

ಶಿವಮೊಗ್ಗ: ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ 17 ಪೋಷಕಾಂಶಗಳ ಆಗತ್ಯವಿರುತ್ತದೆ. ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿ ಬಳಸುತ್ತಿದ್ದಾರೆ. ಇದರ ಬದಲು ವಿವಿಧ ರಸಗೊಬ್ಬರಗಳನ್ನು ಸಂಯೋಜನೆಯೊಂದಿಗೆ ಬಳಸಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ್‌ಕುಮಾರ್ ತಿಳಿಸಿದ್ದಾರೆ.
ಸಸ್ಯಗಳಿಗೆ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಸ್ವಾಭಾವಿಕವಾಗಿ ದೊರೆಯುತ್ತದೆ. ಉಳಿದ ಹದಿನಾಲ್ಕು ಪೋಷಕಾಂಶಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಕ್ಯಾಲ್ಸಿಯಂ, ಮೆಗ್ನೇಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಬ್ಬಿನಂ, ಕ್ಲೋರಿನ್ ಮತ್ತು ನಿಕ್ಕಲ್ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ. ಇವುಗಳ ಕೊರತೆಯಾದರೂ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ.
ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದೆ. ಇವುಗಳನ್ನು 4:2:1ರ ಅನುಪಾತದಲ್ಲಿ ಬಳಸಬೇಕು. ಆದರೆ ರೈತರು ಈ ರಸಗೊಬ್ಬರಗಳನ್ನು 5.08:2.89:1 ಅನುಪಾತದಲ್ಲಿ ಬಳಸುತ್ತಿದ್ದಾರೆ. ಗಂಧಕ ಒದಗಿಸುವ 20:20:0:13 ಹಾಗೂ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26. 22:32:16, 14:35:14, 17:17:17, 14:28:14, 19:19:19, 20:10:10 ಬಳಸಬಹುದೆಂದು ಮಾಹಿತಿ ನೀಡಿದ್ದಾರೆ.