ನಮ್ಮ ಕುಟುಂಬಕ್ಕೂ ಈ ಪಾತ್ರಕ್ಕೂ ಸಾಮ್ಯತೆ ಇದೆ; Amaran ಸಕ್ಸಸ್ ಮೀಟ್​ನಲ್ಲಿ ಕಣ್ಣೀರಿಟ್ಟ ನಟ ಶಿವಕಾರ್ತಿಕೇಯನ್​

Untitled design - 2024-11-05T190302.547
Published on

ಚೆನ್ನೈ: ಕಾಲಿವುಡ್​​ ನಟ ಶಿವಕಾರ್ತಿಕೇಯನ್ ನಟನೆಯ ಬಹುಭಾಷಾ ಜೀವನಚರಿತ್ರೆಯ ಆಕ್ಷನ್ ಚಿತ್ರ 'ಅಮರನ್’ (Amaran) ಅಕ್ಟೋಬರ್ 31 ರಂದು ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸೂಪರ್ ಹಿಟ್ ಟಾಕ್ ಕೇಳಿಬರುತ್ತಿದೆ. ಸಿನಿಮಾದಲ್ಲಿ ಶಿವಕಾರ್ತಿಕೇಯನ್ ದಿವಂಗತ ಮೇಜರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡ ಇತ್ತೀಚೆಗಷ್ಟೆ ಸಿನಿಮಾ ಸಕ್ಸಸ್​ ಮೀಟ್​​​ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕಾರ್ತಿಕೇಯನ್​​, ತಮ್ಮ ಪಾತ್ರಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರತಿಕ್ರಿಯೆಗಳು ಕೇಳಿಬರುತ್ತಿದೆ ಎಂದು ಹೇಳಿದರು.ಅಲ್ಲದೆ ಪೋಲೀಸ್ ಆಗಿದ್ದ ಅವರ ತಂದೆ ದಿವಂಗತ ದಾಸ್ ಅವರನ್ನು ನೆನಪಿಸಿಕೊಂಡು ವೇದಿಕೆ ಮೇಲೆ ಕಣ್ಣೀರಿಟ್ಟರು. ಮೇಜರ್ ಮುಕುಂದ್ ವರದರಾಜನ್ ಮತ್ತು ಅವರ ತಂದೆಯ ನಡುವೆ ಇರುವ ಸಾಮ್ಯತೆಯನ್ನು ತಿಳಿಸಿದರು.

ನನ್ನ ತಂದೆಯಂತೆಯೇ ಧೈರ್ಯಶಾಲಿ ಪೊಲೀಸ್ ಪಾತ್ರವನ್ನು ಚಿತ್ರಿಸುವ ಆಸೆ ಇತ್ತು. ಆದರೆ ಮುಕುಂದ್ ವರದರಾಜನ್ ಅವರ ಪಾತ್ರದಿಂದ ಈ ಆಸೆ ನೆರವೇರಿದೆ. ನನ್ನ ತಂದೆ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಎಲ್ಲರೂ ಗೌರವಿಸುತ್ತಿದ್ದರು. ಸಿನಿಮಾ ಮಾಡಲು ನನ್ನ ದೊಡ್ಡ ಕಾರಣ ಅವರೇ. ಕಳೆದ 21 ವರ್ಷಗಳಿಂದ ನಾನು ಅವರ ನೆನಪುಗಳೊಂದಿಗೆ ಬದುಕುತ್ತಿದ್ದೇನೆ. ಅಮರನ್ ಸಿನಿಮಾ ನನಗೆ ಅವರಂತಾಗಲು ಹಾಗೂ ಅವರನ್ನು ನೋಡುವ ಅವಕಾಶ ನೀಡಿದೆ ಎಂದು ಹೇಳಿದರು.

