ಅಲ್ಪರ ಸಂಗ ಅಭಿಮಾನ ಭಂಗ

Ayodhya Sriram
Published on
krishnaraja kuthpadi
ಕೃಷ್ಣರಾಜ ಕುತ್ಪಾಡಿ
ರಾಮೋ ರಾಮೋ ರಾಮ ಇತಿ ಜನಾನಾಮಭವನ್ ಕಥಾಃ|
ಊರು ತುಂಬ ಜನ ವಯಸ್ಸು-ಲಿಂಗಭೇದವಿಲ್ಲದೆ ರಾಮ ರಾಮ ಎಂದು ಗುನುಗುತ್ತಿದ್ದರು. ರಾಮನ ಹುಟ್ಟುಹಬ್ಬಕ್ಕೆ ಇಡೀ ರಾಜ್ಯವೇ ಸಿಂಗಾರಗೊಂಡಿತ್ತು. ಮನೆಗಳ ಮುಂದೆ ರಂಗವಲ್ಲಿ ಚಿತ್ತಾರ ಅರಳಿತ್ತು. ಗೋಡೆಗಳು ಸುಣ್ಣಬಣ್ಣದಳಿಂದ ಕಂಗೊಳಿಸುತ್ತಿತ್ತು. ಊರೂರೇ ತಳಿರುತೋರಣಗಳಿಂದ ಅಲಂಕೃತಗೊಂಡಿತ್ತು. ಪ್ರತಿಯೊಬ್ಬರೂ ರಾಮನನ್ನು ತಮ್ಮ ಮನೆಯ ಮಗನೆಂದೇ ಭಾವಿಸಿದ್ದರು. ರಾಮನು ಕೂಡ ಎಂದು ತನ್ನ ಮತ್ತು ಜನರ ನಡುವೆ ಪ್ರತಿಷ್ಠೆಯ ಗೋಡೆಯನ್ನು ಕಟ್ಟಿರಲಿಲ್ಲ. ಹುಟ್ಟುಹಬ್ಬದ ಮರುದಿನ ರಾಮನಿಗೆ ಪುಷ್ಯನಕ್ಷತ್ರ ಸಂಪತ್ತಾರಾಬಲ ಕೂಡಿಬಂದಿತ್ತು. ದಶರಥ ಈಗಾಗಲೇ ರಾಮನ ಹುಟ್ಟುಹಬ್ಬಕ್ಕೆ ನೆರದಿರುವ ತನ್ನ ಆಡಳಿತವರ್ಗವನ್ನು, ಮಿತ್ರರಾಜರನ್ನು ಉದ್ದೇಶಿಸಿ ರಾಮನಿಗೆ ಯೌವ್ವರಾಜ್ಯವನ್ನು ಹಸ್ತಾಂತರಿಸುವ ಉದ್ದೇಶ ವಿವರಿಸಿದನು. ಅಯೋಧ್ಯೆಯ ಸಂತಸ ನೂರ್ಮಡಿ ಹೆಚ್ಚಿತು. ಅಭಿಷೇಕದ ಸಿದ್ಧತೆ ರಾತ್ರಿಯೆಲ್ಲ ನಡೆಯತೊಡಗಿತ್ತು. ದಾಸಿಯೊಬ್ಬಳು ರಾಮನ ನೆನೆಯುತ್ತ ಮೈಮರೆತು ತೇಲಾಡುವುದನ್ನು ಕಂಡು ಮಂಥರೆ ಚಕಿತಾಳದಳು. ರಾಮನ ಪಟ್ಟಾಭಿಷೇಕದ ವಿಷಯ ತಿಳಿದು ತುಳಿದ ಸರ್ಪದಂತೆ ಬುಸುಗುಡುತ್ತ ಕೈಕೇಯಿ ಇದ್ದಲ್ಲಿಗೆ ಬಂದಳು. ನಡೆದ ಘಟನೆ ವಿವರಿಸಿದಳು. ಕೈಕೇಯಿ ಸಂತೋಷದಿಂದ ನೆಲಬಿಟ್ಟು ಆಗಸಕ್ಕೆ ನೆಗೆದಿದ್ದಳು. ಬೆಲೆಬಾಳುವ ಕೊರಳಮಾಲೆಯನ್ನು ಮಂಥರಗೆ ನೀಡಿದಳು. ಮಂಥರೆ ಸಿಟ್ಟಿನಿಂದ ಅದನ್ನು ಕಿತ್ತೆಸದಳು. ಮಂಥರೆ ಅನರ್ಥ, ಅಪಾರ್ಥಗಳನ್ನೆಲ್ಲ ಕೈಕೇಯಿ ತಲೆಗೆ ತುಂಬಿ ಅವಳನ್ನು ನೆಲಕ್ಕೆಳೆದಳು. ರಾಮ ಮೇಲಕ್ಕೆ ಎಳೆದರೆ ಮಂಥರೆ ಪಾತಾಳಕ್ಕೆ ತಳ್ಳಿದಳು.

