

ಜಗತ್ತಿನಾದ್ಯಂತ ಖ್ಯಾತಿ ಗಳಿಸಿರುವ ‘ಬೆಂಗಳೂರು ಗುಲಾಬಿ ಈರುಳ್ಳಿ’ಗೆ (ರೋಸ್ ಆನಿಯನ್) 2015ರಲ್ಲಿ ಜಿಐ ಟ್ಯಾಗ್ ದೊರೆತಿದೆ. ಅಷ್ಟೇ ಅಲ್ಲ, ಬೆಂಗಳೂರು ಗುಲಾಬಿ ಈರುಳ್ಳಿ ಮೇಲಿನ ರಫ್ತು ಸುಂಕಕ್ಕೆ ಕೇಂದ್ರ ಸರ್ಕಾರವು 2023ರಲ್ಲೇ ಷರತ್ತು ಬದ್ಧ ವಿನಾಯಿತಿ ನೀಡಿದೆ. ಇದರಿಂದಾಗಿ, ಈರುಳ್ಳಿ ಬೆಳೆಗಾರರು ಹಾಗೂ ವ್ಯಾಪಾರಿಗಳು ರಫ್ತು ಸುಂಕವಿಲ್ಲದೆ ‘ಬೆಂಗಳೂರು ಈರುಳ್ಳಿಯನ್ನು ವಿದೇಶಕ್ಕೆ ರಫ್ತು ಮಾಡಬಹುದಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರದ 16 ತಾಲೂಕುಗಳಲ್ಲಿ ಬೆಳೆಯುವ ಈ ಗುಲಾಬಿ ಈರುಳ್ಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಸುಮಾರು 5 ಸಾವಿರ ಎಕರೆಯಲ್ಲಿ ರಫ್ತು ಮಾರುಕಟ್ಟೆಗೆ ಪ್ರತ್ಯೇಕವಾಗಿ ಬೆಳೆಯಲಾಗುತ್ತದೆ. ಮಲೇಷ್ಯಾ, ಥಾಯ್ಲೆಂಡ್, ಸಿಂಗಾಪುರ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ತೈವಾನ್ಗೆ ರಫ್ತಾಗುತ್ತದೆ. ಉಪ್ಪಿನಕಾಯಿ, ಮಸಾಲೆ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ವಿಶಿಷ್ಟ ಗುಣಮಟ್ಟ ಮತ್ತು ರುಚಿಗೆ ಈ ಈರುಳ್ಳಿ ಖ್ಯಾತಿಯಾಗಿದೆ. ವಾರ್ಷಿಕ ಉತ್ಪಾದನೆ 65 ಸಾವಿರ ಟನ್ಗಳಿಗಿಂತ ಹೆಚ್ಚಿದೆ. ಈ ಪೈಕಿ ಶೇಕಡ 50ಕ್ಕಿಂತಲೂ ಹೆಚ್ಚು ಅಂದರೆ 30 ಸಾವಿರ ಟನ್ಗೂ ಅಧಿಕ ಈರುಳ್ಳಿ ವಿದೇಶಗಳಿಗೆ ರಫ್ತಾಗುತ್ತದೆ.
