

ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕರೊನಾ ಸಂಕಷ್ಟ ಎದುರಿಸಲಾಗದೆ ಕೃಷಿ ಮೂಲಕ ಹೊಸ ಬದುಕು ಕಟ್ಟಿಕೊಳ್ಳುವ ಆಸೆ ಹೊತ್ತು ಮತ್ತೆ ಹಳ್ಳಿ ಸೇರಿರುವವರಿಗೆ ಸಲಹೆ, ಸಹಕಾರ ನೀಡುವುದಕ್ಕಾಗಿ ರೈತಮಿತ್ರರು ಬರಲಿದ್ದಾರೆ!
ಕೃಷಿಕರಿಗೆ ಕಾಲಕಾಲಕ್ಕೆ ನೆರವಾಗುವ ಉದ್ದೇಶದಿಂದ ರೈತಮಿತ್ರರನ್ನು ನೇಮಕ ಮಾಡಿಕೊಳ್ಳಲು ತೀರ್ವನಿಸಿರುವ ಸರ್ಕಾರ ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದೆ.
ಕರೊನಾ ಬಂದ ನಂತರ ಮಹಾನಗರಗಳಿಂದ ಲಕ್ಷಾಂತರ ಜನ ಮರಳಿ ಹಳ್ಳಿ ಸೇರಿದ್ದಾರೆ. ಅವರಲ್ಲಿ ಬಹುತೇಕರು ಕೃಷಿ ಅವಲಂಬಿಸುವ ಕಡೆ ಹೆಚ್ಚು ಆಕರ್ಷಿತರಾಗಿದ್ದಾರೆ. ಅವರನ್ನು ಬಳಸಿಕೊಳ್ಳುವುದು ಹಾಗೂ ಅವರಿಗೆ ನೆರವು ನೀಡುವುದು ರೈತಮಿತ್ರ ನೇಮಕದ ಉದ್ದೇಶ. ಪ್ರಧಾನಮಂತ್ರಿಗಳ ಆಶಯ ಕೂಡ ರೈತರ ಆದಾಯ ದ್ವಿಗುಣವಾಗ ಬೇಕೆಂಬುದಾಗಿದೆ. ಅದಕ್ಕೆ ತಕ್ಕಂತೆ ಕೃಷಿ ಕ್ಷೇತ್ರವನ್ನು ಸಜ್ಜುಗೊಳಿಸಬೇಕಾಗಿದೆ. ರೈತರಿಗೆ ಕಾಲಕಾಲಕ್ಕೆ ಬೇಕಾದ ಮಾಹಿತಿ ನೀಡುವುದು, ಸಮಗ್ರ ಕೃಷಿ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ. ರೈತರಿಗೆ ತಾಂತ್ರಿಕ ನೆರವು, ಉತ್ತಮ ಬಿತ್ತನೆ ಬೀಜದ ಮಾಹಿತಿ ನಿಖರವಾಗಿರಬೇಕು. ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಕೃಷಿ ವಿಷಯದಲ್ಲಿ ಡಿಪ್ಲೊಮಾ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಹೋರಾಟದ ಮೂಲಕ ಹುದ್ದೆಗಾಗಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದರು. ಹೀಗಾಗಿ ರೈತಮಿತ್ರ ನೇಮಕದ ಮೂಲಕ ಎರಡು ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.
ಅಧಿಕಾರಿಗಳಿಗೆ ಸಹಾಯ: ಪ್ರತಿ 2 ಗ್ರಾಮ ಪಂಚಾಯಿತಿಗೆ ಒಬ್ಬರಂತೆ ರೈತಮಿತ್ರರನ್ನು ನೇಮಕ ಮಾಡಲು ಸರ್ಕಾರ ಉದ್ದೇಶಿಸಿದೆ. ರಾಜ್ಯದಲ್ಲಿ 6024 ಗ್ರಾಪಂಗಳಿದ್ದು, 3012 ಜನರ ನೇಮಕ ಮಾಡಬೇಕಾಗಿದೆ. ಈಗ ಆರ್ಥಿಕ ಇಲಾಖೆ 2236 ಜನರ ನೇಮಕಕ್ಕೆ ಅನುಮೋದನೆ ನೀಡಿದೆ. ಉಳಿದ ಹುದ್ದೆಗಳಿಗೆ ತಡವಾಗಿ ನೇಮಕವಾಗಲಿದೆ. ಹೋಬಳಿ ಕೇಂದ್ರಗಳಲ್ಲಿ ಇರುವ ರೈತ ಸಂಪರ್ಕ ಕೇಂದ್ರ ರೈತಮಿತ್ರರ ಕಚೇರಿಯಾಗಿರುತ್ತದೆ. ಹಳ್ಳಿಹಳ್ಳಿಗೂ ಹೋಗಿ ರೈತರನ್ನು ಸಂರ್ಪಸಿ ಕೊಂಡಿಯಂತೆ ಕೆಲಸ ಮಾಡಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಈಗ ಸಹಾಯಕ ಕೃಷಿ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದು ಅವರನ್ನು ವಿಸ್ತರಣೆಯ ಕೆಲಸಗಳಿಗೆ ಬಳಸಲು ಇದರಿಂದ ಸಹಾಯವಾಗುತ್ತದೆ. ಈಗ ಕೃಷಿ ಕ್ಷೇತ್ರದಲ್ಲಿ ವಿಸ್ತರಣೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ.
