ನಾನು ಸ್ಟೂಡೆಂಟ್ ಅಲ್ಲ, ಪರೀಕ್ಷೆ ಬರೆಯಲೂ ಬಂದಿಲ್ಲ!

VidhanaSoudha
Published on

ಬೆಂಗಳೂರು: ರಾಜ್ಯ ವ್ಯಾಪಿ ಪರಿಶಿಷ್ಟ ಜಾತಿ ಮತ್ತ ಪಂಗಡದವರು ತಮಗೆ ಮಂಜೂರಾದ ಜಮೀನುಗಳನ್ನು ಪರಭಾರೆ ಮಾಡಲು ಸರ್ಕಾರಕ್ಕೆ ಕಳಿಸುವ ಪ್ರಸ್ತಾವನೆ ತಿರಸ್ಕೃತವಾಗುತ್ತಿರುವುದಕ್ಕೆ ಆಡಳಿತ ಪಕ್ಷದ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಳೆದ ಮೂರು ವರ್ಷದಿಂದ 625 ಪ್ರಸ್ತಾವನೆಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ, 217 ಪ್ರಸ್ತಾವನೆ ವಿವರಣೆ ಕೋರಿ ಜಿಲ್ಲಾಧಿಕಾರಿಗಳಿಗೆ ಹಿಂದಿರುಗಿಸಲಾಗಿದೆ. ಪ್ರಸ್ತಾವನೆ ಸಲ್ಲಿಸುವವರು ಐಎಎಸ್ ಅಧಿಕಾರಿಗಳೇ, ತಿರಸ್ಕರಿಸುವವರೂ ಐಎಎಸ್ ಅಧಿಕಾರಿಗಳೇ, ಕಂದಾಯ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಗಳು ಈ ವಿಚಾರದಲ್ಲಿ ಹೆಚ್ಚು ತಿಳಿದುಕೊಂಡಿದ್ದಾರೆಯೇ ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವರು ಸ್ಪಷ್ಟನೆ ನೀಡಿ, ಪರಿಶಿಷ್ಟರ ಭೂಮಿ ಪರಭಾರೆ ವಿಚಾರವಾಗಿ ಸರ್ಕಾರದ ಗಮನಕ್ಕೆ ಬಂದ ಹಲವು ವಿಚಾರ ಸದನದ ಮುಂದೆ ವಿವರಿಸಿದರು.
ಇದರಿಂದ ಕೆರಳಿದ ನಾರಾಯಣಸ್ವಾಮಿ, ನಾನು ಸ್ಟೂಡೆಂಟ್ ಅಲ್ಲ, ಪರೀಕ್ಷೆ ಬರೆಯಲು ಇಲ್ಲಿ ಬಂದಿಲ್ಲ ಎಂದು ತಿರುಗಿಬಿದ್ದರು. ಕೊನೆಗೆ ಮಹದೇವಪ್ಪ ಶಾಸಕರ ಬಳಿ ತೆರಳಿ ಸಮಾಧಾನಪಡಿಸಿದರು.
ಅಂತಿಮವಾಗಿ ಉತ್ತರ ನೀಡಿದ ಸಚಿವರು, ಪರಿಶಿಷ್ಟರು ತಮಗೆ ಮಂಜೂರಾದ ಭೂಮಿಯನ್ನು ಪರಭಾರೆ ಮಾಡಲು ಅವಕಾಶ ಮಾಡಿಕೊಟ್ಟರೆ ಮತ್ತೆ ಅವರು ಭೂಮಿ ಖರೀದಿಸಲು ಸಾಧ್ಯವೇ ಇಲ್ಲ. ಸರ್ಕಾರದ ಕಾಳಜಿ ಮಂಜೂರಾದ ಭೂಮಿ ಅವರ ಬಳಿಯೇ ಉಳಿಯಬೇಕೆಂಬುದಾಗಿದೆ ಎಂದರು.
ಹಾಗೆಯೇ, ಭೂ ಮಾಲಿಕರ ಹೊರತು ಬೇರೆಯವರು ಪರಭಾರೆ ಮಂಜೂರಾತಿಗೆ ಅರ್ಜಿ ಹಾಕಿದ ಪ್ರಕರಣ ಸೇರಿ ದಾಖಲೆ ಸರಿಯಾಗಿಲ್ಲದ ಪ್ರಕರಣವನ್ನು ವಿವರಣೆ ಕೋರಿ ವಾಪಸ್ ಕಳಿಸಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net