ಶಿಕ್ಷಣದ ಜತೆಗೆ ಸಂಸ್ಕಾರ ಗುಣಗಳನ್ನೂ ಕಲಿಸಿ

9-ಎಸ್ಕೆಪಿ-1-ಶಿಕ್ಷಕರ-ದಿನಾಚರಣೆ-ಉದ್ಘಾಟನೆ
ಶಿಕಾರಿಪುರದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಶಾಸಕ ಬಿ.ವೈ.ವಿಜಯೇಂದ್ರ, ಡಾ. ಧನಂಜಯ ಸರ್ಜಿ, ಶೈಲಾ ಮಡ್ಡಿ, ರೂಪಾ ಮಂಜುನಾಥ್ ಇತರರಿದ್ದರು.
Published on

ಶಿಕಾರಿಪುರ: ಶಿಕ್ಷಣ, ಉದ್ಯೋಗ ಕಲ್ಪಿಸುವ ಜತೆಯಲ್ಲಿ ಸಂಸ್ಕಾರ ಒದಗಿಸುವುದು ಅತ್ಯಂತ ಅವಶ್ಯಕ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಬೆಳೆಸುವ ಶಿಕ್ಷಣದ ಅಗತ್ಯವಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಕೌಶಲ ಕಲಿಕೆಗೆ ಪೂರಕವಾದ, ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡುವ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ರಾಷ್ಟ್ರೀಯತೆ, ದೇಶಭಕ್ತಿ ಹಾಗೂ ಸಾಮಾಜಿಕ ಕಳಕಳಿ ಸೃಜಿಸುವ ಶಿಕ್ಷಣವನ್ನು ಮಕ್ಕಳಿಗೆ ಒದಗಿಸಬೇಕು ಎಂದು ತಿಳಿಸಿದರು.
ಶಿಕ್ಷಕ ವೃತ್ತಿಯು ಒಂದು ಸೇವೆ. ಮೌಲ್ಯಯುತ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿಯೂ ಒಂದು. ಭೇದ ಭಾವ ಇಲ್ಲದೆ ಎಲ್ಲರನ್ನು ಸಮನಾಗಿ ನೋಡುವ ಕೇಂದ್ರ ಎಂದರೆ ಅದು ಶಾಲೆ. ಗುರು ಇರದೆ ಗುರಿ ತಲುಪಲು ಸಾಧ್ಯವಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಉತ್ತಮವಾಗಿದೆ. ಎಲ್ಲ ಮಕ್ಕಳಿಗೂ ಶಿಕ್ಷಣ ನೀಡುವ ದೃಷ್ಟಿಯಲ್ಲಿ ಸರ್ಕಾರದ ಅನೇಕ ಯೋಜನೆಗಳಿವೆ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಾವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಶೈಕ್ಷಣಿಕ ಸೌಲಭ್ಯ, ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳನ್ನು ಸ್ಥಾಪಿಸಲು ಹೆಚ್ಚಿನ ಅನುದಾನ ನೀಡಿದರು. ಈಗ ವಿಮಾನ ನಿಲ್ದಾಣ ಕಾರ್ಯ ನಿರ್ವಹಿಸುತ್ತಿದೆ. ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಗುರುಪರಂಪರೆಗೆ ಸಮಾಜದಲ್ಲಿ ವಿಶೇಷ ಗೌರವವಿದೆ. ಸನ್ಮಾರ್ಗದಲ್ಲಿ ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವವರು ಗುರುಗಳು. ಶಿಕ್ಷಕರೆಂದರೆ ಅದ್ಭುತ ಶಕ್ತಿ. ಅಕ್ಷರ ಕಲಿಸುವ ಅವರ ಕಾರ್ಯ ಶ್ರೇಷ್ಠ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಶಿಕಾರಿಪುರದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ಹಾಸ್ಟೆಲ್‌ಗಳನ್ನು ಆರಂಭಿಸಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಇರುವ ಕ್ಯಾಂಪಸ್‌ನಂತೆ ಶಿಕಾರಿಪುರ, ಶಿರಾಳಕೊಪ್ಪದಲ್ಲಿ ಪ್ರಥಮದರ್ಜೆ ಕಾಲೇಜುಗಳ ಕ್ಯಾಂಪಸ್ ನಿರ್ಮಿಸಲಾಗಿದೆ ಎಂದರು.
ಕೊಟ್ರೇಶ್ವರಪ್ಪ, ಆರ್.ಎಂ.ಘಾಸಿ ಹಾಗೂ ಜಿ.ಎನ್.ಮಾಲತೇಶ್ ಸಂಗ್ರಹದ ನಮ್ಮ ಹೆಮ್ಮೆಯ ಶಿಕಾರಿಪುರ ಪುಸ್ತಕ ಬಿಡುಗಡೆ ಮಾಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸದಸ್ಯ ನಾಗರಾಜ ಗೌಡ, ಪ್ರಭಾರ ಇಒ ಕಿರಣ್‌ಕುಮಾರ್ ಹರ್ತಿ, ಬಿಇಒ ಲೋಕೇಶಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಧುಕೇಶ್ವರ್, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇರಪ್ಪ, ಬಸವರಾಜ್, ಎಂ.ಜಿ.ಪ್ರಕಾಶ್, ಮಂಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net