಪಟ್ವಾರಿ ಕೇವಲ ಸುದ್ದಿಗೆ ಬರಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇತ್ತ ಸೌರಭ್​ ನಾಪತ್ತೆಯಾಗಿದ್ದಾರೆ. ಆದರೆ ಇವರ ಡೈರಯಲ್ಲಿನ ವಿಚಾರಗಳು ಮುನ್ನೆಲೆಗೆ ಬಂದು ಎರಡು ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net