‘ರಾಮ ಪಟ್ಟವನ್ನು ಸ್ವೀಕರಿಸಿದರೆ ಕೌಸಲ್ಯಾ ರಾಜಮಾತೆಯಾಗುತ್ತಾಳೆ. ನೀನು ಅವಳ ದಾಸಿಯಾಗುವೆ. ಸೂರ್ಯವಂಶ ಪರಂಪರೆಯಲ್ಲಿ ಮುಂದೆ ರಾಮನ ಮಕ್ಕಳೇ ಉಳಿಯುತ್ತಾರೆ. ಭರತ ಹೇಳ ಹೆಸರಿಲ್ಲದಂತೆ ಮರೆಯಾಗುತ್ತಾನೆ. ಭರತನನ್ನು ದೂರ ಇಡುವ ಉದ್ದೇಶದಿಂದಲೇ ನಿನ್ನ ತಂದೆ ಕೇಕಯದೇಶದ ಅಶ್ವಪತಿಯನ್ನು ಈ ಕಾರ್ಯಕ್ರಮದಿಂದ ದೂರ ಇಟ್ಟಿದ್ದಾರೆ. ಗಡಿಬಿಡಿಯಲ್ಲಿ ರಾಮನಿಗೆ ಪಟ್ಟ ಕಟ್ಟುವ ಗುಟ್ಟಾದರೂ ಏಕೆ ಬೇಕಿತ್ತು?’ ಎಂದೆಲ್ಲ ತಲೆಕೆಡಿಸಿದಳು. ಮುಂದೆ ಕೈಕೇಯಿ ವರ ಬೇಡಿದಳು. ರಾಮನಿಗೆ ವನವಾಸ ನಿಶ್ಚಯವಾಯಿತು.

ನಮಗೆ ಉಳಿಯುವ ಪ್ರಶ್ನೆ ಮಂಥರೆಯ ದ್ವೇಷ, ಅಸಹನೆಯ ಹಿಂದಿನ ಕಾರಣವೇನು ಎಂದು. ಸಹಜವಾಗಿ ಊಹಿಸಬಹುದಾದದ್ದು ಆಕೆಯಲ್ಲಿ ಇಂದಿನ ಬುದ್ಧಿಜೀವಿಗಳಂತೆ ಸ್ವಹಿತಾಸಕ್ತಿ ಇತ್ತು. ಕೌಸಲ್ಯೆ ರಾಜಮಾತೆಯಾದರೆ ತನ್ನ ಗಂಜಿಗೆ ತೊಂದರೆ ಆಗಬಹುದು ಎಂಬ ಆತಂಕ. ಅಂತೆಯೇ ತಾನು ಯಜಮಾನಿ ಕೈಕೇಯಿಗೆ ನಿಷ್ಠಳೆಂದು ತೋರಿಸಿಕೊಳ್ಳಲು ಈ ಘಟನೆಯನ್ನು ಬಳಸಿಕೊಂಡಳು ಎನ್ನಬಹುದು. ಆದರೆ ವಿಚಿತ್ರ ಕಾರಣವೊಂದನ್ನು ವ್ಯಾಸರ ಅಗ್ನಿರಾಮಾಯಣ ತಿಳಿಸುತ್ತದೆ.

ಪಾದೌ ಗೃಹೀತ್ವಾ ರಾಮೇಣ ಕರ್ಷಿತಾ ಸಾಪರಾಧತಃ|
ತೇನ ವೈರೇಣ ಸಾ ರಾಮವನವಾಸಂ ಚ ಕಾಂಕ್ಷತಿ||

ಎಳವೆಯಲ್ಲಿ ರಾಮ ತನ್ನವರೊಡನೆ ಆಟವಾಡುತ್ತಿದ್ದ. ಆಗ ತಿಳಿಯದೆ ನಡುವೆ ಬಂದ ಮಂಥರೆಯ ಪಾದ ಹಿಡಿದೆಳೆದು ಬೀಳಿಸಿದ್ದ. ಸುತ್ತಲಿನವರು ಜೋರು ಜೋರಾಗಿ ನಕ್ಕಿದ್ದರು. ಕುಬ್ಜೆ ಮಂಥರೆಗೆ ಅಪಮಾನವೆನಿಸಿತು. ದೇಹದ ವಿಕಾರ ದೋಷವೆನಿಸದು. ಆದರೆ ವಿಕಾರಸ್ವಭಾವ ಉರಳಿಸುವಂಥದ್ದು. ಅಂದೇ ಎದೆಯಲ್ಲಿ ನೆಟ್ಟ ಸೇಡಿನ ಮುಳ್ಳು ಎರಡು ದಶಕಗಳ ಬಳಿಕ ರಾಮನ ಪಟ್ಟವನ್ನು ಕಿತ್ತುಕೊಂಡಿತು. ದೇಶವೇ ಹಚ್ಚಿಕೊಂಡ ರಾಮನನ್ನು ಮಂಥರೆ ಮೆಚ್ಚಲಿಲ್ಲ. ಕೊನೆಗೆ ಕೆಟ್ಟವಳೆಂಬ ಪಟ್ಟ ಗಟ್ಟಿಯಾಗಿ ಅಂಟಿಕೊಂಡದ್ದು ಕೈಕೇಯಿಗೆ. ಅಲ್ಪರ ಸಂಗ ಅಭಿಮಾನ ಭಂಗ ಎಂಬುದು ಸುಳ್ಳಲ್ಲವಲ್ಲವೇ?

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net