ಈರುಳ್ಳಿ ಅಥವಾ ನೀರುಳ್ಳಿ ಹೆಚ್ಚುವಾಗ ಕಣ್ಣೀರು ಬರುವುದು ಸಾಮಾನ್ಯ. ಆದರೆ, ಕುಮಟಾದ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದಿಲ್ಲ. ಅಷ್ಟೇ ಅಲ್ಲ, ಇತರೆಡೆಯಲ್ಲಿನ ಈರುಳ್ಳಿ ಖಾರವಾದರೆ ಕುಮಟಾದ ಈರುಳ್ಳಿ ರುಚಿಯಲ್ಲಿ ಸಿಹಿ! ಕುಮಟಾ ತಾಲೂಕಿನ ವನ್ನಳ್ಳಿ, ಅಳ್ವೆಕೋಡಿ, ಹಂದಿಗೋಣ ಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಹೋಟೆಲ್ಗಳಲ್ಲಿ ಸಲಾಡ್ ತಯಾರಿಕೆಗೆ ಇದನ್ನು ಬಳಸಲಾಗುತ್ತದೆ. ಈ ಸಿಹಿ ಈರುಳ್ಳಿ ಮಹಾರಾಷ್ಟ್ರ, ಕೇರಳ, ಗೋವಾಕ್ಕೆ ರಫ್ತಾಗುತ್ತಿದೆ. ಈರುಳ್ಳಿಯ ಒಣಗಿದ ಎಲೆಯನ್ನೆಲ್ಲ ಸೇರಿಸಿ ಜಡೆಯಂತೆ ಹೆಣೆದು ತಯಾರಿಸುವ ಕಲಾತ್ಮಕ ಗುಚ್ಛ ನೋಡುವುದೇ ಸೊಗಸು. ಮುಂಗಾರು ಭತ್ತದ ಕೊಯಿಲು ಮುಗಿಯುತ್ತಿದ್ದಂತೆ ಈ ಪ್ರದೇಶದ ರೈತರು ಈ ಈರುಳ್ಳಿಯನ್ನು ಬೆಳೆಯುತ್ತಾರೆ. ಫೆಬ್ರವರಿಯಿಂದ ಮೇವರೆಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕುಮಟಾ-ಹೊನ್ನಾವರದ ರಾಷ್ಟ್ರೀಯ ಹೆದ್ದಾರಿಯ ವ್ಯಾಪಾರಸ್ಥರಿಗೆ ಇದು ಆರ್ಥಿಕ ಪುನಶ್ಚೇತನವನ್ನೂ ನೀಡಿದೆ.
ಕೃಷಿಯ ವಿವಿಧ ಆಯಾಮಗಳಲ್ಲಿ ತನ್ನದೇ ಆದ ವಿಶಿಷ್ಟ ಮೈಲಿಗಲ್ಲುಗಳನ್ನು ಸೃಷ್ಟಿಸಿರುವ ಕರ್ನಾಟಕ ಸಾಂಪ್ರದಾಯಿಕ ಕೃಷಿಯೊಂದಿಗೆ ಹೊಸ ಆವಿಷ್ಕಾರಗಳನ್ನು ಒಳಗೊಳ್ಳುತ್ತಿದೆ. ಹೀಗಾಗಿ, ರಾಜ್ಯದ ಯಾವುದೇ ಭಾಗಕ್ಕೂ ಹೋದರೂ ಕೃಷಿಯಲ್ಲಿನ ಹೊಸ ಪ್ರಯೋಗಗಳು, ಹೊಸ ತಳಿಗಳು, ಪ್ರಸಿದ್ಧ ಉತ್ಪನ್ನಗಳು ಗಮನ ಸೆಳೆಯುತ್ತವೆ. ಆಹಾರಧಾನ್ಯ ಮತ್ತು ವಾಣಿಜ್ಯ ಬೆಳೆಗಳು ಮಾತ್ರವಲ್ಲದೆ ತರಕಾರಿ ಬೆಳೆಯುವಲ್ಲಿಯೂ ರಾಜ್ಯ ಮುಂಚೂಣಿಯಲ್ಲಿದೆ. ಈ ತರಕಾರಿಗಳು ಸ್ಥಳೀಯ ರೈತರಿಗೆ ಆರ್ಥಿಕ ಚೈತನ್ಯವನ್ನು ಒದಗಿಸುವ ಜತೆಗೆ, ಶ್ರೀಸಾಮಾನ್ಯರಿಗೆ ಪೌಷ್ಟಿಕಾಂಶಗಳನ್ನು, ರುಚಿಯ ವೈವಿಧ್ಯತೆಯನ್ನು ಒದಗಿಸುತ್ತಿವೆ.
