

ಬೆಳಗಾವಿ: ಗೋವಾದ ದೂಧ್‌ಸಾಗರ- ಕಾರಂಜೋಲ್ ಮಾರ್ಗ ಮಧ್ಯೆ ಅಮರಾವತಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ವಾಸ್ಕೊ ಮತ್ತು ಹೌರಾ ನಡುವೆ ಸಂಚರಿಸುವ ಈ ಅಮರಾವತಿ ಎಕ್ಸ್ಪ್ರೆಸ್ನ ಮುಂಭಾಗದ ಗಾಲಿಗಳು ಹಳಿ ತಪ್ಪಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಇಂದು ಬೆಳಗ್ಗೆ 6.30ಕ್ಕೆ ವಾಸ್ಕೊದಿಂದ ಹೊರಟ್ಟಿದ್ದ ಅಮರಾವತಿ ಎಕ್ಸ್‌ಪ್ರೆಸ್, ಕಾರಂಜೋಲ್ ಬಳಿ ಸಾಗುತ್ತಿದ್ದಾಗ ರೈಲಿನ ಮುಂಭಾಗದ ಗಾಲಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಭಾರಿ ಪ್ರಮಾಣದ ಯಾವುದೇ ಅಪಘಾತ ಉಂಟಾಗಿಲ್ಲ. ಮಾತ್ರವಲ್ಲ ಲೋಕೋಪೈಲೇಟ್ ಚಾಣಾಕ್ಷತನದಿಂದ ತಪ್ಪಿದ ಭಾರಿ ದುರಂತ ತಪ್ಪಿಹೋಗಿದೆ.
ಹಳಿ ತಪ್ಪಿದ ಕೆಲವೇ ಹೊತ್ತಲ್ಲಿ ಕ್ಯಾಸಲ್ರಾಕ್ನಿಂದ ಅಪಘಾತ ಪರಿಹಾರ ರೈಲು ಧಾವಿಸಿದ್ದು, ಸೂಕ್ತ ನೆರವು ನೀಡಿದೆ. ರೈಲಿನಲ್ಲಿದ್ದ ಪ್ರಯಾಣಿಕರಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಪೂರೈಕೆ ಮಾಡಲಾಗಿದೆ.
ನಂತರ ಬೇರೆ ಇಂಜಿನ್ ಬಳಸಿ ಅಮರಾವತಿ ಎಕ್ಸ್‌ಪ್ರೆಸ್ ಪ್ರಯಾಣ ಮರು ಆರಂಭಿಸಿದೆ. ಆದರೆ ಇದೇ ಮಾರ್ಗದಲ್ಲಿ ಸಂಚರಿಸಬೇಕಿದ್ದ ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್ ರೈಲು ಸಂಚಾರದಲ್ಲಿ ವಿಳಂಬವಾಗಿದೆ.