ಜಿಲ್ಲೆಗೊಬ್ಬ ಪ್ರೊಫೆಸರ್
ರೈತಮಿತ್ರ ನೇಮಕದ ಜತೆಗೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಇರುವ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರನ್ನು ರೈತರ ಬಳಿ ಕಳುಹಿಸಲು ಸರ್ಕಾರ ಯೋಜನೆ ರೂಪಿಸಿಕೊಂಡಿದೆ. ಕೃಷಿ ವಿವಿ ಪ್ರಾಧ್ಯಾಪಕರಿಗೆ ತಲಾ ಒಂದು ಜಿಲ್ಲೆಯ ಉಸ್ತುವಾರಿ ನೀಡಲಾಗುತ್ತದೆ. ಸಹಾಯಕ ಪ್ರಾಧ್ಯಾಪಕರಿಗೆ ತಾಲೂಕು ಉಸ್ತುವಾರಿ ಇರುತ್ತದೆ. ಇವರು ಆಯಾ ಪ್ರದೇಶಕ್ಕೆ ತಕ್ಕಂತೆ ವ್ಯವಸಾಯಕ್ಕೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ರಾಜ್ಯದ ವಿವಿಗಳಲ್ಲಿ ನಡೆದಿರುವ ಸಂಶೋಧನೆಗಳನ್ನು ಸಹ ರೈತರಿಗೆ ತಿಳಿಸಲಿದ್ದಾರೆ. ಈ ಬಗ್ಗೆ ಕುಲಪತಿಗಳು ಸಹ ಸಮ್ಮತಿ ನೀಡಿದ್ದಾರೆ.
ಯಾರೀ ರೈತಮಿತ್ರ?
ಹಿಂದೆ ಹೋಬಳಿ ಕೇಂದ್ರದಲ್ಲಿದ್ದ ಕೃಷಿ ಸಹಾಯಕರು ರೈತರಿಗೆ ಬೇಕಾದ ಸಲಹೆ, ಸೂಚನೆ ನೀಡುತ್ತಿದ್ದರು. ಆದರೆ ಕೆಲ ವರ್ಷಗಳ ಹಿಂದೆಯೇ ಈ ಹುದ್ದೆಯನ್ನು ರದ್ದು ಮಾಡಲಾಗಿದೆ. ಇದೀಗ ರೈತಮಿತ್ರ ಹೆಸರಿನಲ್ಲಿ ಆ ಹುದ್ದೆಗಳಿಗೆ ನೇಮಕ ನಡೆಯಲಿದೆ.
ಯಾವಾಗ ನೇಮಕ?
ರೈತಮಿತ್ರರ ನೇಮಕಕ್ಕೆ ವೃಂದ ಮತ್ತು ನೇಮಕಾತಿ ನಿಯಮಾವಳಿ ಸಿದ್ಧವಾದ ಕೂಡಲೇ ನೇಮಕಾತಿ ನಡೆಯಲಿದೆ. ನೇರ ನೇಮಕಾತಿ ಮಾಡುವ ಸಾಧ್ಯತೆಗಳಿದ್ದು, 18 ರಿಂದ 20 ಸಾವಿರ ರೂ. ವೇತನ ನಿಗದಿಯಾಗಬಹುದು. ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಮೂಲಗಳು ಹೇಳಿವೆ.
ಯುವಕರ ಬಳಕೆ
ಹಳ್ಳಿಗಳ ಕಡೆ ಮರುವಲಸೆ ಹೋಗಿರುವ ಯುವಕರಲ್ಲಿ ಎಷ್ಟು ಜನ ಮತ್ತೆ ಕೃಷಿಗೆ ಹೊಂದಿಕೊಳ್ಳುವರೋ ಗೊತ್ತಿಲ್ಲ, ಆದರೆ ಈ ಯುವಕರನ್ನು ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದಕ್ಕೆ ಬಳಸಲು ಯೋಜನೆ ರೂಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆದರೆ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಯೋಜನೆ ರೂಪಿಸುವುದು ಸರ್ಕಾರದ ನಿರ್ಧಾರವಾಗಿದೆ.