ತಮ್ಮ ತಂದೆಯ ನೆನಪುಗಳನ್ನು ಮೆಲುಕು ಹಾಕಿದ ಅವರು, ನನ್ನ ತಂದೆಯೇ ನನಗೆ ಮೊದಲ ನಾಯಕ. ಅವರ ಶೂಗಳನ್ನು ಪಾಲಿಶ್ ಮಾಡುವುದು, ಸಮವಸ್ತ್ರದ ಮೇಲೆ ಅವರ ಬ್ಯಾಡ್ಜ್ ಹಾಕುವುದು, ಬೆಲ್ಟ್ ಹುಕ್‌ನೊಂದಿಗೆ ಸಹಾಯ ಮಾಡುವುದು ಎಲ್ಲವೂ ನನಗೆ ನೆನಪಿದೆ. ನಾನು ಅಮರನಲ್ಲಿ ಅವರಂತೆ ಇರಬೇಕೆಂದು ಬಯಸಿದ್ದೆ. ನಾನೂ, ಅಪ್ಪ ಮತ್ತು ಮೇಜರ್ ಮುಕುಂದ್ ನಡುವೆ ಸಾಕಷ್ಟು ಸಾಮ್ಯತೆಗಳನ್ನು ಕಂಡಿದ್ದೇನೆ ಎಂದು ತಿಳಿಸಿದರು.

ನನಗೆ ನನ್ನ ತಂದೆಯಿಂದ ಬೆಳಗ್ಗೆ 8 ಗಂಟೆಗೆ ಕರೆ ಬಂದಿತು. ಅವರು 2 ದಿನಗಳ ರಜೆಯ ಮೇಲೆ ಮನೆಗೆ ಬರುತ್ತಿದ್ದಾರೆ ಎಂದು ಹೇಳಿದರು. ಆದರೆ ಅವರು ಇನ್ನಿಲ್ಲ ಎಂಬ ಸುದ್ದಿ ಬಂದ ಬಳಿಕ ನಾನು ಮನೆಗೆ ಮರಳಿದೆ. ಆ ದಿನ ಎಲ್ಲಾ ಬದಲಾಯಿತು. ಆಗ ಅಪ್ಪ ಇದ್ದಾರೆ ಅಂತ ಗೊತ್ತಿದ್ರಿಂದ ತುಂಬಾ ಕಾನ್ಫಿಡೆಂಟ್ ಆಗಿದ್ದೆ. ಆದರೆ ಆ ಆಂಬ್ಯುಲೆನ್ಸ್, ಐಸ್ ಬಾಕ್ಸ್ ಇತ್ಯಾದಿಗಳಲ್ಲಿ ಅವರನ್ನು ನೋಡಿದಾಗ ನಾನು ಸಂಪೂರ್ಣವಾಗಿ ಕುಗ್ಗಿದೆ. ಅಮರನ್ ಸಿನಿಮಾದೊಂದಿಗೆ ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ, ಪ್ರೇಕ್ಷಕರು, ಮಾಧ್ಯಮಗಳಿಂದ ಪ್ರಶಂಸೆಗಳು, ನೀವು ಎಲ್ಲವನ್ನೂ ಒಟ್ಟುಗೂಡಿಸಿ ನನ್ನನ್ನು ಸಂಪೂರ್ಣಗೊಳಿಸಿದಂತಿದೆ. ನಾನು ಜಿ ದಾಸ್ ಅವರ ಮಗನಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು.

ತಂದೆ ಕಳೆದುಕೊಂಡ ನೋವು ಇನ್ನೂ ಇದೆ. ನಾನು ಮೂರು ಮಕ್ಕಳ ತಂದೆಯಾದ ನಂತರವೂ ನೋವು ಇದ್ದೆ ಇರುತ್ತದೆ. ಇಂದು ರೆಬೆಕಾ ಮೇಡಂ ಅಶೋಕ ಚಕ್ರ ಪಡೆದಂತೆ, ನನ್ನ ತಾಯಿಯೂ ನನ್ನ ತಂದೆ ಪರವಾಗಿ ರಾಷ್ಟ್ರಪತಿ ಪದಕವನ್ನು ಪಡೆದರು. ನನ್ನ ಜೀವನಕ್ಕೂ ಈ ಸಿನಿಮಾಗೂ ಸಾಮ್ಯತೆ ಇತ್ತು ಎಂದು ಹೇಳಿದರು. ರಾಜಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವು 2014ರಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ನಿಧನರಾದ ಮೇಜರ್ ಮುಕುಂದ್ ವರದರಾಜನ್ ಅವರ ಜೀವನ ಕಥೆಯಿಂದ ಸ್ಫೂರ್ತಿ ಪಡೆದಿದ್ದಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net