

ಬೆಂಗಳೂರು: ಸುಮ್ಮ ಸುಮ್ಮನೆ ರಾಜೀನಾಮೆ ಕೊಡೋಕೆ ನನಗೇನು ತಲೆ ಕೆಟ್ಟಿದ್ದೀಯಾ? ಕೊಡಬೇಕಾದಾಗ ನಾನು ರಾಜೀನಾಮೆ ಕೊಡ್ತೀನಿ. ನಿಮ್ಮ ತರ ಭಂಡತನದಲ್ಲಿ ನಾನು ರಾಜಕೀಯ ಮಾಡಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಿಎಂಗೆ ತಿರುಗೇಟು ಕೊಟ್ಟರು.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಏನು ತಪ್ಪು ಮಾಡಿದ್ದೀನಿ ಅಂತಾ ರಾಜೀನಾಮೆ ಕೊಡಲಿ? ಡಿನೋಟಿಫಿಕೇಶನ್ ಪ್ರಕರಣದಲ್ಲಿ ಯಾರು ನನ್ನನ್ನು ಸಿಕ್ಕಿ ಹಾಕಿಸೋಕೆ ಆಗಲ್ಲ. 12ವರ್ಷಗಳಿಂದ ಏನು ಕಡುಬು ಕಡೀತೀದ್ದೀರಾ? ನಾನು ಇವರ ಯಾವುದೇ ತನಿಖೆಗೂ ಹೆದರುವನಲ್ಲ ಎಂದು ಸವಾಲು ಹಾಕಿದರು.
ನಾನು ಬಹಳ ಕ್ಲೀನ್, ಪಾರದರ್ಶಕ, ನನ್ನ ಜೀವನ ತೆರೆದ ಪುಸ್ತಕ ಎಂದೆಲ್ಲ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳ ಕಥೆ ಏನಾಗಿದೆ? ಅವುಗಳ ತನಿಖೆ ಎಲ್ಲಿಗೆ ಬಂದಿದೆ ಎಂಬುದನ್ನು ಜನರಿಗೆ ಹೇಳಬೇಕಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವರು ಕ್ಲೀನ್, ಸ್ವಚ್ಚ ಆಗಿದ್ದರೆ ಇಷ್ಟು ಪ್ರಕರಣಗಳು ಇವರ ಮೇಲೆ ಏಕೆ ದಾಖಲಾಗುತ್ತಿದ್ದವು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಇಂಥ ಪ್ರಕರಣಗಳನ್ನು ಮುಚ್ಚಿ ಹಾಕಿಕೊಳ್ಳಲು ಹಿಂದೆ ಲೋಕಾಯುಕ್ತವನ್ನು ಮುಗಿಸಿ ಎಸಿಬಿಯನ್ನು ರಚನೆ ಮಾಡಿಕೊಂಡಿದ್ದರು ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾವ ತನಿಖೆಯೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜಕೀಯ ಸೇಡಿಗಾಗಿ ತನಿಖೆ ನಡೆಸಲಾಗುತ್ತಿದೆ. ಅದಕ್ಕೆ ಚಂದ್ರಶೇಖರ್ ಅವರಂಥ ಕಳಂಕಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.
ನನ್ನ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಲೋಕಾಯುಕ್ತಕ್ಕೆ ಬರೆದಿದ್ದ ಅತಿ ಗೌಪ್ಯ ಪಾತ್ರವೊಂದು ಸೋರಿಕೆ ಆಗಿತ್ತು. ಅದು ನಮ್ಮ ಕುಟುಂಬದ ವಿರುದ್ಧ ಅನೇಕ ತಿಂಗಳಿನಿಂದ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವ ಖಾಸಗಿ ಸುದ್ದಿವಾಹಿನಿಗೆ ಆ ಪತ್ರ ಸೋರಿಕೆ ಆಗಿತ್ತು. ಅದು ಐಜಿಪಿ ಚಂದ್ರಶೇಖರ್ ಅವರಿಂದಲೇ ಸೋರಿಕೆ ಆಗಿದೆ. ಆದರೆ, ಅದೇ ಅಧಿಕಾರಿ ರಾಜ್ಯಪಾಲರ ಕಚೇರಿಯಿಂದಲೇ ಪತ್ರ ಸೋರಿಕೆ ಆಗಿದೆ ಎಂದು ಕಥೆ ಕಟ್ಟಿ ರಾಜ್ಯಪಾಲರ ಕಾರ್ಯಾಲಯದ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲು ಅನುಮತಿ ಕೊಡುವಂತೆ ಲೋಕಾಯುಕ್ತ ತನಿಖಾ ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಸಂವಿಧಾನ ಮತ್ತು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯಪಾಲರ ಕಾರ್ಯಾಲಯದ ಬಗ್ಗೆ ತನಿಖೆಗೆ ಅನುಮತಿ ಕೋರುವ ದರ್ಪವನ್ನು ಈ ಅಧಿಕಾರಿ ತೋರಿಸಿದ್ದಾರೆ. ಈ ಅಧಿಕಾರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಆಕ್ರೋಶ ಹೊರ ಹಾಕಿದರು.
ಲೋಕಾಯುಕ್ತ ವಿಶೇಷ ತನಿಖಾ ದಳದ ಐಜಿಪಿ ಎಂ.ಚಂದ್ರಶೇಖರ್ ಭ್ರಷ್ಟ ಅಧಿಕಾರಿ ಆಗಿದ್ದು, ಇಂಥ ದರೋಡೆಕೋರ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ ಎಂದರಲ್ಲದೆ, ಚಂದ್ರಶೇಖರ್ ವಿರುದ್ಧ ಸರಣಿ ದಾಖಲೆಗಳ ಸಮೇತ ಆರೋಪಗಳನ್ನು ಮಾಡಿದರು.
ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಲೂಟಿ ಮಾಡುತ್ತಿದ್ದಾರೆ. ನನ್ನ ಬಳಿ ಇರುವ ದಾಖಲೆಗಳನ್ನು ಬಯಲು ಮಾಡಿದರೆ ಕೊನೇಪಕ್ಷ 6 ರಿಂದ 7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಶೀಘ್ರದಲ್ಲಿಯೇ ಎಲ್ಲ ದಾಖಲೆಗಳನ್ನು ಬಿಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.