ಕ್ರೀಡಾ ಕ್ಷೇತ್ರದ ಸಾಧಕರಿಗೆ ಎಂದಿಗೂ ಗೌರವ

dasara sports
ಗುಂಡು ಎಸೆತದ ಮೂಲಕ ಶಿವಮೊಗ್ಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಮಧು ಬಂಗಾರಪ್ಪ ಚಾಲನೆ ನೀಡಿದರು. ಎಸ್.ಎನ್.ಚನ್ನಬಸಪ್ಪ, ಬಲ್ಕಿಷ್ ಬಾನು, ಡಾ. ಧನಂಜಯ ಸರ್ಜಿ ಇತರರಿದ್ದರು.
Published on

ಶಿವಮೊಗ್ಗ: ಕ್ರೀಡೆ ಸೇರಿ ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಎಂದಿಗೂ ವಿಶೇಷ ಗೌರವವಿದೆ. ಸಾಧಕರು ಬೇರೆಯವರಿಗೆ ಸ್ಪೂರ್ತಿಯಾಗಿರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಮಾತ್ರವಲ್ಲದೆ ಕ್ರೀಡೆ ಮತ್ತು ಇತರೆ ಸಾಂಸ್ಕೃತಿಕ ಚಟುವಟಿಕೆಗಳೂ ಮುಖ್ಯ. ಇವು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ದಸರಾ ಕ್ರೀಡಾಕೂಟದಲ್ಲಿ ವಯಸ್ಸಿನ ಮಿತಿಯಿಲ್ಲದ ಕಾರಣ ಎಲ್ಲರೂ ಭಾಗವಹಿಸಬಹುದು. ಮಕ್ಕಳಿಗೆ ಸ್ಫೂರ್ತಿಯಾಗುವಂತೆ ವಯಸ್ಸಾದವರು ಸ್ಪರ್ಧಿಸುತ್ತಿರುವುದು ಸಂತಸದ ವಿಷಯ. ದಸರಾ ಕ್ರೀಡಾಕೂಟದ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ನೀಡಬೇಕು. ಪ್ರಸ್ತುತ ಜಿಲ್ಲೆಯಲ್ಲಿ 5 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಡಾಪಟುಗಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನ ಹಸಿವು, ಜೀರ್ಣಕ್ರಿಯೆ, ನಿದ್ರೆ ಎಲ್ಲದಕ್ಕೂ ಮಾತ್ರೆ ತೆಗೆದುಕೊಳ್ಳುತ್ತಾರೆ. ಈ ಸಮಸ್ಯೆಗೆ ಜೀವನ ಶೈಲಿಯೇ ಪ್ರಮುಖ ಕಾರಣ. ಬೇಗ ನಿದ್ರೆಯಿಂದ ಏಳುವುದು, ನಗುವುದು, ಮನೆಯವರ ಜತೆ ಒಡನಾಟ, ಉತ್ತಮ ಊಟ, ನಿದ್ರೆ , ಆಟ ಕೂಡ ದೊಡ್ಡ ಔಷಧ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದರು.

ವೈದ್ಯರಿಂದ ದೂರ ಇರಲು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಉತ್ತಮ ಅಂಕ ಗಳಿಕೆಗೆ ಕಾರಣವಾಗುತ್ತದೆ. ಟಿವಿ, ಮೊಬೈಲ್‌ನಿಂದ ದೂರ ಇರಬಹುದು. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಎಂಎಲ್‌ಸಿ ಬಲ್ಕಿಷ್ ಬಾನು, ಎಸ್ಸಿ, ಎಸ್ಟಿ, ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಶಾಸಕ ಎಸ್.ಎನ್.ಚನ್ನಬಸಪ್ಪ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net