ಮಟ್ಟುಗುಳ್ಳ ಬದನೆಕಾಯಿ ತನ್ನ ವಿಶಿಷ್ಟ ರುಚಿಗೆ ಹೆಸರಾಗಿದೆ. ಗುಳ್ಳ ಎಂದರೆ ತುಳು ಭಾಷೆಯಲ್ಲಿ ಚಿಕ್ಕದು ಎಂಬರ್ಥ. ಉಡುಪಿಯಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಮಟ್ಟು ಎಂಬ ಗ್ರಾಮದಲ್ಲಿ ಇದನ್ನು ಬೆಳೆಯುವುದರಿಂದ ಇದಕ್ಕೆ ಮಟ್ಟುಗುಳ್ಳ ಎಂಬ ಹೆಸರು ಬಂದಿದೆ. ಪ್ರಸ್ತುತ ಮಟ್ಟು, ಕೈಪುಂಜಾಲು, ಕಟಪಾಡಿ, ಕೋಟೆ, ಪಾಂಗಳ, ಅಲಿಂಜ, ಅಂಬಾಡಿ ಮತ್ತು ಉಳಿಯರಗೋಳಿ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.
2011ರಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿರುವ ಮಟ್ಟುಗುಳ್ಳ ಬದನೆಗೆ ಭಾರಿ ಬೇಡಿಕೆ ಇದೆ. ದುಂಡುಗಿನ ಆಕಾರ, ತಿಳಿ ಹಸಿರು ಬಣ್ಣ ಮತ್ತು ಹೊರಮೈಮೇಲೆ ಮಸುಕಾದ ಪಟ್ಟಿಗಳಿರುವ ಈ ಗುಳ್ಳದಲ್ಲಿ ಬೀಜಗಳು ಕಡಿಮೆ, ತಿರುಳು ಹೆಚ್ಚು. 15ನೇ ಶತಮಾನದಲ್ಲಿ ಸಂತ ವಾದಿರಾಜರು ಮುಟ್ಟುವಿನ ರೈತರಿಗೆ ಮಟ್ಟುಗುಳ್ಳದ ಬೀಜಗಳನ್ನು ನೀಡಿದರು. ಹಾಗಾಗಿ ಇದನ್ನು ‘ವಾದಿರಾಜ ಗುಳ್ಳ’ ಎಂದೂ ಕರೆಯಲಾಗುತ್ತದೆ. ಉಡುಪಿಯಲ್ಲಿ ಮೊದಲ ಬೆಳೆಯನ್ನು ಶ್ರೀಕೃಷ್ಣನಿಗೆ ಅರ್ಪಿಸುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ಉಡುಪಿ ಕೃಷ್ಣ ಮಠದಲ್ಲಿ ಮಟ್ಟುಗುಳ್ಳದಿಂದ ಮಾಡಿದ ಸಾಂಬಾರನ್ನು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಂಬಾರ್, ಪೋಡಿ, ಗೊಜ್ಜು ಮತ್ತು ಗ್ರೇವಿ ಪದಾರ್ಥ ಮಾಡಲು ಈ ಬದನೆಯನ್ನು ಬಳಸಲಾಗುತ್ತದೆ. ಗುಳ್ಳ ವಾಂಗಿಭಾತ್ ಕೂಡ ಪ್ರಸಿದ್ಧವಾಗಿದೆ. ಮಟ್ಟುಗುಳ್ಳವನ್ನು ಅಕ್ಟೋಬರ್ನಿಂದ ಮೇವರೆಗೆ ಬೆಳೆಯಲಾಗುತ್ತದೆ. ವಾರ್ಷಿಕ ಸರಾಸರಿ 1,800 ಟನ್ಗಳ ಇಳುವಳಿ ಹೊಂದಿದೆ. ಭಾರತೀಯ ಅಂಚೆ ಇಲಾಖೆ ಮಟ್ಟುಗುಳ್ಳದ ಅಂಚೆಚೀಟಿ ಮತ್ತು ವಿಶೇಷ ಕವರ್ನ್ನು ಮುದ್ರಿಸಿದೆ.