MSRTC Bus Assault: ಓವರ್‌ಟೇಕ್ ವಿಚಾರಕ್ಕೆ ಕಿರಿಕ್! ​ಎಸ್‌ಟಿ ಬಸ್ ತಡೆದು ಚಾಲಕನ ಮೇಲೆ ಹಲ್ಲೆ, ಪ್ರಯಾಣಿಕರಿಗೆ ಧಮ್ಕಿ

MSRTC bus driver attacked
ಓವರ್‌ಟೇಕ್ ವಿಚಾರಕ್ಕೆ ಹೈವೇಯಲ್ಲೇ ಸರ್ಕಾರಿ ಬಸ್ ತಡೆದು ಚಾಲಕನಿಗೆ ಥಳಿತ
Published on: 

Bus Driver Attack Pune: ಪುಣೆ-ನಾಶಿಕ್ ರಾಷ್ಟ್ರೀಯ ಹೆದ್ದಾರಿಯ ಹತ್ತಿರ ಆತಂಕಕಾರಿ ಘಟನೆಯೊಂದು ನಡೆದಿದೆ. ಮಹಾರಾಷ್ಟ್ರ ಸರ್ಕಾರಿ (MSRTC) ಬಸ್ ಅನ್ನು ಮಧ್ಯ ರಸ್ತೆಯಲ್ಲೇ ಅಡ್ಡಹಾಕಿದ ಇಬ್ಬರು ಬೈಕ್ ಸವಾರರು, ಡ್ರೈವರ್‌ ಮೇಲೆ ಹಲ್ಲೆ ಮಾಡಿ, ಪ್ರಯಾಣಿಕರಿಗೂ ಬೆದರಿಕೆ ಹಾಕಿದ್ದಾರೆ.

ಚಾಕನ್ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಸ್ ನಾಶಿಕ್ ಕಡೆಗೆ ಚಲಿಸುತ್ತಿತ್ತು. ಬಸ್ ತಮ್ಮನ್ನು ಓವರ್‌ಟೇಕ್ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡ ಇಬ್ಬರು ಕಿಡಿಗೇಡಿಗಳು ಬೈಕ್‌ಗಳಲ್ಲಿ ಬಸ್ ಅನ್ನು ಚೇಸ್ ಮಾಡಿದ್ದಾರೆ. ಹೆದ್ದಾರಿಯಲ್ಲೇ ಬಸ್‌ಗೆ ಅಡ್ಡವಾಗಿ ಬೈಕ್ ನಿಲ್ಲಿಸಿ, ಚಾಲಕನ ಮೇಲೆ ಹಲ್ಲೆ ನಡೆಸಿ ವಾಹನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಜತೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೂ ಬೆದರಿಕೆ ಒಡ್ಡಿದ್ದಾರೆ.

ದೀಪಾವಳಿ ಹಬ್ಬದ ಸಾಲು ಸಾಲು ರಜೆಗಳಿದ್ದ ಕಾರಣ ಬಹುತೇಕ ಪ್ರಯಾಣಿಕರು ತಮ್ಮ ಸ್ವಂತ ಊರುಗಳಿಗೆ ಹೊರಟಿದ್ದರು. ಈ ದಿಢೀರ್ ಗಲಾಟೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾದರು.

ಬಿಟ್ಟುಬಿಡುವಂತೆ ಸವಾರರಲ್ಲಿ ಎಷ್ಟೇ ಮನವಿ ಮಾಡಿದರೂ ಅವರು ಕಿವಿಕೊಡಲಿಲ್ಲ. ಕೊನೆಗೆ ಪ್ರಯಾಣಿಕರು ಬೇರೆ ವಾಹನಗಳನ್ನು ಮಾಡಿಕೊಂಡು ತಮ್ಮ ಪ್ರಯಾಣ ಮುಂದುವರಿಸಿದರೆ, ಬಸ್ ಚಾಲಕ ಕೂಡ ತಡವಾಗಿ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ: ಯುಪಿಐ ಯುಗದಲ್ಲೂ ನಗದು ಪ್ರೀತಿ ಬಿಡದ ಭಾರತೀಯರು: ಏನಿದು ‘ಕ್ಯಾಶ್ ಪ್ಯಾರಾಡಾಕ್ಸ್’ ವಿಸ್ಮಯ? | Demonetisation

ಈ ರಸ್ತೆ ರಂಪಾಟದ ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಚಾಕನ್ ದಕ್ಷಿಣ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಸಂಜಯ್ ಸಾಳುಂಖೆ ಸ್ಪಷ್ಟನೆ ನೀಡಿದ್ದು, ‘ಆರೋಪಿಗಳನ್ನು ಈಗಾಗಲೇ ಗುರುತಿಸಿ ವಶಕ್ಕೆ ಪಡೆಯಲಾಗಿದೆ. ಶೀಘ್ರದಲ್ಲೇ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.