ಕನ್ನಡ ನಾಡು-ನುಡಿ ರಕ್ಷಣೆಗಾಗಿ ಸದಾ ಕಟಿಬದ್ಧರಾಗಿ

16-ಎಸ್ಕೆಪಿ-2-b
ಶಿಕಾರಿಪುರಕ್ಕೆ ಆಗಮಿಸಿದ ಕನ್ನಡರಥವನ್ನು ಶಾಸಕ ಬಿ.ವೈ.ವಿಜಯೇಂದ್ರ ಸ್ವಾಗತಿಸಿದರು. ಕೆ.ಎಸ್.ಗುರುಮೂರ್ತಿ, ಮಲ್ಲೇಶ್ ಬಿ.ಪೂಜಾರ್, ರಂಜಿತ್, ವಿನಯ್ ಆರಾಧ್ಯ ಇತರರಿದ್ದರು.
Published on

ಶಿಕಾರಿಪುರ: ಕನ್ನಡ ನಮ್ಮ ಹೃದಯದ ಭಾಷೆ, ನಾನು ಕನ್ನಡಿಗ ಎನ್ನುವದೇ ಹೆಮ್ಮೆಯ ಸಂಗತಿ. ನಾಡು, ನುಡಿ ರಕ್ಷಣೆಗಾಗಿ ನಾವು ಸದಾ ಕಟಿಬದ್ಧರಾಗಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಶಿಕಾರಿಪುರ ತಾಲೂಕಿಗೆ ಆಗಮಿಸಿದ ಕನ್ನಡರಥಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಕನ್ನಡ ಹೃದಯದ ಭಾಷೆ. ಕನ್ನಡ ರಥ ಎಂದರೆ ಅದು ಕನ್ನಡಿಗನ ವಿಜಯಯಾತ್ರೆ ಎಂದು ತಿಳಿಸಿದರು.

ಶಿಕಾರಿಪುರ ತಾಲೂಕು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡಬೇಕಾದ ತಾಲೂಕು. ಕನ್ನಡದ ಮೊದಲ ಸಾಮ್ರಾಜ್ಯ ರೂವಾರಿ ಮಯೂರವರ್ಮನಿಗೆ ಜನ್ಮ ನೀಡಿದ ಸ್ಥಳ. ಕನ್ನಡದ ಮೊದಲ ಶಾಸನ ತಾಳಗುಂದದ ಸಿಂಹಕಟಾಂಜನ ಶಾಸನ ಎಂದು ಕನ್ನಡ ಶಾಸ್ತ್ರಜ್ಞರು, ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಶಿಕಾರಿಪುರ ತಾಲೂಕು ಕನ್ನಡದ ಪ್ರಥಮಗಳ ಆಗರ ಎಂದರು.

ಶಿಕಾರಿಪುರ ತಾಲೂಕು ಶಿವಶರಣರ ನಾಡು. ಅಕ್ಕಮಹಾದೇವಿ, ಅಲ್ಲಮಪ್ರಭು, ಮುಕ್ತಾಯಕ್ಕ, ಸತ್ಯಕ್ಕ ಸೇರಿ ಅನೇಕ ಶರಣರಿಗೆ ಜನ್ಮ ನೀಡಿದ ಸ್ಥಳ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮಹಾ ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿಯನ್ನು ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಅನುದಾನ ನೀಡಿದ್ದಾರೆ ಎಂದು ಹೇಳಿದರು.

ಸ್ವಾತಂತ್ರೃ ಪೂರ್ವದಲ್ಲಿ ತಾಲೂಕಿನ ಈಸೂರು ಗ್ರಾಮದ ಹೋರಾಟಗಾರರು ದೇಶದಲ್ಲೇ ಮೊದಲ ಬಾರಿ ಈಸೂರು ಗ್ರಾಮವನ್ನು ಸ್ವತಂತ್ರ ಗ್ರಾಮವಾಗಿ ಘೋಷಿಸಿ ಬ್ರಿಟಿಷರ ಎದೆ ನಡುಗಿಸಿದ್ದರು. ಬ್ರಿಟಿಷರ ಗುಂಡಿಗೆ ಐವರು ಹುತಾತ್ಮರಾದರು. ಅವರ ನೆನಪಿಗೆ ಈಸೂರಿನಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಈಸೂರು ನಮ್ಮ ತಾಲೂಕಿನ ಹಿರಿಮೆ ಎಂದು ತಿಳಿಸಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಗ್ರೇಡ್-2 ತಹಸೀಲ್ದಾರ್ ರಂಜಿತ್, ಶಿರಸ್ತೇದಾರ ವಿನಯ್ ಆರಾಧ್ಯ, ಸುಧೀರ್, ರುದ್ರೇಶ್, ಸತೀಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೀರನಗೌಡ, ಜಿಲ್ಲಾ ಕಾರ್ಯದರ್ಶಿ ಬೆಣ್ಣೆ ಪ್ರವೀಣ್, ರಾಘವೇಂದ್ರ, ಪುರಸಭೆ ಮುಖ್ಯಾಧಿಕಾರಿ ಭರತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net