

ಕಳಸ: ಸಂಸ್ಥೆಯ ಬೆಳವಣಿಗೆ ಎಷ್ಟು ಮುಖ್ಯವೋ ಅದರ ಜತೆಗೆ ವೈಯಕ್ತಿಕವಾದ ಬೆಳವಣಿಗೆಯೂ ಅತೀ ಮುಖ್ಯ ಎಂದು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಹೇಳಿದರು.
ಕಳಸ ಜೆಸಿಐ ಘಟಕದಿಂದ ಭಾನುವಾರ ಆಯೋಜಿಸಿದ್ದ ಜೆಸಿಐ ವಲಯ 14ರ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಿಮ್ಮ ನಿತ್ಯ ಜೀವನದಲ್ಲೂ ಒಬ್ಬ ನಿಷ್ಠಾವಂತ, ಪ್ರಾಮಾಣಿಕ, ಸಹೃದಯ ಜೇಸಿ ಆಗಿರುವುದನ್ನು ನೀವು ನಿಮ್ಮೊಳಗೆ ಜೀವಂತವಾಗಿ ಉಳಿಸಿಕೊಂಡಿರುವುದು ಹೌದಾದರೆ ಮಾತ್ರ ಅದು ನಿಜವಾದ ಬೆಳವಣಿಗೆ ಮತ್ತು ಅಭಿವೃದ್ಧಿ ಎಂದರು.
ಪ್ರತಿಯೊಬ್ಬ ವ್ಯಕ್ತಿ ಉತ್ತಮ ನಾಗರಿಕನಾದರೆ ಸುಸಂಸ್ಕೃತ ಸಮಾಜ ತನ್ನಿಂದ ತಾನೇ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯನ್ನು ರಾಮನನ್ನಾಗಿ ಮಾಡಲು ಹೋಗಬೇಡಿ. ಪ್ರತಿಯೊಬ್ಬ ವ್ಯಕ್ತಿಯು ರಾಮನಾಗುವಂತೆ ಪರಿವರ್ತನೆ ಮಾಡುವುದೇ ನಿಜವಾದ ಅಭಿವೃದ್ಧಿ, ಬೆಳವಣಿಗೆ ಎಂದು ಹೇಳಿದರು.
ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಕಾರ್ತಿಕೇಯನ್ ಮಾತನಾಡಿ, ಕಳಸದಂತ ಗ್ರಾಮೀಣ ಪ್ರದೇಶದ ಘಟಕಗಳಿಂದಲೇ ಇಂದು ಜೆಸಿಐ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕಳಸದಂತಹ ಗ್ರಾಮೀಣ ಪ್ರದೇಶದಲ್ಲಿ ಜೆಸಿಐ ಸಂಸ್ಥೆಯನ್ನು ಅಚ್ಚುಕಟ್ಟಾಗಿ ಬೆಳಿಸಿಕೊಂಡು ಹೋಗಲಾಗುತ್ತಿದೆ. ಜೆಸಿಐ ಒಂದು ವ್ಯಕ್ತಿತ್ವ ವಿಕಸನ ಸಂಸ್ಥೆ. ಸಂಸ್ಥೆಯನ್ನು ಬೆಳೆಸುವ ಜತೆಗೆ ವ್ಯಕ್ತಿತ್ವವನ್ನೂ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ ಎಂದು ಸಲಹೆ ನೀಡಿದರು.
ಸಾಧನೆ ಮಾಡಿದ 10 ಘಟಕಗಳಿಗೆ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಕಾರ್ತಿಕೇಯನ್ ಪ್ರಶಸ್ತಿ ನೀಡಿದರು. ಜೇಸಿ ಕೆ.ಡಿ.ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಉಪಾಧ್ಯಕ್ಷ ಭರತ್ ಆಚಾರ್ಯ, ವಲಯ ಅಧ್ಯಕ್ಷೆ ಯಶಸ್ವಿನಿ, ವಲಯ ಉಪಾಧ್ಯಕ್ಷರಾದ ಎಚ್.ಆರ್.ಪ್ರಶಾಂತ್, ನೆಲ್ಸನ್, ಕಳಸ ಜೆಸಿಐ ಅಧ್ಯಕ್ಷ ಚರಣ್ ಭಂಡಾರಿ, ಕಾರ್ಯದರ್ಶಿ ಶ್ರೀಕಾಂತ್ ಇತರರಿದ್ದರು.